ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮಾತಾಡುವುದೇ ದೊಡ್ಡ ಸಾಧನೆ ಅಲ್ಲ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಎಬಿಸಿಡಿ ಕಲಿಯಲು ಆರಂಭಿಸಿದ್ದು ಐದನೇ ತರಗತಿಯಿಂದ. ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ್ದರಿಂದ  ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳುವಂತೆ ನನ್ನ ಶಿಕ್ಷಕರು ಸಲಹೆ ನೀಡಿದ್ದರು.
 
ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪಿಸಿಎಂಬಿ ತೆಗೆದುಕೊಂಡೆ. ಅಲ್ಲಿ ಇಂಗ್ಲಿಷ್‌ನಲ್ಲಿ ಮಾಡುತ್ತಿದ್ದ ಪಾಠ ಕೇಳಿ ಮೊದಲು ಬರುತ್ತಿತ್ತು. ತರಗತಿಯಲ್ಲೇ  ಅಧ್ಯಾಪಕರಿಗೆ ಕನ್ನಡದಲ್ಲಿ ಪಾಠ ಮಾಡುವಂತೆ ಕೇಳಿಕೊಂಡಿದ್ದೆ. `ಕೆಲ ಪದಗಳನ್ನು ಕನ್ನಡದಲ್ಲಿ ಹೇಳುವುದು ಕಷ್ಟ.
 
ನಿಮಗಾಗಿ ಇಂಗ್ಲಿಷ್ ಮಾಧ್ಯಮದವರಿಗೆ ಅನ್ಯಾಯ ಮಾಡಲು ಆಗದು. ನೀವು ಸ್ವಲ್ಪ ಕಷ್ಟಪಡಬೇಕು~ ಎಂದು ಅವರು ಕೈಚೆಲ್ಲಿದ್ದರು.

`ಪಿಯುಸಿ ಮುಗಿದರೆ ಸಾಕು, ನಂತರ ಬಿಎಗೆ ಸೇರಿಕೊಳ್ಳೋಣ~ ಎಂಬ ಆಲೋಚನೆ ಬಂದಿತ್ತು. ಕಷ್ಟಪಟ್ಟು ಪ್ರಥಮ ಪಿಯು ಪಾಸಾದೆ. ದ್ವಿತೀಯ ಪಿಯುಗೆ ಬಂದಾಗ ಸ್ವಲ್ಪ ದಿನ ಟ್ಯೂಷನ್‌ಗೆ ಹೋದೆ. ಕೊನೆಗೆ ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದೆ. ಸಿಇಟಿ ಕೂಡ ಬರೆದು, ಬಿಇ ಕಂಪ್ಯೂಟರ್ ಸೈನ್ಸ್ ಕೋರ್ಸಿಗೆ ಸೀಟು ಪಡೆದೆ.

ಎಂಜಿನಿಯರಿಂಗ್ ವಿಷಯಗಳು ಅರ್ಥವಾಗುತ್ತಿತ್ತು. ಆದರೆ ಇಂಗ್ಲಿಷ್‌ನಲ್ಲಿ ವಿವರಿಸಲು ಆಗುತ್ತಿರಲಿಲ್ಲ. ಆರನೇ ಸೆಮಿಸ್ಟರ್‌ವರೆಗೂ ನನ್ನ ಇಂಗ್ಲಿಷ್ ಸರಾಗವಿರಲಿಲ್ಲ. ಕಲಿಯುವಾಗಲೇ ಗಳಿಸುವ ಅನಿವಾರ್ಯತೆ ಇತ್ತು.
 
ಬೆಂಗಳೂರಿನ ಕ್ಯಾಪಿಟಲ್ ಕಂಪ್ಯೂಟರ್ಸ್‌ ಸೆಂಟರ್‌ನಲ್ಲಿ ಪಾರ್ಟ್‌ಟೈಮ್ ಕಂಪ್ಯೂಟರ್ ಪಾಠ ಮಾಡಲು ಸೇರಿಕೊಂಡೆ. ಹಣ ಗಳಿಸುವ ಒತ್ತಡದಲ್ಲಿ ಇಂಗ್ಲಿಷ್ ಕೈಕೊಡಲಿಲ್ಲ. ವ್ಯಾಕರಣಬದ್ಧವಾಗಿ ಇಂಗ್ಲಿಷ್ ಮಾತನಾಡದಿದ್ದರೂ ವಿಷಯ ಗೊತ್ತಿದ್ದರೆ ಎಲ್ಲೇ ಹೋದರೂ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎನ್ನಿಸಿತು.

ಕ್ಯಾಂಪಸ್ ಸಂದರ್ಶನದಲ್ಲಿ  ಆಯ್ಕೆಯಾಗಲಿಲ್ಲ. ಆದರೆ ಬೆಂಗಳೂರಿನ ಡಾನ್‌ಬಾಸ್ಕೋ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬೋಧಿಸುವ ಅವಕಾಶ ಸಿಕ್ಕಿತು. ಕನ್ನಡ ಮಾಧ್ಯಮದಲ್ಲಿ ಓದಿದ ನಾನು ಇಂಗ್ಲಿಷ್‌ಗೆ ಹೆದರುತ್ತಿದ್ದುದನ್ನು ಈಗ ನೆನಪಾಗುತ್ತದೆ.
 
ನಾನು ಬಿಇ ಓದಿದ್ದು, ಬಿ.ಇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅವಕಾಶ ಒದಗಿ ಬಂದದ್ದು ಎಲ್ಲವೂ ಕನಸು ಎಂದು ಭಾಸವಾಗುತ್ತದೆ. ಛಲ ಇದ್ದರೆ ಇಂಗ್ಲಿಷ್ ಸಮಸ್ಯೆಯೇ ಅಲ್ಲ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಸ್ನಾತಕೋತ್ತರ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ಬರೆದೆ. ಸತತ ಓದಿನ ಪರಿಣಾಮ ಸಿಇಟಿಯಲ್ಲಿ 172ನೇ ರ‌್ಯಾಂಕ್ ಸಿಕ್ಕಿತು.

ಮೈಸೂರಿನ ಜೆಸಿಇ ಕಾಲೇಜಿನಲ್ಲಿ ಸೀಟು ಸಿಕ್ಕಿತು. ನಾನು ಓದುವ ಕಾಲೇಜಿನಲ್ಲೇ ಎಂಸಿಎ (ಎಂಟೆಕ್) ವಿದ್ಯಾರ್ಥಿಗಳಿಗೆ ಒಂದು ವರ್ಷ ಕಾಲ ಉಪನ್ಯಾಸಕನಾಗಿ ಕೆಲಸ ಮಾಡಿದೆ.
ಎಂ.ಟೆಕ್ ಎರಡನೇ ಸೆಮಿಸ್ಟರ್‌ನಲ್ಲಿದ್ದಾಗ ಇಂಟೆಲ್ ಕಂಪೆನಿಗೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದೆ.
 

ಪ್ರಾಜೆಕ್ಟ್ ಮಾಡಲು ಬೆಂಗಳೂರಿಗೆ ಬಂದೆ. ತಿಂಗಳಿಗೆ 17 ಸಾವಿರ ರೂ ಶಿಷ್ಯವೇತನ ಸಿಕ್ಕಿತು. ಎರಡೇ ತಿಂಗಳಲ್ಲಿ ಕಂಪೆನಿ ಕಾಯಂ ಉದ್ಯೋಗದ ಆಹ್ವಾನ ನೀಡಿತು. 2ನೇ ರ‌್ಯಾಂಕ್‌ನೊಂದಿಗೆ ಎಂ.ಟೆಕ್ ಮುಗಿಸಿದೆ.
 

ನನ್ನ ಕಂಪೆನಿ ಇತ್ತೀಚೆಗಷ್ಟೇ ನನ್ನನ್ನು ಅಮೆರಿಕಕ್ಕೆ ತರಬೇತಿಗೆ ಮತ್ತು ಕಂಪೆನಿ ಕೆಲಸದ ಮೇಲೆ ಕಳುಹಿಸಿಕೊಟ್ಟಿತ್ತು.

ಇಂಗ್ಲಿಷ್‌ನಲ್ಲಿ ಸಲೀಸಾಗಿ ಮಾತಾಡುವುದು ದೊಡ್ಡ ಸಾಧನೆ ಅಲ್ಲ; ತಲೆಯಲ್ಲಿ ಜ್ಞಾನ ಇದ್ದರೆ ಸಾಕು. ಕನ್ನಡ ಮಾಧ್ಯಮದವರಿಗೆ ಇಂಗ್ಲಿಷ್ ಎಂದಿಗೂ ತೊಡಕಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ನನ್ನಂತಹ ನೂರಾರು ಮಂದಿ ಒಳ್ಳೆಯ ಬದುಕು ರೂಪಿಸಿಕೊಂಡಿದ್ದಾರೆ.
 
ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದರೆ ಇದಕ್ಕಿಂತ ಉನ್ನತ ಬದುಕು ಸಿಗುತ್ತಿತ್ತು ಎಂದು ನನಗೆ ಅನ್ನಿಸಿಲ್ಲ.  ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ನನ್ನ ವಾರಿಗೆಯ ಕೆಲವರು ಇಂದಿಗೂ ನಿರುದ್ಯೋಗಿಗಳಾಗಿರುವ ಉದಾಹರಣೆಗಳಿವೆ.

-ಬಿ.ಎನ್.ಪ್ರವೀಣ್ ಬೇಲೂರು, ಸಾಫ್ಟ್‌ವೇರ್ ಎಂಜಿನಿಯರ್, ಇಂಟೆಲ್ ಕಂಪೆನಿ
(ನಿರೂಪಣೆ: ಕೆ.ಎಂ.ಸಂತೋಷ್‌ಕುಮಾರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT