ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಎಸ್‌ಐ ಆಸ್ಪತ್ರೆಗೆ ಸರ್ಕಾರದ ಸಹಕಾರ: ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ

Last Updated 24 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐ)ವು ದೊಡ್ಡಬಳ್ಳಾಪುರ ಹಾಗೂ ಬೊಮ್ಮಸಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತಲಾ 100 ಹಾಸಿಗೆ ಆಸ್ಪತ್ರೆಗಳಿಗೆ ಜಾಗ ನೀಡುವ ಸಂಬಂಧ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಭರವಸೆ ನೀಡಿದರು.

ನಗರದಲ್ಲಿ ಗುರುವಾರ ಇಎಸ್‌ಐ ನಿಗಮ ಹಾಗೂ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ ಏರ್ಪಡಿಸಿದ್ದ ನಿಗಮದ ವಜ್ರ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ನಿಗಮದ ಸೇವೆಗಳನ್ನು ಬಳಸಿಕೊಳ್ಳುವಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ. ಇದಕ್ಕೆ ರಾಜ್ಯದ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಲ್ಲಿ ಸಚಿವರಾಗಿರುವುದೇ ಕಾರಣ’ ಎಂದು ಅಭಿಪ್ರಾಯಪಟ್ಟರು.

1958ರಲ್ಲಿ ಕಾರ್ಯಾರಂಭ ಮಾಡಿದ ನಿಗಮವು ಆಗ ಕೇವಲ ರೂ. 400 ಮಾಸಿಕ ಆದಾಯ ಪಡೆಯುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುತ್ತಿತ್ತು. 2008ರಿಂದ ಆದಾಯದ ಮಿತಿಯನ್ನು ರೂ. 15,000ಕ್ಕೆ ಹೆಚ್ಚಿಸಲಾಗಿದ್ದು, ರಾಜ್ಯದ 15 ಲಕ್ಷ ನೌಕರರ 75 ಲಕ್ಷ ಅವಲಂಬಿತರಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡಬಹುದಾಗಿದೆ.

ಮೈಸೂರು, ಹುಬ್ಬಳ್ಳಿ ಹಾಗೂ ದಾವಣಗೆರೆ ಆಸ್ಪತ್ರೆಗಳನ್ನು ತಲಾ ರೂ. 25 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಹಾಗೂ ದಾಂಡೇಲಿ ಆಸ್ಪತ್ರೆಯನ್ನು ರೂ. 2 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕೆಲಸ ಸಾಗಿದೆ’ ಎಂದು ಹೇಳಿದರು.

ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ ಸಚಿವ ಖರ್ಗೆ ಅವರ ಶ್ರಮದಿಂದ ರೂ. 900 ಕೋಟಿ ವೆಚ್ಚದಲ್ಲಿ ಗುಲ್ಬರ್ಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಬೆಂಗಳೂರಿನ ರಾಜಾಜಿನಗರದಲ್ಲಿ ರೂ. 168 ಕೋಟಿ ವೆಚ್ಚದಲ್ಲಿ ಮಾದರಿ ಆಸ್ಪತ್ರೆ ಹಾಗೂ ಸ್ನಾತಕೋತ್ತರ ಕೇಂದ್ರವನ್ನು ತೆರೆಯಲಾಗಿದೆ.

ಮುಂಬರುವ ದಿನಗಳಲ್ಲಿ ಶೇ. 70ರಷ್ಟು ಕಾರ್ಮಿಕರು ನೆಲೆಸಿರುವ ಬೆಂಗಳೂರು ಸುತ್ತಮುತ್ತಲ ಕೈಗಾರಿಕಾ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗುವುದು’ ಎಂದು ಸಚಿವರು ನುಡಿದರು.

ವೈದ್ಯರ ಕೊರತೆ: ಸೂಪರ್ ಸ್ಪೆಷಾಲಿಟಿ ವೈದ್ಯರ ಕೊರತೆ ನಿಗಮಕ್ಕೆ ಎದುರಾಗಿದ್ದು, ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಗತ್ಯಕ್ಕೆ ತಕ್ಕಷ್ಟು ವೈದ್ಯರನ್ನು ಆಯ್ಕೆ ಮಾಡಿ ಕೊಡಬೇಕು ಎಂದು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದರು.

20 ಲಕ್ಷಕ್ಕೆ ಏರಿಕೆ: ಪ್ರಸ್ತುತ ರಾಜ್ಯದಲ್ಲಿ ಇಎಸ್‌ಐ ನಿಗಮದ ವ್ಯಾಪ್ತಿಯಲ್ಲಿ 15 ಲಕ್ಷ ವಿಮಾದಾರರು ಇದ್ದು, ಖಾಸಗಿ ಶಾಲೆ ಶಿಕ್ಷಕರನ್ನು ನಿಗಮದ ವ್ಯಾಪ್ತಿಗೆ ತರಲು ಮಾತುಕತೆ ನಡೆದಿದ್ದು, ಈ ನಿರ್ಧಾರ ಜಾರಿಗೆ ಬಂದರೆ ಒಟ್ಟು ವಿಮಾ ರಕ್ಷಣೆಗೆ ಒಳಪಡುವವರ ಸಂಖ್ಯೆ 20 ಲಕ್ಷಕ್ಕೆ ಏರಿದಂತಾಗುತ್ತದೆ ಎಂದು ನುಡಿದರು.

ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ರಮೇಶ್ ಬಿ.ಝಳಕಿ ಮಾತನಾಡಿ, ‘ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ವಿಮಾದಾರ ಹಾಗೂ ವಿಮಾ ನಿಗಮ ರಥಕ್ಕೆ ಇರುವ ನಾಲ್ಕು ಚಕ್ರಗಳಂತೆ ಇವೆ. ಈ ಮೂಲಕ ವಿಮಾದಾರರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವುದು ಆದ್ಯ ಕರ್ತವ್ಯವಾಗಿದೆ. ನಿಗಮವು ಇಲ್ಲಿವರೆಗೆ ಗಳಿಸಿದ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಮುನ್ನಡೆಯಲಿ’ ಎಂದು ಹಾರೈಸಿದರು.

‘ಆಸ್ಪತ್ರೆಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರ್ಕಾರ ನೀಡಬೇಕು’ ಎಂದು ಹೇಳಿದರು.

ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಜೋಸ್ ಚೆರಿಯಾನ್ ಮಾತನಾಡಿ, ‘ಇಡೀ ದೇಶದಲ್ಲೇ ಇಎಸ್‌ಐ ಯೋಜನೆಯು ಸುಮಾರು 5 ಕೋಟಿ ಮಂದಿ ಒಳಪಡುವ ಬೃಹತ್ ಆರೋಗ್ಯ ಭದ್ರತಾ ಯೋಜನೆಯಾಗಿದೆ.

ಮುಂಬರುವ ದಿನಗಳಲ್ಲಿ ಆರೋಗ್ಯ ಮೇಳ ಹಾಗೂ ವಿವಿಧ ಕಚೇರಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗುವುದು’ ಎಂದು ತಿಳಿಸಿದರು.

ನಿಗಮದ ವೈದ್ಯಕೀಯ ನಿರ್ದೇಶಕಿ ಡಾ.ರಹಿಮುನ್ನೀಸಾ, ರಾಜಾಜಿನಗರ ಮಾದರಿ ಆಸ್ಪತ್ರೆಯ ಸ್ನಾತಕೋತ್ತರ ವಿಭಾಗದ ಡೀನ್ ಡಾ.ಬಿ.ರಾಜೀವಶೆಟ್ಟಿ, ಮಾದರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎ.ಕೆ.ಖೋಖರ್, ನಿಗಮದ ರಾಜ್ಯ ವೈದ್ಯಕೀಯ ಆಯುಕ್ತ ಡಾ.ಬಿ.ಆರ್.ಕವಿಶೆಟ್ಟಿ ಉಪಸ್ಥಿತರಿದ್ದರು.

ರಾಜಾಜಿನಗರ ಮಾದರಿ ಆಸ್ಪತ್ರೆಯ ವಾರ್ತಾಪತ್ರ ‘ದರ್ಪಣ’ವನ್ನು ಸಚಿವರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT