ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪರಂಪರೆಯ ಕೋಟುಮಚಗಿ

Last Updated 19 ಜೂನ್ 2011, 9:40 IST
ಅಕ್ಷರ ಗಾತ್ರ

ಗದಗ ಜಿಲ್ಲೆಯ ಕೋಟುಮಚಗಿ  ಗ್ರಾಮಕ್ಕೆ ದೊಡ್ಡ ಇತಿಹಾಸವೇ ಇದೆ. ಜೈನ, ಬ್ರಾಹ್ಮಣ, ವೀರಶೈವ ಸಂಸ್ಕೃತಿಯನ್ನು ಮೇಳೈಸಿಕೊಂಡು ಇಂದಿಗೂ ತನ್ನ ಘನತೆಯನ್ನು ಉಳಿಸಿಕೊಂಡಿದೆ. 

ಗ್ರಾಮದಲ್ಲಿ ದೊರೆತಿರುವ ಶಾಸನದಲ್ಲಿ  ಉಮ್ಮಚಗಿ  ವುಮ್ಮಚಗಿ  ಎಂದು ಉಲ್ಲೇಖಗೊಂಡರೆ, ಜೈನ ಬಸದಿಯಲ್ಲಿರುವ ದೇವನಾಗರಿ ಲಿಪಿಯ ಶಾಸನದಲ್ಲಿ (16ನೇ ಶತಮಾನದ ರಾಷ್ಟ್ರಕೂಟ ಅರಸರ ಕಾಲಕ್ಕೆ)  ಸದಾಶಿವರಾಯಸಮುದ್ರ ಎಂದು ಉಲ್ಲೇಖಗೊಂಡಿದೆ.

ವಿಜಯನಗರದ ಅರಸ ಸದಾಶಿವರಾಯನು ಕಟ್ಟಿಸಿದ ಕೆರೆಯ ಹೆಸರೂ ಬಂದಿರಬಹುದು. ಈ ಕೆರೆಯು ಊರಿನ ಪೂರ್ವಕ್ಕಿದೆ. ಇಲ್ಲಿನ ಕಲ್ಲು ಮರಡಿ ಮೇಲೆ ಬಹುಶಃ  ಕೋಟೆ ಇದ್ದಿರಬೇಕು ಜೈನರಿದ್ದ ಕಾರಣ ಹುಮ್ಮಚಗಿ, ಕೋಟೆ ಹುಮ್ಮಚಗಿ ಹೀಗೆ ಕೋಟುಮಚಗಿ ಆಗಿರಬಹುದು ಎಂಬುದು  ವಿದ್ವಾಂಸರ ಅಭಿಪ್ರಾಯ. 

 ಕ್ರಿ.ಶ. 11-12 ನೆಯ ಶತಮಾನದಲ್ಲಿ  ಪ್ರಾಚೀನ ವಿದ್ಯಾ ಕೇಂದ್ರವಾಗಿ ಪ್ರಸಿದ್ಧಿ ಪಡೆದ ಅಗ್ರಹಾರವಾಗಿತ್ತು. ಇಲ್ಲಿನ  ಕಲ್ಮೇಶ್ವರ  ಮಂದಿರದಲ್ಲಿ  ಶಾಸನವು (ಕ್ರಿ.ಶ. 1012) ಚಾಲುಕ್ಯ ದೊರೆ 5ನೆಯ ವಿಕ್ರಮಾದಿತ್ಯನ ದಂಡನಾಯಕ ಕೇಶಿಮಯ್ಯನು ಅರಸನ ಅಪ್ಪಣೆಯನ್ನು ಪಡೆದು ಉಮಚಗಿಯನ್ನು ಅಗ್ರಹಾರವನ್ನಾಗಿ ಪರಿವರ್ತನೆ ಮಾಡಿದ.

ಆಗ ಉಮಚಗಿಯನ್ನು  ನೋಡಿಕೊಳ್ಳುತ್ತಿದ್ದ  ಮೌನರಸ ಅದನ್ನು  ರೋಣದ ಶ್ರೀಧರಭಟ್ಟ ಎಂಬವನಿಗೆ ದಾನಮಾಡಿದ.  ಮುಂದೆ ಶ್ರೀಧರಭಟ್ಟನು ಅದರ ಹಕ್ಕು ಭಾಧ್ಯತೆಗಳನ್ನು ಉಳಿಸಿಕೊಂಡು ಉಮಚಗಿ ಅಗ್ರಹಾರವನ್ನು 104 ಮಹಾಜನರಿಗೆ ಹಂಚಿಕೊಟ್ಟನು. ಈ ಅಗ್ರಹಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನೀಡಲಾಗುತ್ತಿತ್ತು.

ಅಲ್ಲಿ  ವೇದ, ವೇದಾಂಗ, ನ್ಯಾಯ, ಪುರಾಣ, ಇತಿಹಾಸ, ನ್ಯಾಯ, ಮತ್ತು ವ್ಯಾಕರಣಗಳನ್ನು ಕಲಿಸುತ್ತಿದ್ದರು. ಅವುಗಳನ್ನು ಗಣಿತ, ಜ್ಯೋತಿಷ್ಯ, ಛಂದಸ್ಸು, ಅಲಂಕಾರಗಳಲ್ಲಿ ಪ್ರಕಾಂಡ ಪಂಡಿತನಾಗಿದ್ದ ಅಕ್ಕರಿಗ ನಾಗದೇಸಿಗನೆಂಬ ಉಪಾಧ್ಯಾಯ ಬೋಧನೆ ಮಾಡುತ್ತಿದ್ದ. 

ಈ ವತ್ತಿಗಾಗಿ ಈತನಿಗೆ 23 ಮತ್ತರ ಭೂಮಿ ಮತ್ತು ಒಂದು ಮನೆಯನ್ನು ನೀಡಲಾಗಿತ್ತು. ಈತನೊಂದಿಗೆ ಪರಿಣತಿಯನ್ನು ಹೊಂದಿದ ಇತರ ಅಧ್ಯಾಪಕರಿದ್ದರು.ಅವರಿಗೆ  ಭಟ್ಟ ಎಂದು, ವಿದ್ಯಾರ್ಥಿಗಳನ್ನು  ಛಾತ್ರ ರೆಂದು ಕರೆಯುತ್ತಿದ್ದರು. ಅಧ್ಯಾಪಕರಿಗೆ 50 ಮತ್ತರ ಭೂಮಿ ಮತ್ತು ಒಂದು ಮನೆಯನ್ನು, ವಿದ್ಯಾರ್ಥಿಗಳಿಗೆ 25 ಮತ್ತರ ಭೂಮಿಯನ್ನು ದಾನ-ದತ್ತಿಯಾಗಿ ನೀಡುತ್ತಿದ್ದರು.     

ಗ್ರಾಮದ ಪಶ್ಚಿಮದ ಕೆರೆಯದಂಡೆಯ ಮೇಲಿನ ಸೋಮೆಶ್ವರ ದೇವಾಲಯದಲ್ಲಿರುವ ಶಾಸನವು (ಕ್ರಿ.ಶ.1142) ದಂಡನಾಯಕ ಕೇಶಿರಾಜಯ್ಯನು ಸೋಮೆಶ್ವರ ದೇವರಿಗೆ ದಾನ ನೀಡಿದ ಉಲ್ಲೇಖವಿದೆ.  ಈ ದೇವಾಲಯದ ಎದುರಿನ ನಂದಿ ಕಂಬದಲ್ಲಿರುವ  ಉಮ್ಮಚಗಿ ಅಗ್ರಹಾರ ಎಂದಿದೆ.
 
ಮುಂದೆ ಚಾಲುಕ್ಯ ಅರಸರು ಈ ದೇವಾಲಯ ಮತ್ತು ಅಗ್ರಹಾರಕ್ಕಾಗಿ ಸುಮಾರು 200 ಎಕರೆ ಭೂಮಿಯನ್ನು ದತ್ತಿ ನೀಡಿದರು. ಆಗ ಚಂದ್ರಭಟ್ಟನೆಂಬ ಪಂಡಿತನು ಇಲ್ಲಿನ ಅಗ್ರಹಾರದ ವಿದ್ಯಾರ್ಥಿಗಳಿಗೆ ನ್ಯಾಸ(ಖಗೋಳಶಾಸ್ತ್ರ), ಪ್ರಾಕೃತಗಳನ್ನು ಕಲಿಸುತ್ತಿದ್ದನೆಂದು ತಿಳಿದುಬರುತ್ತದೆ.

ಅಂದಿನ ಅಗ್ರಹಾರವುಳ್ಳ ಸೋಮೆಶ್ವರದೇವಾಲಯವು  ಇಂದು ಅವನತಿ ಹೊಂದಿ, ಕೇವಲ ಮಹಾದ್ವಾರ, ಗರ್ಭಗೃಹಗಳು ಪಳೆಯುಳಿಕೆಗಳಾಗಿ ಉಳಿದಿವೆ. ದೇವಾಲಯವನ್ನು ಈಗ ನವೀಕರಣದ ಹಿನ್ನೆಲೆಯಲ್ಲಿ  ಅದರ ಮೂಲರೂಪವನ್ನು ಸಿಮೆಂಟಿನಿಂದ ಮುಚ್ಚಲಾಗಿದೆ.

ಪ್ರಭುಲಿಂಗ ಲೀಲೆಯನ್ನು ಬರೆದ ಕವಿ ಚಾಮರಸನ ಜನ್ಮಸ್ಥಳ ನಾರಾಯಣಪುರವು ಇಲ್ಲಿಂದ ಐದು ಕಿ.ಮೀ ದೂರದಲ್ಲಿದೆ.  ಈ ದೇವಾಲಯವು ಬಹಳಷ್ಟು ನವೀಕರಣದಿಂದ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ದೇವಾಲಯದ ಶಿಲ್ಪ ಕಲೆಯು ಪೂರ್ತಿ ಹಾಳಾಗಿದೆ.

ಗ್ರಾಮದ ಮಧ್ಯದಲ್ಲಿ ಜೀರ್ಣೋದ್ಧಾರಗೊಂಡ ಜೈನಬಸದಿ ಇದೆ.  ಅಲ್ಲಿನ ಶಾಸನವು ಎಣ್ಣೆ ಸುರಿಸಿಕೊಂಡು ಜಿಡ್ಡುಕಟ್ಟಿ ನಿಂತಿದೆ. ಈಗ ಇಲ್ಲಿ ಬೆರಳೆಣಿಕೆಷ್ಟು ಜೈನರ ಮನೆತನಗಳಿವೆ. ಹಿಂದೆ ಇವರೇ ಈ ಊರಿನ   ಗೌಡರಾಗಿದ್ದರಂತೆ.
 
ಇಲ್ಲಿ ಜೈನ, ಬ್ರಾಹ್ಮಣ, ವೀರಶೈವ ಧರ್ಮವರು ತ್ರಿವೇಣಿ ಸಂಗಮದಂತೆ ಸೌಹಾರ್ದಯುತವಾಗಿ ಬದುಕಿದ ಕೀರ್ತಿ ಕೊಟುಮಚಗಿಗೆ ಇದೆ. ಇತಿಹಾಸ ಪರಂಪರೆಯುಳ್ಳ ಕೊಟುಮಚಗೆಯ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT