ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇಟಲಿ- ಪ್ರವಾಸಿಗರ ಆಕರ್ಷಣೆ'

Last Updated 17 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: `ಮಧುಚಂದ್ರಕ್ಕೆ ಬರುವವರಿಗೆ ನಮ್ಮ ದೇಶದ ಬಾಗಿಲು ಸದಾ ತೆರೆದಿದೆ. ಮೋಡಿಮಾಡುವ ಕಡಲ ತೀರಗಳು, ಆಕರ್ಷಕ ಪರ್ವತಗಳು, ಮೋಹಕ ಸರೋವರಗಳು ಮತ್ತು ತಂಪಾದ ಹವಾಮಾನ ಅವರಿಗೆ ಕಾದಿವೆ' ಎಂದು ಇಟಲಿ ಪ್ರವಾಸೋದ್ಯಮ ಮಂಡಳಿ ಪ್ರಧಾನ ನಿರ್ದೇಶಕ ಡಾ. ಮಾರ್ಕೊ ಬ್ರುಸಿನಿ ಹೇಳಿದರು.


ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್ ಆವರಣದಲ್ಲಿ ಏರ್ಪಡಿಸಿರುವ ಇಟಲಿ ಪ್ರವಾಸೋದ್ಯಮ ಕುರಿತ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪ್ರಾಚೀನ ಸ್ಮಾರಕಗಳು, ವಾಣಿಜ್ಯ ಕೇಂದ್ರಗಳು, ಉತ್ಕೃಷ್ಟ ಸ್ಪಾಗಳು, ತಹರೇವಾರಿ ಆಹಾರ ಪದಾರ್ಥಗಳು, ಸೂಜಿಗಲ್ಲಿನಂತೆ ಸೆಳೆಯುವ ಫ್ಯಾಷನ್ ವಸ್ತ್ರಗಳು, ಇಟಲಿ ಸಂಸ್ಕೃತಿಯನ್ನು ಅನಾವರಣ ಮಾಡುವ ಸಂಸ್ಕೃತಿ ಹಬ್ಬಗಳು ಪ್ರವಾಸಿಗರನ್ನು ರಂಜಿಸಲಿವೆ' ಎಂದು ತಿಳಿಸಿದರು. ಪ್ರದರ್ಶನದಲ್ಲಿ ಛಾಯಾಚಿತ್ರ, ಕಲಾಕೃತಿ, ಸಂಗೀತ ಮತ್ತು ಸಂಸ್ಕೃತಿಗಳ ಕಣ್ಣಿನಿಂದ ಇಟಲಿಯನ್ನು ಕಾಣುವ ಯತ್ನ ಮಾಡಲಾಗಿದೆ.

ಜಗತ್ಪ್ರಸಿದ್ಧ ಛಾಯಾಗ್ರಾಹಕ ರಿನೊ ಬೆರಿಲಾರಿ ತೆಗೆದ ಅಪರೂಪದ ಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. 162 ಸಲ ಇಟಲಿ ಸುತ್ತಿರುವ ಬೆರಿಲಾರಿ, 76 ಕ್ಯಾಮೆರಾ ಬಳಸಿ 20 ಲಕ್ಷ ಚಿತ್ರಗಳನ್ನು ತೆಗೆದಿದ್ದಾರಂತೆ. ಇಟಲಿಯಲ್ಲಿ ಅವರು ಸೆರೆ ಹಿಡಿದಿರುವ ಚಿತ್ರದ ಫಿಲಂ ಸುರುಳಿಯನ್ನು ಒಂದರ ಪಕ್ಕ ಒಂದನ್ನು ಬಿಚ್ಚಿ ಜೋಡಿಸುತ್ತಾ ಹೋದರೆ ಅದರ ಉದ್ದ 81,000 ಕಿ.ಮೀ. ಉದ್ದ ಆಗುವುದಂತೆ.

ಭಾರತೀಯ ಕಲಾವಿದರು ಇಟಲಿ ದೃಶ್ಯ ವೈಭವವನ್ನು ತಮ್ಮ ಕುಂಚದಲ್ಲಿ ಅರಳಿಸಿದ ಬಗೆಯೂ ಇಲ್ಲಿ ಕಾಣಸಿಗುತ್ತದೆ. ಬೆನಿಫರ್ ಬರುಚಾ ಅವರಿಗೆ ಇಟಲಿಯ ತಿಳಿನೀಲಿ ಆಕಾಶದಲ್ಲಿ ತೇಲಿಬಂದ ಮೋಡಗಳು ಹತ್ತಿ ಉಂಡೆಗಳನ್ನೇ ಹಿಂಜಿ ಬಿಟ್ಟಂತೆ ಭಾಸವಾಗಿದೆ. ಸಮಿತ್ ದಾಸ್, ಅಲ್ಲಿಯ ಸ್ಮಾರಕ, ಕಲೆ ಮತ್ತು ಸಂಸ್ಕೃತಿ ವೈಭವವನ್ನು ಹದವಾಗಿ ಬೆರೆಸಿ ಕೋಲಾಜ್ ಮಾಡಿದ್ದಾರೆ.

`ಕಳೆದ ಐದು ವರ್ಷಗಳಲ್ಲಿ ನಮ್ಮ ದೇಶಕ್ಕೆ ಬರುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 94ರಷ್ಟು ಹೆಚ್ಚಳವಾಗಿದೆ. 2010ರಲ್ಲಿ 1.97 ಲಕ್ಷ ಜನ ಭೇಟಿ ನೀಡಿದರೆ, ಈ ವರ್ಷ 4.61 ಲಕ್ಷ ಜನ ಬಂದಿದ್ದಾರೆ. ಈ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವ ಉದ್ದೇಶವಿದೆ' ಎಂದು ಬ್ರುಸಿನಿ ವಿವರಿಸಿದರು.

ಇದೇ 21ರವರೆಗೆ ಪ್ರದರ್ಶನ ನಡೆಯಲಿದ್ದು, 1950ರ ದಶಕದಿಂದ ಇದುವರೆಗಿನ ವಸ್ತ್ರ ವಿನ್ಯಾಸ ವೈಭವದ ಫ್ಯಾಷನ್ ಶೋ, ಇಟಲಿ ಚಲನಚಿತ್ರ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರದರ್ಶನಕ್ಕೆ ಬಂದವರಿಗೆಲ್ಲ ಲಾವಜಾ ಎಕ್ಸ್‌ಪ್ರೆಸ್ ಕಾಫಿಯನ್ನು ಉಚಿತವಾಗಿ ಪೂರೈಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT