ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ಸಿಟಿ ರೈಲು ಸಂಚಾರ ಕಡಿತಕ್ಕೆ ತೀವ್ರ ವಿರೋಧ

Last Updated 26 ಡಿಸೆಂಬರ್ 2012, 5:47 IST
ಅಕ್ಷರ ಗಾತ್ರ

ಸಾಗರ: ತಾಳಗುಪ್ಪ-ಮೈಸೂರು ಇಂಟರ್‌ಸಿಟಿ ರೈಲಿನ ಸಂಚಾರವನ್ನು ಬರುವ ಜ. 1ರಿಂದ ಶಿವಮೊಗ್ಗದವರೆಗೆ ಮಾತ್ರ ಸೀಮಿತಗೊಳಿಸುವ ರೈಲ್ವೆ ಇಲಾಖೆಯ ನಿರ್ಧಾರಕ್ಕೆ ತಾಲ್ಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಹಿಂದೆ ರೈಲ್ವೆ ಮಾರ್ಗದ ಬ್ರಾಡ್‌ಗೇಜ್ ಪರಿವರ್ತನೆಗೆ ಸುಧೀರ್ಘ ಹೋರಾಟ ನಡೆಸಿದ್ದ ರೈಲ್ವೆ ಹೋರಾಟ ಸಮಿತಿ ಈಗ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಎಂಬ ನೂತನ ವೇದಿಕೆ ರಚಿಸಿದ್ದು, ಜ. 27ರಂದು ಬೆಳಿಗ್ಗೆ 11ಕ್ಕೆ ರೈಲುನಿಲ್ದಾಣದ ಎದುರು ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದೆ.

ಸಾಗರಕ್ಕೆ ಬರುವ ಯಾವುದೇ ರೈಲನ್ನು ನಿಲ್ಲಿಸಬಾರದು. ಹೊಸ ರೈಲಿನ ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇರುವಾಗ ಇರುವ ರೈಲನ್ನು ನಿಲ್ಲಿಸುವುದು ಜನತೆಗೆ ದ್ರೋಹ ಬಗೆದಂತೆ ಎಂದು ಸಮಿತಿಯ ಪ್ರಮುಖರಾದ ಯು.ಜೆ. ಮಲ್ಲಿಕಾರ್ಜುನ ಹೇಳಿದ್ದಾರೆ.

ಶಾಸಕ ಗೋಪಾಲಕೃಷ್ಣ ಬೇಳೂರು ಇಂಟರ್‌ಸಿಟಿ ರೈಲಿನ ಸಂಚಾರವನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸುದಕ್ಕೆ ವಿರೋಧ ಸೂಚಿಸಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇಲ್ಲಿನ ಮಾರ್ಗದಲ್ಲಿ ಒಂದೇ ರೈಲನ್ನು ಓಡಿಸುವುದು ಎಳ್ಳಷ್ಟೂ ಸರಿಯಲ್ಲ. ಈ ವಿಷಯದಲ್ಲಿ ನಾನು ಕೂಡಾ ಹೋರಾಟ ನಡೆಸಲು ಜನರೊಂದಿಗೆ ಸೇರಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕೂಡಾ ರೈಲ್ವೆ ಇಲಾಖೆಯ ಈ ನಿರ್ಧಾರ ಅವೈಜ್ಞಾನಿಕ ಮತ್ತು ಅಸಮಂಜಸ ಎಂದು ಹೇಳಿದ್ದಾರೆ. ಮೈಸೂರಿಗೆ ರಾತ್ರಿ ಹೊತ್ತು ತಡವಾಗಿ ತಲುಪುತ್ತದೆ ಎನ್ನುವ ಕಾರಣ ಮುಂದು ಮಾಡಿ ಸಾಗರ ಹಾಗೂ ತಾಳಗುಪ್ಪಕ್ಕೆ ರೈಲು ಬಾರದಂತೆ ಮಾಡುವುದು ಅವಿವೇಕದ ತೀರ್ಮಾನ ಎಂದಿದ್ದಾರೆ.

ಕೆಜೆಪಿ ಮುಖಂಡ ಬಿ.ಆರ್. ಜಯಂತ್ ಯಾವ ಕಾರಣಕ್ಕೂ ರೈಲ್ವೆ ಇಲಾಖೆ ಕೊಟ್ಟಿರುವ ಸೌಲಭ್ಯವನ್ನು ಕಿತ್ತುಕೊಳ್ಳಬಾರದು ಎಂದಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ತಾಳಗುಪ್ಪ-ಮೈಸೂರು ಇಂಟರ್‌ಸಿಟಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಆರ್ಥಿಕವಾಗಿ ಇಲಾಖೆಗೆ ನಷ್ಟವೇನೂ ಆಗುತ್ತಿಲ್ಲ. ಹೀಗಾಗಿ ರೈಲು ಸಂಚಾರ ನಿಂತರೆ ಇಲಾಖೆ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

ಜೆಡಿಎಸ್ ಮುಖಂಡ ಕೆ.ಅರುಣ್ ಪ್ರಸಾದ್ ಪ್ರತಿಕ್ರಿಯಿಸಿ,ಇಂಟರ್‌ಸಿಟಿ ರೈಲಿನ ಸಂಚಾರವನ್ನು ಶಿವಮೊಗ್ಗದ ವರೆಗೆ ಸೀಮಿತಗೊಳಿಸುವುದು ರೈಲ್ವೆ ಇಲಾಖೆಗೆ ನಷ್ಟದ ಬಾಬ್ತು. ಇರುವ ರೈಲನ್ನು ಉಳಿಸಿಕೊಳ್ಳುವ ಜತೆಗೆ ಲೋಕಲ್ ರೈಲಿನ ಸಂಚಾರವನ್ನು ಶಿವಮೊಗ್ಗ-ತಾಳಗುಪ್ಪ ನಡುವೆ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT