ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಐರ್ಲೆಂಡ್ ಸಿದ್ಧತೆ.ಉತ್ತಮ ಪ್ರದರ್ಶನದ ವಿಶ್ವಾಸ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಈ ಹಿಂದೆ ಇಂಗ್ಲೆಂಡ್ ವಿರುದ್ಧ ಹಲವು ಪಂದ್ಯಗಳನ್ನು ಆಡಿದ್ದೇವೆ. ಈಗ ವಿಶ್ವಕಪ್‌ನಲ್ಲಿ ಮತ್ತೆ ಎದುರಾಗುತ್ತಿದ್ದೇವೆ. ಆ ಪಂದ್ಯವನ್ನು ನಾವು ಕಾತರದಿಂದ ಎದುರು ನೋಡುತ್ತಿದ್ದೇವೆ. ಈ ಬಾರಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ’ ಎಂದು ಐರ್ಲೆಂಡ್ ತಂಡದ ಎಡಗೈ ಸ್ಪಿನ್ನರ್ ಜಾರ್ಜ್ ಡಾಕ್ರೆಲ್ ತಿಳಿಸಿದ್ದಾರೆ.ಬುಧವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ವಿಶ್ವಕಪ್ ‘ಬಿ’ ಗುಂಪಿನ ಪಂದ್ಯಕ್ಕೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಬಳಿಕ ಅವರು ಮಾತನಾಡಿದರು.

ನಿಜ, ಇಲ್ಲಿಯ ಪಿಚ್ ವಿಭಿನ್ನವಾಗಿದೆ. ಹಾಗೇ, ವಾತಾವರಣ ಕೂಡ ವಿಭಿನ್ನ. ಆದರೆ ಇಂಗ್ಲೆಂಡ್ ತಂಡದ ಕೆಲ ಆಟಗಾರರ ಪರಿಚಯ ನಮಗಿದೆ. ಅವರ ವಿರುದ್ಧ ನಾವು ವರ್ಷದಿಂದ ತಂತ್ರ ರೂಪಿಸುತ್ತಲೇ ಇದ್ದೇವೆ. ಹಾಗಾಗಿ ಬುಧವಾರದ ಪಂದ್ಯಕ್ಕೆ ಹೆಚ್ಚು ಯೋಜನೆ ರೂಪಿಸಬೇಕಾದ ಅಗತ್ಯ ಇಲ್ಲ ಎಂದರು.ಡಾಕ್ರೆಲ್‌ಗೆ ಇನ್ನೂ ಹದಿನೆಂಟೂವರೆ ವರ್ಷ ವಯಸ್ಸು. ಐರ್ಲೆಂಡ್ ತಂಡದಲ್ಲಿರುವ ಕಿರಿಯ ಆಟಗಾರ ಕೂಡ. ಆಡಿರುವ 17 ಏಕದಿನ ಪಂದ್ಯಗಳಿಂದ 22 ವಿಕೆಟ್ ಪಡೆದಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು ಅವರಿಗೆ ನಿರಾಶೆ ಮೂಡಿಸಿದೆ.

ಕಾರಣ ಅದು ಗೆಲ್ಲಬಹುದಾಗಿದ್ದ ಪಂದ್ಯ. ಆ ಪಂದ್ಯದಲ್ಲಿ ಅವರು 10 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ದುರದೃಷ್ಟವೆಂದರೆ 206 ರನ್‌ಗಳನ್ನು ತಲುಪಲು ಸಾಧ್ಯವಾಗಿರಲಿಲ್ಲ. ‘ಬಾಂಗ್ಲಾ ಎದುರು ಸೋಲು ಎದುರಾಗಿದ್ದು ತುಂಬಾ ನಿರಾಶೆ ಮೂಡಿಸಿದೆ. ವಿಶ್ವಕಪ್‌ನಲ್ಲಿ ಅದು ನನ್ನ ಮೊದಲ ಪಂದ್ಯ. ತುಂಬಾ ಒತ್ತಡಕ್ಕೆ ಒಳಗಾಗಿದ್ದು ನಿಜ. ಈಗ ನಾನು ಬುಧವಾರದ ಪಂದ್ಯವನ್ನು ಎದುರು ನೋಡುತ್ತಿದ್ದೇನೆ’ ಎಂದು ಡಾಕ್ರೆಲ್ ವಿವರಿಸಿದ್ದಾರೆ.

ಈಗ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ‘ನಾನು ಕೂಡ ಟೆಸ್ಟ್ ಕ್ರಿಕೆಟ್ ಆಡಬೇಕು. ಉಳಿದ ಕ್ರಿಕೆಟಿಗರಂತೆ ನನ್ನಲ್ಲೂ ಕನಸಿದೆ. ಆದರೆ ಈಗ ನನ್ನ ಗಮನವೇನಿದ್ದರೂ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವುದು ಹಾಗೂ ಕ್ವಾರ್ಟರ್ ಫೈನಲ್ ತಲುಪುವುದು’ ಎಂದು ಅವರು ನುಡಿದಿದ್ದಾರೆ.ಡಾಕ್ರೆಲ್ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಬೆಳಕಿಗೆ ಬಂದಿದ್ದರು. ಅವರು ಆತಿಥೇಯ ವಿಂಡೀಸ್ ಎದುರು 16 ರನ್‌ಗಳಿಗೆ ಮೂರು ವಿಕೆಟ್ ಪಡೆದಿದ್ದರು.

‘ಐರ್ಲೆಂಡ್ ತಂಡ ಹಿಂದೆ ನಮ್ಮ ಎದುರು ಆಡಿದ ಅನುಭವ ಹೊಂದಿದೆ. ಹಾಗಾಗಿ ನಾವು ಉತ್ತಮ ಪ್ರದರ್ಶನ ತೋರಿದರೆ ಮಾತ್ರ ಗೆಲುವು ಸಾಧ್ಯ. ಆ ತಂಡದ ಬಗ್ಗೆ ನಮಗೆ ಪೂರ್ಣ ಗೌರವವಿದೆ’ ಎಂದು ಇಂಗ್ಲೆಂಡ್ ತಂಡದ ಆಟಗಾರ ಇಯಾನ್ ಬೆಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT