ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕ್ವಾಲಿಫೈಯರ್-1 ಪಂದ್ಯ; ಸಮಬಲರ ನಡುವಿನ ಸೆಣಸಾಟ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

 ಪುಣೆ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ಎರಡು ತಂಡಗಳೆಂದರೆ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡದ್ದೇ ಇದಕ್ಕೆ ಸಾಕ್ಷಿ.

ಇದೀಗ ಟೂರ್ನಿಯ ಫೈನಲ್ ಮೇಲೆ ಕಣ್ಣಿಟ್ಟಿರುವ ಇವೆರಡು ತಂಡಗಳು ಮಂಗಳವಾರ ನಡೆಯುವ `ಕ್ವಾಲಿಫೈಯರ್-1~ ರ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ. ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ನೇತೃತ್ವದ ತಂಡಗಳ ನಡುವಿನ ಪೈಪೋಟಿ ಅಭಿಮಾನಿಗಳಿಗೆ ಸಾಕಷ್ಟು ರಸದೌತಣ ನೀಡುವುದು ಖಚಿತ.
ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಮೇ 27 ರ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಸೋತ ತಂಡಕ್ಕೆ ಫೈನಲ್ ಪ್ರವೇಶಿಸಲು ಇನ್ನೊಂದು ಅವಕಾಶ ಇದೆ. ಅದು ಮೇ 25 ರಂದು ನಡೆಯುವ `ಕ್ವಾಲಿಫೈಯರ್-2~ ಪಂದ್ಯದಲ್ಲಿ ಆಡಬೇಕು.

ಒಂದು ರೀತಿಯಲ್ಲಿ ಇಂದಿನ ಪಂದ್ಯ ಸಮಬಲರ ನಡುವಿನ ಹೋರಾಟ ಎನಿಸಿದೆ. ಲೀಗ್ ಹಂತದಲ್ಲಿ ಇವೆರಡು ತಂಡಗಳು ಎದುರಾಗಿದ್ದ ಸಂದರ್ಭದಲ್ಲೂ ಸಮಬಲ ಕಂಡುಬಂದಿತ್ತು. ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಡೇರ್‌ಡೆವಿಲ್ಸ್ ಗೆಲುವು ಪಡೆದಿದ್ದರೆ, ನವದೆಹಲಿಯಲ್ಲಿ ನೈಟ್ ರೈಡರ್ಸ್ ಜಯ ಸಾಧಿಸಿತ್ತು.

ಆಕ್ರಮಣಕಾರಿ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿರುವ ವೈವಿಧ್ಯತೆ, ಚುರುಕಿನ ಫೀಲ್ಡಿಂಗ್‌ನಿಂದಾಗಿ ಈ ತಂಡಗಳು ಲೀಗ್ ಹಂತದಲ್ಲಿ ಯಶಸ್ಸಿನ ಓಟ ನಡೆಸಿವೆ. ಕೊನೆಯವರೆಗೂ ಗೆಲುವಿಗಾಗಿ ಹೋರಾಡುವ ಛಲ ಉಭಯ ತಂಡಗಳ ಆಟಗಾರರಲ್ಲಿ ಕಾಣಬಹುದು. 

ಡೆಲ್ಲಿ ತಂಡ ಸೆಹ್ವಾಗ್ ಮತ್ತು ಡೇವಿಡ್ ವಾರ್ನರ್ ಅವರ ರೂಪದಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಇವರಿಗೆ ಉತ್ತರ ನೀಡಲು ನೈಟ್ ರೈಡರ್ಸ್ ತಂಡದಲ್ಲಿ ಬ್ರೆಂಡನ್ ಮೆಕ್ಲಮ್ ಮತ್ತು ಗೌತಮ್ ಗಂಭೀರ್ ಇದ್ದಾರೆ.

ಇರ್ಫಾನ್ ಪಠಾಣ್ ಡೇರ್ ಡೆವಿಲ್ಸ್ ತಂಡದಲ್ಲಿ ಆಲ್‌ರೌಂಡರ್‌ನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೋಲ್ಕತ್ತದ ತಂಡದಲ್ಲಿ ಶಕೀಬ್ ಅಲ್ ಹಸನ್ ಇದ್ದಾರೆ. ಇವರಿಬ್ಬರೂ ಲೀಗ್ ಹಂತದಲ್ಲಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿರುವರು.

ಮಾರ್ನ್ ಮಾರ್ಕೆಲ್, ಉಮೇಶ್ ಯಾದವ್ ಮತ್ತು ವರುಣ್ ಆ್ಯರನ್ ಅವರು ಡೇರ್‌ಡೆವಿಲ್ಸ್ ತಂಡದ ಬೌಲಿಂಗ್ ವಿಭಾಗದ ಶಕ್ತಿ ಎನಿಸಿಕೊಂಡಿದ್ದಾರೆ. ಮಾರ್ಕೆಲ್ ಇದುವರೆಗೆ ನೀಡಿರುವ ಪ್ರದರ್ಶನ ಅದ್ಭುತ. ಒಟ್ಟು 25 ವಿಕೆಟ್‌ಗಳನ್ನು ಅವರು ಪಡೆದಿದ್ದಾರೆ. ರೈಡರ್ಸ್ ತಂಡ ಬ್ರೆಟ್ ಲೀ ಮತ್ತು ಲಕ್ಷ್ಮೀಪತಿ ಬಾಲಾಜಿ ಅವರನ್ನು ನೆಚ್ಚಿಕೊಂಡಿದೆ. ಕಳೆದ ಮೂರು ಪಂದ್ಯಗಳಲ್ಲಿ ಆಡದಿದ್ದ ಲೀ ಇಂದು ಕಣಕ್ಕಿಳಿಯುವ ಸಾಧ್ಯತೆಯಿದೆ.

ಆದರೆ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಮಾತ್ರ ನೈಟ್ ರೈಡರ್ಸ್ ಎದುರಾಳಿಗಿಂತ ಹೆಚ್ಚಿನ ಬಲ ಹೊಂದಿದೆ ಎನ್ನಬಹುದು. ಸುನಿಲ್ ನರೇನ್, ಇಕ್ಬಾಲ್ ಅಬ್ದುಲ್ಲಾ ಮತ್ತು ಶಕೀಬ್ ಅಲ್ ಹಸನ್ ಅವರ ಸಾನಿಧ್ಯ ಇದಕ್ಕೆ ಕಾರಣ. ವೆಸ್ಟ್ ಇಂಡೀಸ್‌ನ ನರೇನ್ ಅವರ ಬೌಲಿಂಗ್ ಎಲ್ಲ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಬಿಡಿಸಲಾಗದ ಒಗಟಾಗಿಯೇ ಉಳಿದುಕೊಂಡಿದೆ.

ಡೇರ್‌ಡೆವಿಲ್ಸ್ ತಂಡದ ಬ್ಯಾಟ್ಸ್ ಮನ್‌ಗಳು ನರೇನ್ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸುವುದು ಅಗತ್ಯ. ಲೀಗ್‌ನಲ್ಲಿ 13 ಪಂದ್ಯಗಳನ್ನು ಆಡಿರುವ ನರೇನ್ 22 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಕೆಟ್ ಪಡೆಯುವ ಜೊತೆ ರನ್‌ವೇಗಕ್ಕೆ ತಡೆಯೊಡ್ಡುವ ಸಾಮರ್ಥ್ಯ ಅವರಿಗೆ ಇದೆ.

ಕೋಲ್ಕತ್ತದ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಶನಿವಾರ ಇದೇ ಕ್ರೀಡಾಂಗಣದಲ್ಲಿ ಆಡಿತ್ತು. ಆ ಪಂದ್ಯದಲ್ಲಿ ಸ್ಪಿನ್ನರ್‌ಗಳ ನೆರವಿನಿಂದ ತಂಡಕ್ಕೆ ಸುಲಭ ಗೆಲುವು ಒಲಿದಿತ್ತು. ಇದು ಗಂಭೀರ್ ಬಳಗದ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದಂತೂ ನಿಜ.

ತಂಡಗಳು

ಡೆಲ್ಲಿ ಡೇರ್‌ಡೆವಿಲ್ಸ್: ವೀರೆಂದ್ರ ಸೆಹ್ವಾಗ್ (ನಾಯಕ), ಮಾಹೇಲ ಜಯವರ್ಧನೆ, ಡೇವಿಡ್ ವಾರ್ನರ್, ಇರ್ಫಾನ್ ಪಠಾಣ್, ಉಮೇಶ್ ಯಾದವ್, ವರುಣ್ ಆ್ಯರನ್, ನಮನ್ ಓಜಾ, ಶಹಬಾಜ್ ನದೀಮ್, ಮಾರ್ನ್ ಮಾರ್ಕೆಲ್, ರಾಸ್ ಟೇಲರ್, ವೇಣುಗೋಪಾಲ್ ರಾವ್, ರೆಲೋಫ್ ವಾನ್ ಡೆರ್ ಮೆರ್ವ್, ಯೋಗೇಶ್ ನಗರ್, ಆ್ಯಂಡ್ರೆ   ರಸೆಲ್, ಉನ್ಮುಕ್ತ್ ಚಂದ್, ಅಜಿತ್ ಅಗರ್ಕರ್, ಪವನ್ ನೇಗಿ.

ಕೋಲ್ಕತ್ತ ನೈಟ್ ರೈಡರ್ಸ್: ಗೌತಮ್ ಗಂಭೀರ್ (ನಾಯಕ), ಬ್ರೆಂಡನ್ ಮೆಕ್ಲಮ್, ಜಾಕ್ ಕಾಲಿಸ್, ಮನೋಜ್ ತಿವಾರಿ, ಯೂಸುಫ್ ಪಠಾಣ್, ದೇವವ್ರತ ದಾಸ್, ರಜತ್ ಭಾಟಿಯಾ, ಸುನಿಲ್ ನರೇನ್, ಬ್ರೆಟ್ ಲೀ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಪ್ರದೀಪ್ ಸಂಗ್ವಾನ್, ಶಕೀಬ್ ಅಲ್ ಹಸನ್, ಲಕ್ಷ್ಮೀಪತಿ ಬಾಲಾಜಿ, ರ‌್ಯಾನ್ ಟೆನ್ ಡಾಶ್ಕೆ, ಜೈದೇವ್ ಉನದ್ಕತ್, ಲಕ್ಷ್ಮಿ ರತನ್ ಶುಕ್ಲಾ.

ಪಂದ್ಯದ ಆರಂಭ: ರಾತ್ರಿ 8.00ಕ್ಕೆ
ನೇರ ಪ್ರಸಾರ: ಸೆಟ್‌ಮ್ಯಾಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT