ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನಗರದಲ್ಲಿ ಆರ್ಚ್ ಬಿಷಪ್‌ಗಳ ಧರಣಿ

Last Updated 17 ಫೆಬ್ರುವರಿ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಚರ್ಚ್‌ಗಳ ಮೇಲಿನ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಯುಕ್ತ ಕ್ರಿಶ್ಚಿಯನ್ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಆರ್ಚ್ ಬಿಷಪ್‌ಗಳು ನಗರದಲ್ಲಿ ಶುಕ್ರವಾರ (ಫೆ.18) ಧರಣಿ ನಡೆಸಲಿದ್ದಾರೆ.

‘ನಗರದ ಎಂ.ಜಿ.ರಸ್ತೆಯಲ್ಲಿರುವ ಸೇಂಟ್ ಮಾರ್ಕ್ಸ್ ಕೆಥೆಡ್ರಲ್ ಆವರಣದಲ್ಲಿ ಸಾಂಕೇತಿಕ ಧರಣಿ ನಡೆಸಿದ ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ವಿವಿಧ ಜಿಲ್ಲೆಗಳ 18 ಮಂದಿ ಆರ್ಚ್ ಬಿಷಪ್‌ಗಳು ಧರಣಿಯಲ್ಲಿ ಭಾಗವಹಿಸಲಿದ್ದಾರೆ.ನ್ಯಾ. ಸೋಮಶೇಖರ್ ಆಯೋಗ ಸಲ್ಲಿಸಿರುವ ವರದಿ ನ್ಯಾಯಯುತವಾಗಿಲ್ಲ. ಹಾಗಾಗಿ ಆ ವರದಿಯನ್ನು ತಿರಸ್ಕರಿಸಿ ಎಂದು ಇದೇ 21ರಂದು ನಗರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಚರ್ಚ್ ದಾಳಿಯಲ್ಲಿ ಬಜರಂಗದಳ ಮತ್ತು ಶ್ರೀರಾಮಸೇನೆ ಸಂಘಟನೆಗಳ ಕೈವಾಡವಿರಬಹುದೆಂದು ಸಂಶಯ ವ್ಯಕ್ತಪಡಿಸಿತ್ತು.ಆದರೆ ಅಂತಿಮ ವರದಿಯಲ್ಲಿ ಆ ಸಂಘಟನೆಗಳಿಗೆ ಕ್ಲೀನ್ ಚಿಟ್ ನೀಡಿರುವುದು ಸಂಶಯ ಮೂಡಿಸಿದೆ.ಹಾಗಾದರೆ ಚರ್ಚ್‌ಗಳ ಮೇಲೆ ದಾಳಿ ನಡೆಸಿರುವವರ್ಯಾರು ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಪೊಲೀಸರು ಸುಮಾರು 80 ಮಂದಿ ಕ್ರಿಶ್ಚಿಯನ್ನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಇದರಿಂದಾಗಿ ಅವರು ಎರಡು ವರ್ಷಗಳಿಂದ ಸಾಕಷ್ಟು ಹಿಂಸೆ ಅನುಭವಿಸುವಂತಾಗಿದೆ.ಹಾಗಾಗಿ ಅವರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ದಾಳಿ ಸಂದರ್ಭದಲ್ಲಿ ಚರ್ಚ್‌ಗಳಿಗೆ ಸಾಕಷ್ಟು ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು’ ಎಂದು ಅವರು ಆಗ್ರಹಿಸಿದರು.ವೇದಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ.ಎಸ್.ಅಂತೋಣಿ ಸ್ವಾಮಿ, ಜಯನಾಥನ್ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT