ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ತಂಡದ ಸಾಮರ್ಥ್ಯ ಹೆಚ್ಚಿದೆ: ಕಾಲಿಂಗ್‌ವುಡ್

Last Updated 12 ಜನವರಿ 2013, 19:59 IST
ಅಕ್ಷರ ಗಾತ್ರ

ರಾಜ್‌ಕೋಟ್: ಅಲಸ್ಟೇರ್ ಕುಕ್ ನೇತೃತ್ವದ ಇಂಗ್ಲೆಂಡ್ ತಂಡದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ವಿಶ್ವ ಕ್ರಿಕೆಟ್‌ನ ಪ್ರಮುಖ ಶಕ್ತಿಯಾಗಿ ಬದಲಾಗಿದೆ ಎಂದು ಮಾಜಿ ಆಟಗಾರ ಪಾಲ್ ಕಾಲಿಂಗ್‌ವುಡ್ ಹೇಳಿದ್ದಾರೆ.

`ಈ ತಂಡ ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದೆ' ಎಂದು ಅವರು ಶನಿವಾರ `ಪ್ರಜಾವಾಣಿ'ಗೆ ತಿಳಿಸಿದರು.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅನುಸರಿಸುತ್ತಿರುವ `ರೊಟೇಷನ್ ಪದ್ಧತಿ' ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲಿಂಗ್‌ವುಡ್, `ಇಂದು ನಡೆಯುತ್ತಿರುವ ಪಂದ್ಯಗಳ ಸಂಖ್ಯೆ ನೋಡಿದರೆ ಈ ವ್ಯವಸ್ಥೆ ಒಳ್ಳೆಯದೆಂದು ಅನಿಸುವುದು ಸಹಜ. ಆಟಗಾರರಿಗೆ ಸಾಕಷ್ಟು ಬಿಡುವು ಲಭಿಸುವ ಕಾರಣ ಪ್ರತಿ ಸರಣಿಗಳಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲು ಸಾಧ್ಯವಾಗುತ್ತದೆ' ಎಂದರು.

ಪ್ರಮುಖ ಆಟಗಾರರಾದ ಜೇಮ್ಸ ಆ್ಯಂಡರ್ಸನ್, ಗ್ರೇಮ್ ಸ್ವಾನ್, ಮಾಂಟಿ ಪನೇಸರ್ ಮತ್ತು ಜೊನಾಥನ್ ಟ್ರಾಟ್ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಇವರು ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ಗೆ 2-1 ರಲ್ಲಿ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇಸಿಬಿ ಎಲ್ಲರಿಗೂ ವಿಶ್ರಾಂತಿ ನೀಡಿದೆ.

ಭವಿಷ್ಯವನ್ನು ಮುಂದಿಟ್ಟುಕೊಂಡು ತಂಡದ ಆಡಳಿತ ಯುವ ಆಟಗಾರರಿಗೆ ಅವಕಾಶ ನೀಡುತ್ತಿರುವುದು ಸೂಕ್ತ ನಿರ್ಧಾರ ಎಂದು ಅವರು ತಿಳಿಸಿದರು.
`ಭಾರತದ ನೆಲದಲ್ಲಿ ಇಂಗ್ಲೆಂಡ್ ಏಕದಿನ ತಂಡದ ಸಾಧನೆ ಉತ್ತಮವಾಗಿಲ್ಲ. ಆದರೆ ಪ್ರಸಕ್ತ ಸರಣಿಯಲ್ಲಿ ತುರುಸಿನ ಪೈಪೋಟಿ ಕಂಡುಬರಲಿದೆ. ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಪಂದ್ಯ ರೋಚಕವಾಗಿತ್ತು. ಇನ್ನುಳಿದ ಪಂದ್ಯಗಳಲ್ಲೂ ಇದೇ ರೀತಿಯ ಸ್ಪರ್ಧೆ ನಿರೀಕ್ಷಿಸಬಹುದು' ಎಂದು 2010ರ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದ ಕಾಲಿಂಗ್‌ವುಡ್ ಹೇಳಿದರು.

ಟೆಸ್ಟ್ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಇಂಗ್ಲೆಂಡ್ ಇದೀಗ ಏಕದಿನ ಸರಣಿಯಲ್ಲೂ ಅಂತಹದೇ ಪರಾಕ್ರಮ ವೆುರೆಯುವ ವಿಶ್ವಾಸದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT