ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಮೈಲಾರ ಜಾತ್ರೆ ಸಡಗರ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಮಲ್ಲಿಗೆ ಕೃಷಿಗೆ ಹೆಸರುವಾಸಿ. ಜೊತೆಗೆ ಮೈಲಾರ ಗ್ರಾಮದ ಶ್ರೀಮೈಲಾರಲಿಂಗೇಶ್ವರ ಜಾತ್ರೆಯಿಂದಲೂ ಅಷ್ಟೇ ಪ್ರಸಿದ್ಧ. ಏಕೆಂದರೆ ಇದು ಅತ್ಯಂತ ದೊಡ್ಡ ಕಾರಣಿಕದ ಜಾತ್ರೆ. ವಿಶಿಷ್ಟ ಪರಂಪರೆಯ ಸೊಗಡು ಇದಕ್ಕಿದೆ. ಗೊರವ ಸಮುದಾಯದ ವ್ಯಕ್ತಿ ಹೇಳುವ ಕಾರಣಿಕದ ನುಡಿ ಈ ಜಾತ್ರೆಯ ವಿಶೇಷ.

ಇಷ್ಟೇ ಅಲ್ಲ. ಇಲ್ಲಿ ಪ್ರಾಣಿ ಬಲಿಗೆ ಅವಕಾಶವೇ ಇಲ್ಲ. ಹೀಗಾಗಿ ಇದು ಅಹಿಂಸಾತ್ಮಕ ವರ್ಣಮಯ ಉತ್ಸವ. ಕೋಮು ಸಾಮರಸ್ಯ, ಭಾವೈಕ್ಯದ ಸಂಗಮ. ಇದನ್ನೇ ಹೋಲುವ ಇದೇ ರೀತಿಯ ಸಂಸ್ಕೃತಿ, ಪವಾಡ, ಇತಿಹಾಸವುಳ್ಳ ಖಂಡೋಬಾ ಜಾತ್ರೆ ಮಹಾರಾಷ್ಟ್ರದ ಜೆಜೂರಿಯಲ್ಲಿ ನಡೆಯುತ್ತದೆ. ಅಲ್ಲಿಯೂ ಲಕ್ಷಾಂತರ ಕನ್ನಡಿಗರು ಕಾಣಸಿಗುತ್ತಾರೆ.

ನಮ್ಮ ಕರ್ನಾಟಕದಲ್ಲಿ ಮೈಲಾರ ಸಂಪ್ರದಾಯದ 14 ದೇವಾಲಯಗಳಿವೆ. ಅವುಗಳಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಶ್ರೀ ಮಾಲತೇಶ (ಗುಡ್ಡದಯ್ಯ) ಜಾತ್ರೆಯು ಒಂದು. ಒಂದೇ ಸಮಯದಲ್ಲಿಯೇ ಶ್ರೀ ಮೈಲಾರ ಹಾಗೂ ಶ್ರೀಮಾಲತೇಶನ ಜಾತ್ರೆಗಳು ನಡೆಯುವುದು ಇನ್ನೊಂದು ವಿಶೇಷ.

ಮೈಲಾರಲಿಂಗನನ್ನು ಭೈರವ, ಮಲ್ಲಾರಿ, ಮೈಲಾರ, ಮಾಲತೇಶ, ಖಂಡೋಬಾ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಮೈಲಾರನ ಜಾತ್ರೆಯಲ್ಲಿ ಕಾರಣಿಕದ ನುಡಿ ಎಂದರೆ ಅತ್ಯಂತ ಅಮೂಲ್ಯ. ಒಂದು ನುಡಿ, ಒಂದು ಸಾಲು ಗ್ರಾಮೀಣ ಜನಪದರ ಪಾಲಿಗಂತೂ ಅತ್ಯಂತ ಪವಿತ್ರ. ನೆರೆದ ಭಕ್ತರು ಈ ಕಾರಣಿಕದ ಆಧಾರದ ಮೇಲೆ ವರ್ಷದ ಭವಿಷ್ಯ, ಬೆಳೆ-ಮಳೆ, ರಾಜಕೀಯದ ಲೆಕ್ಕಾಚಾರ ಹಾಕುತ್ತಾರೆ. ಜಾತ್ರೆಗೆ ಬಂದವರು ಕಾರಣಿಕ ಮುಗಿಯದೇ ಕ್ಷೇತ್ರ ಬಿಡುವಂತಿಲ್ಲ.

ಪ್ರತಿ ವರ್ಷ ಭಾರತ ಹುಣ್ಣಿಮೆಯಿಂದ ನಾಲ್ಕು ದಿನ (ಈ ವರ್ಷ ಇಂದಿನಿಂದ ಫೆಬ್ರುವರಿ 10) ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯುವ ಮೈಲಾರ ಜಾತ್ರೆ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಖ್ಯಾತಿಯೂ ಇದಕ್ಕಿದೆ.

ಮೈಲಾರ ಗ್ರಾಮ ಐತಿಹಾಸಿಕವಾಗಿಯೂ ಹೆಸರಾದದ್ದು. ಇಲ್ಲಿ ತುಂಗಭದ್ರೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹೀಗೆ ಉಂಗುರ ಉಂಗುರವಾಗಿ ಹರಿದಿರುವುದರಿಂದ ಈ ಕ್ಷೇತ್ರಕ್ಕೆ `ವುಂಗ್ಗಾರ~ ಎಂಬ ಇನ್ನೊಂದು ಹೆಸರೂ ಇದೆ. ಐತಿಹ್ಯದ ಪ್ರಕಾರ ಈ ಗ್ರಾಮದಲ್ಲಿ ತ್ರಿಮೂರ್ತಿಗಳ ಸಂಗಮವಾಗಿತ್ತು. ತ್ರಿಮೂರ್ತಿಗಳ ಶಕ್ತಿಯ ಒಂದು ರೂಪ ಮೈಲಾರಿ.
 
ಈ ಕಾರಣಕ್ಕಾಗಿ ಮೈರಾಲಿ, ಮೈರಾಲ ನಂತರ ಮೈಲಾರವಾಯಿತೆಂದು ಹೇಳುತ್ತಾರೆ.
ಕ್ರಿ. ಶ. 1046 ರ ಶಾಸನದ ಪ್ರಕಾರ ಮಾಂಡಲಿಕ ಮಣಸಭರ್ಮ ದೇವಯ್ಯನ ಮಗ ಕಾಳಿದಾಸನು ಭೂದತ್ತಿ ನೀಡಿದ್ದರಿಂದ ಇದನ್ನು ಮಣ್ಣಮೈಲಾರ ಎಂತಲೂ ಕರೆಯುತ್ತಾರೆ.

ಬಹಳ ಹಿಂದೆ ಈ ಪ್ರದೇಶದಲ್ಲಿದ್ದ ಮಣಿ ಮತ್ತು ಮಲ್ಲಾಸುರ ಎಂಬ ರಾಕ್ಷಸರು ಜನರಿಗೆ ಹಿಂಸೆ ಕೊಡುತ್ತಿದ್ದರು. ಇವರನ್ನು ಸಂಹಾರ ಮಾಡಲು ಶಿವನು ಏಳುಕೋಟಿ ಸೈನಿಕರೊಂದಿಗೆ ಮೈಲಾರಲಿಂಗ ಸ್ವಾಮಿಯಾಗಿ ಬಂದನಂತೆ. ರಾಕ್ಷಸರನ್ನು ಕೊಂದು ಏಳುಕೋಟಿ ಮೈಲಾರಲಿಂಗ ಸ್ವಾಮಿಯಾಗಿ ಇಲ್ಲೆೀ ನೆಲೆಯೂರಿದ. ನಂತರದಲ್ಲಿ ಕಂಬಳಿ, ಕವಡಿ, ತ್ರಿಶೂಲ, ಡೋಣಿ, ಭಂಡಾರ ಬಟ್ಟಲು ಮುಂತಾದವುಗಳನ್ನು ಧರಿಸಿ ಮಾರ್ತಾಂಡ ಭೈರವನಾದ ಎಂಬುದು ಆಸ್ತಿಕರ ನಂಬಿಕೆ.

ಮೈಲಾರಲಿಂಗ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ರಾಕ್ಷಸರನ್ನು ಸಂಹಾರ ಮಾಡಿದ ಸ್ಥಳವೆಂದು ಹೇಳುವ ಚಿಕ್ಕ ಬೆಟ್ಟವಿದೆ. ರಾಕ್ಷಸರ ಸಂಹಾರಕ್ಕಾಗಿ ಶಿವ ಒಂಬತ್ತು ದಿನ ಈ ಬೆಟ್ಟದ ಮೇಲೆ ಇದ್ದನಂತೆ. ಇದರ ನೆನಪಿಗಾಗಿ ಡೆಂಕನಮಲ್ಡಿ (ಮರಡಿ) ಏರುವ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ಗೊರವರು ಒಂಬತ್ತು ದಿನ ಸೇವೆ ಸಲ್ಲಿಸುತ್ತಾರೆ.

ಮುಖ್ಯ ಆಕರ್ಷಣೆ
ಈ ಜಾತ್ರೆಯ ಪ್ರಮುಖ ಆಕರ್ಷಣೆ ಗೊರವ, ಗೊರವತಿ (ಗೊರವಿ)ಯರು. ಗೊರವರು ಚಾಟಿಯಿಂದ ಕುದುರೆಗೆ ಹೊಡೆದಂತೆ ತಮ್ಮ ದೇಹಕ್ಕೆ ತಾವೇ ಹೊಡೆದುಕೊಳ್ಳುತ್ತಾರೆ.

ಕೆಲವರು ಕೈಯಲ್ಲಿ ಡಮರುಗ ಹಿಡಿದು ಬಾರಿಸುತ್ತಾ ಕರಡಿಯಂತೆ ವೇಷ ಧರಿಸಿ ನರ್ತನ ಮಾಡುತ್ತಾರೆ. ಗೊರವತಿಯರು ಕೈಯಲ್ಲಿ ಚವರಿ ಹಿಡಿದು ಬೀಸುತ್ತಾ ಮೈಲಾರಲಿಂಗನ ಜೀವನ ಚರಿತ್ರೆಯ ಕಾವ್ಯದ ಭಾಗಗಳನ್ನು ಹೇಳುತ್ತಾ ನಡೆಯುತ್ತಾರೆ.

ಏಳು ಕೋಟಿ ಏಳು ಕೋಟಿಗೋ
ಛಾಂಗ್‌ಮಲೋ ಛಾಂಗ್‌ಮಲೋ
ಏಳು ಕೋಟಿ ಏಳು ಕೋಟಿಗೋ...
ಛಾಂಗ್‌ಮಲೋ ಛಾಂಗ್‌ಮಲೋ ...


ಎಂಬ ಉದ್ಘೋಷ ಜಾತ್ರೆ ಮುಗಿಸಿಕೊಂಡು ಹೋಗುವವರೆಗೂ ಭಕ್ತರ ಬಾಯಲ್ಲಿ ಹರಿದಾಡುತ್ತಿರುತ್ತದೆ.

ಏನದು ಕಾರಣಿಕ
ಜಾತ್ರೆಗೆ ಮುನ್ನ ಒಂಬತ್ತು ದಿನ ಉಪವಾಸ, ಪೂಜೆ ಮಾಡುವ ಗೊರವಪ್ಪ, ಜಾತ್ರೆ ದಿನ ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಮಧ್ಯೆ ಸುಮಾರು 30 ರಿಂದ 40 ಅಡಿ ಎತ್ತರದ ಬಿಲ್ಲನ್ನು ಏರುತ್ತಾನೆ. ಆಕಾಶಕ್ಕೆ ಮುಖ ಮಾಡಿ  ಸದ್ದಲೇ...! ಎಂದಾಗ ಒಂದು ಕ್ಷಣ ಮೌನ ಆವರಿಸುತ್ತದೆ. ನಂತರ ಆತ ಒಂದೆರಡು ವಾಕ್ಯ ಹೇಳುತ್ತಾ ಬ್ಲ್ಲಿಲಿನಿಂದ ಕೆಳಗೆ ಬೀಳುತ್ತಾನೆ. ಕೆಳಗಿರುವ ಗೊರವಪ್ಪಗಳು ಕರಿ ಗೊಂಗಡಿ ಹಾಸಿ ಆತನನ್ನು ಹಿಡಿದುಕೊಳ್ಳುತ್ತಾರೆ. ಅವನ ಬಾಯಿಂದ ಬರುವ ನುಡಿಯೇ ಕಾರಣಿಕ.

ಎಲ್ಲಿದೆ?
ಮೈಲಾರ ಗ್ರಾಮವು ರಾಣೇಬೆನ್ನೂರು ಹಾಗೂ ಹಾವೇರಿ ರೈಲು ನಿಲ್ದಾಣದಿಂದ 40 ಕಿ.ಮೀ ದೂರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT