ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಭಾರತ- ವಿಂಡೀಸ್ ಮೊದಲ ಕ್ರಿಕೆಟ್ ಟೆಸ್ಟ್; ವಿಜಯ್ ಅನುಮಾನ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್, ಜಮೈಕಾ (ಪಿಟಿಐ): ಪ್ರಮುಖ ಆಟಗಾರರ ಅನುಪಸ್ಥಿತಿ ಹಾಗೂ ಗಾಯದ ಸಮಸ್ಯೆಯ ಕಾರಣ ಅಲ್ಪ ಹಿನ್ನಡೆ ಅನುಭವಿಸಿರುವ ಭಾರತ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನ ವಿಶ್ವಾಸ ಹೊಂದಿದೆ.

ಉಭಯ ತಂಡಗಳ ನಡುವಿನ ಮೂರು ಟೆಸ್ಟ್ ಸರಣಿಯ ಮೊದಲ ಪಂದ್ಯ ಇಲ್ಲಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗಲಿದೆ. ಏಕದಿನ ಸರಣಿಯಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸುವ ಲೆಕ್ಕಾಚಾರದೊಂದಿಗೆ ವಿಂಡೀಸ್ ಕಣಕ್ಕಿಳಿಯಲಿರುವ ಕಾರಣ ಭಾರತಕ್ಕೆ ಅಗ್ನಿಪರೀಕ್ಷೆ ಖಚಿತ.

ಕಳೆದ ಕೆಲ ವರ್ಷಗಳಿಂದ ಟೆಸ್ಟ್ ತಂಡದ ಅವಿಭಾಜ್ಯ ಅಂಗ ಎನಿಸಿರುವ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತು ವೇಗದ ಬೌಲರ್ ಜಹೀರ್ ಖಾನ್ ಅವರ ಅನುಪಸ್ಥಿತಿಯಲ್ಲಿ ಭಾರತ ಆಡಲಿದೆ. ಇದರ ಜೊತೆಗೆ ಆಟಗಾರರ ಗಾಯದ ಸಮಸ್ಯೆಯೂ ತಂಡವನ್ನು ಕಾಡುತ್ತಿದೆ.

ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಮತ್ತು ವೇಗಿ ಮುನಾಫ್ ಪಟೇಲ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ತೀರಾ ಕಡಿಮೆ. ವಿಜಯ್ ಅವರು ಶನಿವಾರ ಅಭ್ಯಾಸ ನಡೆಸುವ ಸಂದರ್ಭ ಕೈಬೆರಳಿಗೆ ಗಾಯವಾಗಿದೆ. ಮೊಣಕೈ ಗಾಯದಿಂದ ಬಳಲುತ್ತಿರುವ ಮುನಾಫ್ ಅಭ್ಯಾಸ ಅವಧಿಯಲ್ಲಿ ಪಾಲ್ಗೊಂಡಿಲ್ಲ.

ಆದರೂ ಭಾರತದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿಲ್ಲ. ಅದಕ್ಕೆ ಕಾರಣ ನಾಯಕ ಮಹೇಂದ್ರ ಸಿಂಗ್ ದೋನಿ, ಅನುಭವಿಗಳಾದ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅವರ ಆಗಮನ. ಇವರು ತಂಡಕ್ಕೆ ಹೊಸ ಹುಮ್ಮಸ್ಸು ನೀಡಿರುವುದು ನಿಜ.

ವಿಜಯ್ ಆಡದಿದ್ದರೆ, ಪಾರ್ಥಿವ್ ಪಟೇಲ್ ಅವರು ಇನಿಂಗ್ಸ್ ಆರಂಭಿಸುವರು ಎಂದು ದೋನಿ ಹೇಳಿದ್ದಾರೆ. ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಅವರು ಇನ್ನೂ ತಂಡವನ್ನು ಸೇರಿಕೊಳ್ಳದ ಕಾರಣ ಮೊದಲ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಮಿಥುನ್ ಭಾನುವಾರ ಸಂಜೆಯಷ್ಟೇ ವಿಂಡೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅವರು ಬುಧವಾರ ತೆರಳಬೇಕಿತ್ತು. ಆದರೆ ವೀಸಾ ಸಮಸ್ಯೆಯಿಂದಾಗಿ ಪ್ರಯಾಣ ತಡವಾಗಿದೆ.

ಇದೀಗ ಮುನಾಫ್ ಕಣಕ್ಕಿಳಿಯದಿದ್ದರೆ, ಭಾರತ ತಂಡ ವೇಗದ ಬೌಲಿಂಗ್‌ನಲ್ಲಿ ಪ್ರವೀಣ್ ಕುಮಾರ್ ಮತ್ತು ಇಶಾಂತ್ ಶರ್ಮ ಅವರನ್ನು ಮಾತ್ರ ನೆಚ್ಚಿಕೊಳ್ಳಬೇಕಿದೆ. ಪ್ರವೀಣ್‌ಗೆ ಇದು ಮೊದಲ ಟೆಸ್ಟ್ ಎನಿಸಲಿದೆ. ಇಬ್ಬರು ಸ್ಪಿನ್ನರ್‌ಗಳಾದ ಹರಭಜನ್ ಸಿಂಗ್ ಮತ್ತು ಅಮಿತ್ ಮಿಶ್ರಾ ಅವರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಸಬೀನಾ ಪಾರ್ಕ್ ಕ್ರೀಡಾಂಗಣದ ಪಿಚ್ ವೇಗ ಹಾಗೂ ಬೌನ್ಸ್‌ಗೆ ನೆರವು ನೀಡುವುದು ವಾಡಿಕೆ.

ಮತ್ತೊಂದೆಡೆ ವೆಸ್ಟ್ ಇಂಡೀಸ್ ನಾಲ್ಕು ಮಂದಿ ವೇಗಿಗಳೊಂದಿಗೆ ಕಣಕ್ಕಿಳಿಯವುದು ಖಚಿತ. ಈ ಮೂಲಕ ಮಹೇಂದ್ರ ಸಿಂಗ್ ದೋನಿ ಬಳಗದ ಮೇಲೆ ಒತ್ತಡ ಹೇರುವ ಕನಸು ಕಾಣುತ್ತಿದೆ. ಡರೆನ್ ಸಮಿ ನೇತೃತ್ವದ ತಂಡ ಇಲ್ಲಿನ ಪರಿಸ್ಥಿತಿಯ ಲಾಭ ಎತ್ತಿಕೊಳ್ಳಲು ತಕ್ಕ ಸಿದ್ಧತೆ ನಡೆಸಿದೆ. ಫಿಡೆಲ್ ಎಡ್ವರ್ಡ್ಸ್, ಕೆಮರ್ ರಾಚ್, ರವಿ ರಾಂಪಾಲ್ ಜೊತೆ ನಾಯಕ ಸಮಿ ಅವರು ವೇಗದ ಬೌಲಿಂಗ್ ವಿಭಾಗಕ್ಕೆ ಬಲ ನೀಡಲಿದ್ದಾರೆ. ಏಕೈಕ ಸ್ಪಿನ್ನರ್ ರೂಪದಲ್ಲಿ ದೇವೇಂದ್ರ ಬಿಶೂ ಕಣಕ್ಕಿಳಿಯುವರು. ಭಾರತ ತಂಡ ಸಮತೋಲನ ಕಳೆದುಕೊಂಡಿದ್ದು, ಅದರ ಲಾಭ ಎತ್ತಿಕೊಳ್ಳುವ ವಿಶ್ವಾಸ ವಿಂಡೀಸ್ ತಂಡದ್ದು.

ಬೌಲಿಂಗ್ ವಿಭಾಗ ದುರ್ಬಲವಾಗಿರುವ ಕಾರಣ ಭಾರತ ತಂಡ ಬ್ಯಾಟ್ಸ್‌ಮನ್‌ಗಳನ್ನು ನೆಚ್ಚಿಕೊಂಡಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಭಾರ ಇದೆ. ದ್ರಾವಿಡ್ ಮತ್ತು ಲಕ್ಷ್ಮಣ್ ದೊಡ್ಡ ಮೊತ್ತ ಪೇರಿಸುವುದು ಅಗತ್ಯ. ಹೈದರಾಬಾದ್‌ನ ಕಲಾತ್ಮಕ ಬ್ಯಾಟ್ಸ್‌ಮನ್‌ಗೆ ಟೆಸ್ಟ್‌ನಲ್ಲಿ 8 ಸಾವಿರ ರನ್‌ಗಳ ಗಡಿ ದಾಟಲು ಇನ್ನು 97 ರನ್‌ಗಳು ಬೇಕು.

ಪ್ರವೀಣ್ ಕುಮಾರ್ ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ಅಭಿನವ್ ಮುಕುಂದ್ ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಕೊಹ್ಲಿ ಹಾಗೂ ಸುರೇಶ್ ರೈನಾ ತಮಗೆ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವರೇ ಎಂಬುದನ್ನು ನೋಡಬೇಕು.

ತಂಡಗಳು ಇಂತಿವೆ....

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಅಭಿನವ್ ಮುಕುಂದ್, ಮುರಳಿ ವಿಜಯ್, ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ, ಹರಭಜನ್ ಸಿಂಗ್, ಅಮಿತ್ ಮಿಶ್ರಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಇಶಾಂತ್ ಶರ್ಮ.

ವೆಸ್ಟ್ ಇಂಡೀಸ್: ಡರೆನ್ ಸಮಿ (ನಾಯಕ), ಬ್ರೆಂಡನ್ ನ್ಯಾಶ್, ಅಡ್ರಿಯಾನ್ ಭರತ್, ಕಾರ್ಲ್‌ಟನ್ ಬಗ್, ದೇವೇಂದ್ರ ಬಿಶೂ, ಡರೆನ್ ಬ್ರಾವೊ, ಶಿವನಾರಾಯಣ ಚಂದ್ರಪಾಲ್, ಫಿಡೆಲ್ ಎಡ್ವರ್ಡ್ಸ್, ರವಿ ರಾಂಪಾಲ್, ಕೆಮರ್ ರಾಚ್, ಮರ್ಲೊನ್   ಸ್ಯಾಮುಯೆಲ್ಸ್, ರಾಮನರೇಶ ಸರವಣ, ಲೆಂಡ್ಲ್ ಸಿಮಾನ್ಸ್
ಪಂದ್ಯದ ಆರಂಭ (ಭಾರತೀಯ ಕಾಲಮಾನ): ರಾತ್ರಿ 8.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT