ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೆಚ್ಚು ತೆರಿಗೆ

ಸರ್ಕಾರಕ್ಕೆ ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಒತ್ತಾಯ
Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಗ್ರಾಮ ಹಾಗೂ ನಗರಗಳೆಂಬ ಭೇದಭಾವವಿಲ್ಲದೇ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮೇಲೆ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಬೇಕು' ಎಂದು ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಒತ್ತಾಯಿಸಿದರು.

ವಿಶ್ವಮಾನವ ರಾಷ್ಟ್ರಕವಿ  ಕುವೆಂಪು ಕಲಾನಿಕೇತನವು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ `ರಾಷ್ಟ್ರಕವಿ ಕುವೆಂಪು ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

`ಮಕ್ಕಳಿಗೆ ಉತ್ತಮ ಇಂಗ್ಲಿಷ್ ಕಲಿಸುವ ದೃಷ್ಟಿಯಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸ್ಥಾಪನೆಯಾಗುತ್ತಿಲ್ಲ. ಬದಲಿಗೆ ಹಣ ದೋಚುವ ದುರುದ್ದೇಶವೇ ವ್ಯಾಪಕವಾಗಿದೆ. ಆದ ಕಾರಣ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ, ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡುವುದೇ ಸದ್ಯಕ್ಕಿರುವ ಪರಿಹಾರ' ಎಂದರು.

`ಇಂಗ್ಲಿಷ್ ಭಾಷೆಯೆಡೆಗೆ ನನಗೆ ಮೋಹವಿಲ್ಲವೆಂದಲ್ಲ. ನಾನು ಇಂಗ್ಲಿಷ್ ಅನ್ನು ಪ್ರೀತಿಸಿ ಹಲವು ವಿಚಾರಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದೇನೆ. ಇಂಗ್ಲಿಷ್ ಕಲಿಯುವ ಭರಾಟೆಯಲ್ಲಿ ಮಾತೃಭಾಷೆಯೆಡೆಗೆ ಅಸಡ್ಡೆ ಸಲ್ಲದು. ನಲ್ವತ್ತು ಮಹಾಕಾವ್ಯ, ಒಂದು ಲಕ್ಷಕ್ಕೂ ಅಧಿಕ ವಚನಗಳು, ಪುರಂದರದಾಸ ಮತ್ತು ಕನಕದಾಸ ಕೀರ್ತನೆಗಳನ್ನು ಹೊಂದಿರುವ ಕನ್ನಡ ಭಾಷೆ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಭಾಷೆ.  ಇನ್ನೂ ಎಚ್ಚೆತ್ತುಕೊಳ್ಳದೇ ಹೆಜ್ಜೆ ಇಟ್ಟರೆ ಮುಂದಿನ ದಿನಗಳಲ್ಲಿ ಭಾಷೆಗೆ ಅಪಾಯವಿದೆ' ಎಂದು ಆತಂಕ ವ್ಯಕ್ತಪಡಿಸಿದರು.

`ಕುವೆಂಪು ಅವರು ಆಯ್ಕೆ ಮಾಡಿಕೊಂಡ ಸಾಹಿತ್ಯವಸ್ತು ವಿಭಿನ್ನವಾಗಿದ್ದು, ಈ ವಿಚಾರದಲ್ಲಿ ಮಿಲ್ಟನ್ ಸೇರಿದಂತೆ ಜಗತ್ತಿನ ಯಾವುದೇ ಸಾಹಿತಿಗಳನ್ನು ಕುವೆಂಪು ಅವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಧ್ಯಾನ ಮಾಡಿ ಕಾವ್ಯ ರಚಿಸುತ್ತಿದ್ದ ರಸಋಷಿ ಅವರು. ಅಂತಹವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುವುದು ಸುಲಭದ ಮಾತಲ್ಲ' ಎಂದರು.   

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಸಮಾಜವೆಂಬ ಕನ್ನಡಿಯನ್ನು ಆಗಾಗ್ಗೆ ನೋಡಿಕೊಂಡು ತಪ್ಪುಗಳನ್ನು ತಿದ್ದುಕೊಳ್ಳುವುದು ಅಗತ್ಯವಾಗಿದೆ. ಈ ಸಮಾಜದ ಪ್ರತಿಬಿಂಬವನ್ನು ಸಾಹಿತ್ಯಕೃತಿಗಳು ರೂಪಿಸುವ ಮೂಲಕ ಜನತೆಯನ್ನು ಒಂದು ಆದರ್ಶ ದೃಷ್ಟಿಯೆಡೆಗೆ ಕರೆದೊಯ್ಯುತ್ತಿರುವುದು ಸಂತಸದ ವಿಚಾರ' ಎಂದು ಹೇಳಿದರು.

`ರಾಷ್ಟ್ರಕವಿ ಕುವೆಂಪು' ಪ್ರಶಸ್ತಿಯು 25 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.  ಕವಯತ್ರಿ ಡಾ.ಲತಾ ರಾಜಶೇಖರ ಅವರಿಗೆ `ಕುವೆಂಪು ಮಹಾಕವಿ ರತ್ನ ಸರಸ್ವತಿ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.

`ಮಹಿಳೆಯರಿಗೆ ಮೀಸಲಿರಲಿ'
`ರಾಷ್ಟ್ರಕವಿ ಕುವೆಂಪು' ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ.ಕಮಲಾ ಹಂಪನಾ, `ಮಹಿಳೆಯರಿಗೆಂದೇ ಮೀಸಲಾದ `ಅತ್ತಿಮಬ್ಬೆ' ಪ್ರಶಸ್ತಿಯನ್ನು ಲಿಂಗಾತೀತ ಪ್ರಶಸ್ತಿಯನ್ನಾಗಿ ಮಾಡುವ ಧೋರಣೆಯ ಹಿಂದೆ ಮಹಿಳೆಯರಿಗೆ ಪ್ರಶಸ್ತಿಗಳನ್ನು ತಪ್ಪಿಸುವ ಹುನ್ನಾರ ಅಡಗಿದೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

`ಪಂಪ' ಪ್ರಶಸ್ತಿ ಅಸ್ತಿತ್ವಕ್ಕೆ ಬಂದು 10 ವರ್ಷಗಳಾದರೂ ಒಬ್ಬ ಅರ್ಹ ಲೇಖಕಿಗೆ ಇದನ್ನು ನೀಡುವ ಸೌಜನ್ಯ ತೋರಿಸಲಿಲ್ಲ. ಲೇಖಕಿಯರಿಗೆ ಪ್ರಶಸ್ತಿಯಂತಹ ಯಾವುದೇ ಪ್ರೋತ್ಸಾಹವಿಲ್ಲದ ಸಂದರ್ಭದಲ್ಲಿ ಮಹಿಳೆಯರಿಗೆಂದೇ `ಅತ್ತಿಮಬ್ಬೆ' ಪ್ರಶಸ್ತಿಯನ್ನು ಅಸ್ತಿತ್ವಕ್ಕೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈಗ ಏಕಾಏಕಿ ಪುರುಷರಿಗೂ ಈ ಪ್ರಶಸ್ತಿಯನ್ನು ನೀಡಬೇಕೆಂಬ ವಾದ ಸರಿಯಲ್ಲ' ಎಂದು ಅಭಿಪ್ರಾಯಪಟ್ಟರು.

ಅರ್ಹತೆಯಿರುವ ಲೇಖಕಿಯರಿಗೆ `ಪಂಪ' ಪ್ರಶಸ್ತಿಯನ್ನು ಅಗತ್ಯವಾಗಿ ನೀಡಬಹುದು. ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಮಹಿಳಾ ಮೀಸಲಾತಿಯಂತೆ ಇರುವ `ಅತ್ತಿಮಬ್ಬೆ' ಪ್ರಶಸ್ತಿಯನ್ನು ಮಹಿಳೆಯರಿಗೆ ಮೀಸಲಿಡಬೇಕು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT