ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಇಲಾಖೆಯಲ್ಲಿ ಹೀಗೊಂದು ಕರಾಮತ್ತು!

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆಯ ಆರೋಪ ಎದುರಿಸುತ್ತಿರುವ ಕೆಇಬಿ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷರೂ ಆದ ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ವೆಂಕಟಶಿವಾರೆಡ್ಡಿ ಅವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮತ್ತು ಐದು ವಿದ್ಯುತ್ ಸರಬರಾಜು ಕಂಪೆನಿಗಳ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದಕ್ಕೆ ಇಂಧನ ಇಲಾಖೆಯಲ್ಲೇ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

2007ರ ಡಿಸೆಂಬರ್‌ನಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ವೆಂಕಟಶಿವಾರೆಡ್ಡಿ ವಿರುದ್ಧ ಇದೇ ಜುಲೈನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ಇನ್ನೂ ವಿಚಾರಣೆ ಬಾಕಿ ಇದೆ. ಆದರೆ ತನಿಖೆ ಪೂರ್ಣಗೊಳ್ಳುವ ಮೊದಲೇ ಪ್ರಮುಖ ಸ್ಥಾನವಾದ ನಿರ್ದೇಶಕರ ಹುದ್ದೆಗೆ ಅವರನ್ನು ನೇಮಕ ಮಾಡಿರುವ ಸರ್ಕಾರದ ಕ್ರಮ ಅಚ್ಚರಿಯನ್ನುಂಟು ಮಾಡಿದೆ.

ದಾಳಿಯಾದ ಸಂದರ್ಭದಲ್ಲಿ 12.20 ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿತ್ತು. ಈ ಪೈಕಿ 3.89 ಕೋಟಿ ರೂಪಾಯಿ ಅಧಿಕೃತವಾಗಿ ಗಳಿಸಿರುವ ಆದಾಯವಾಗಿದ್ದು, 8.31 ಕೋಟಿ ರೂಪಾಯಿ ಅಂದರೆ ಶೇ 213ರಷ್ಟು ಅಕ್ರಮ ಆಸ್ತಿ ಗಳಿಸಿರುವ ಆರೋಪ ಅವರ ಮೇಲಿದೆ. ದಾಳಿಯಿಂದಾಗಿ ಅಮಾನತುಗೊಂಡಿದ್ದ ಅವರನ್ನು ಆರು ತಿಂಗಳ ನಂತರ ಮತ್ತೆ ನೇಮಕ ಮಾಡಿದಾಗ ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಹಿಂದೆ ಅಮಾನತುಗೊಂಡಿರುವುದಲ್ಲದೆ, ಇನ್ನೂ ತನಿಖೆ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕಾಗಿ ಒಂದೂವರೆ ವರ್ಷದಿಂದ ಇಲಾಖಾ ಬಡ್ತಿ ಸಮಿತಿ ಅವರ ಹೆಸರನ್ನು ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆಯ ಬಡ್ತಿಗೆ ಪರಿಗಣಿಸಿರಲಿಲ್ಲ. ಆದರೆ ಈಗ ಅದೇ ವ್ಯಕ್ತಿಯನ್ನು ಎಸ್ಕಾಂಗಳ ಅತ್ಯುನ್ನತ ಹುದ್ದೆಗಳಲ್ಲಿ ಒಂದಾದ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

`ಕೆಇಬಿ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷರನ್ನು ಪದನಿಮಿತ್ತವಾಗಿ ನಿರ್ದೇಶಕರನ್ನಾಗಿ ನೇಮಕ ಮಾಡಲು ಅವಕಾಶವಿದೆ. ಆ ಪ್ರಕಾರ ಇದುವರೆಗೆ ಎಲ್.ರವಿ ಅಧ್ಯಕ್ಷರಾಗಿದ್ದರು. ಆದರೆ ಈಚೆಗೆ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ವೆಂಕಟಶಿವಾರೆಡ್ಡಿ ಆಯ್ಕೆಯಾಗಿದ್ದಾರೆ. ಹೀಗಾಗಿ ರವಿ ಸ್ಥಾನಕ್ಕೆ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ~ ಎನ್ನುತ್ತವೆ ಇಲಾಖೆಯ ಮೂಲಗಳು.

`ಸಂಘದ ಅಧ್ಯಕ್ಷರಿಗೆ ನಿರ್ದೇಶಕರ ಒಂದು ಸ್ಥಾನ ನೀಡಲು ಅವಕಾಶ ಇರುವುದರಿಂದ ಸಹಜವಾಗಿಯೇ ನಿರ್ದೇಶಕರಾಗುತ್ತಾರೆ ಎಂಬುದು ನಿಜ. ಆದರೆ ಕಡ್ಡಾಯವಾಗಿ ಕೊಡಲೇಬೇಕು ಎಂದು ಕಾನೂನಿನಲ್ಲಿ ಇಲ್ಲ. ಎಸ್ಕಾಂಗಳ ಆಡಳಿತ ಮಂಡಳಿ ಮತ್ತು ಸಂಘದ ನಡುವೆ ಆಗಿರುವ ಪರಸ್ಪರ ಹೊಂದಾಣಿಕೆಯಿಂದಾಗಿ ಕೆಲ ವರ್ಷಗಳಿಂದ ಈಚೆಗೆ ಸಂಘದ ಅಧ್ಯಕ್ಷರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಲಾಗುತ್ತಿದೆ ಅಷ್ಟೇ.

ಆದರೆ ಹಾಲಿ ಅಧ್ಯಕ್ಷರು ಅಕ್ರಮ ಆಸ್ತಿ ಗಳಿಕೆಯ ಆರೋಪ ಎದುರಿಸುತ್ತಿರುವುದರಿಂದ ನೇಮಕ ಮಾಡಿರುವುದು ಸರಿಯಲ್ಲ~ ಎಂಬುದು ಇಲಾಖೆಯ ಕೆಲ ಅಧಿಕಾರಿಗಳ ಅಭಿಪ್ರಾಯ.

`ಅಧ್ಯಕ್ಷರಿಗೆ ನಿರ್ದೇಶಕ ಸ್ಥಾನ ನೀಡಬೇಕು ಎಂಬ ಮಾತ್ರಕ್ಕೆ ಯಾರಿಗೆ ಬೇಕಾದರೂ ಕೊಡಬಹುದು ಎಂಬುದು ಅದರ ಅರ್ಥ ಅಲ್ಲ. ಅವರ ಹಿನ್ನೆಲೆ, ಸೇವಾ ದಾಖಲೆಗಳನ್ನೂ ನೋಡಬೇಕಾಗುತ್ತದೆ. ಕ್ರಿಮಿನಲ್ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ರೆಡ್ಡಿ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ.
 
ಈ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರವೇ ಕುಮ್ಮಕ್ಕು ನೀಡಿದಂತಾಗಿದೆ. ಇದನ್ನು ಗಮನಿಸಿದರೆ ಲೋಕಾಯುಕ್ತ ದಾಳಿಗೆ ಒಳಗಾಗಿರುವ ಬೇರೆ ಅಧಿಕಾರಿಗಳೂ ಮುಂದೆ ಉನ್ನತ ಸ್ಥಾನಗಳಿಗೆ ಹೋಗಬಹುದು~ ಎಂದು ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

`ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಸರ್ಕಾರ. ರೆಡ್ಡಿ ಅವರು ಲೋಕಾಯುಕ್ತ ದಾಳಿಗೆ ಒಳಗಾಗಿರುವ ವಿಷಯ ನನಗೆ ಗೊತ್ತಿಲ್ಲ~ ಎಂಬುದಾಗಿ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ರವಿಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT