ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಪರಮಾಣು ಸ್ಥಾವರ; ಪಶ್ಚಿಮ ರಾಷ್ಟ್ರಗಳಿಗೆ ಸೆಡ್ಡು

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): `ಪರಮಾಣು ಶಕ್ತಿ~ ಪ್ರದರ್ಶಿಸಿ ಪಶ್ಚಿಮ ದೇಶಗಳಿಗೆ ಸೆಡ್ಡು ಹೊಡೆದಿರುವ ಇರಾನ್. ಅಣು ಸ್ಥಾವರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅತ್ಯಾಧುನಿಕ ವೇಗ ವರ್ಧಕಗಳನ್ನು (ಕೇಂದ್ರಾಪಗಾಮಿ ಯಂತ್ರ) ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ ಎಂದು ರಾಜತಂತ್ರಜ್ಞರೊಬ್ಬರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಪರಿವೀಕ್ಷಕರ ತಂಡ ಇರಾನ್ ಪರಮಾಣು ಬಿಕ್ಕಟ್ಟನ್ನು ಹೋಗಲಾಡಿಸಲು ಆ ರಾಷ್ಟ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ  ವಿಯನ್ನಾ ಮೂಲದ ರಾಜತಂತ್ರಜ್ಞರೊಬ್ಬರು ಈ ವಿಷಯ ತಿಳಿಸಿದ್ದಾರೆಂದು ಬಿಬಿಸಿ ವರದಿ ಮಾಡಿದೆ.

ಇರಾನ್ ಪರಮಾಣು ವಿದ್ಯುತ್ ಉತ್ಪಾದನೆ ಮತ್ತು ಅಣ್ವಸ್ತ್ರ ತಯಾರಿಕೆಗೆ ಅಗತ್ಯವಾದ ಸಂವರ್ಧಿತ ಯುರೇನಿಯಂ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ವೇಗ ವರ್ಧಕಗಳ ಸ್ಥಾಪನೆಗೆ ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ, ಇದಕ್ಕೆ ವಿಶ್ವಸಂಸ್ಥೆಯ ಪರಮಾಣು ಕಾರ್ಯಕ್ರಮಗಳ ನಿಗಾ ಘಟಕವಾದ ಅಂತರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐಎಇಎ) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಶ್ವಸಂಸ್ಥೆಯ ಪರಿವೀಕ್ಷಕರ ತಂಡ ಇರಾನ್‌ಗೆ ಈ ವಾರದಲ್ಲಿ ಮತ್ತೆ ಭೇಟಿ ನೀಡಿ, ಪರಮಾಣು ಕಾರ್ಯಕ್ರಮ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.

ಕಳೆದ ತಿಂಗಳು ಅಲ್ಲಿಗೆ ಭೇಟಿ ನೀಡಿದ್ದ ತಂಡಕ್ಕೆ ಕೆಲವು ಅಣು ಸ್ಥಾವರಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು ಮತ್ತು ವಿಜ್ಞಾನಿಗಳ ಭೇಟಿಗೂ ಅವಕಾಶವನ್ನೂ   ನೀಡಿರಲಿಲ್ಲ.

`ಆತುರದ ದಾಳಿ: ದುಷ್ಪಪರಿಣಾಮಕ್ಕೆ ದಾರಿ~

ಲಂಡನ್ (ಪಿಟಿಐ): ಇರಾನ್ ಪರಮಾಣು ಕಾರ್ಯಕ್ರಮ ವಿಸ್ತರಣೆಯಿಂದ ಪರ್ಶಿಯನ್ ಕೊಲ್ಲಿಯಲ್ಲಿ ಉದ್ವಿಗ್ನ ಸ್ಥಿತಿ ಇದೆ. ಈ ಸಂದರ್ಭದಲ್ಲಿ ಆ ರಾಷ್ಟ್ರದ ಮೇಲೆ ಆತುರಾತುರವಾಗಿ ಸೇನಾ ಕಾರ್ಯಾಚರಣೆ ನಡೆಸಿದರೆ ಭಾರಿ ದುಷ್ಪರಿಣಾಮ ಎದುರಾಗುತ್ತದೆ ಎಂದು ಇಸ್ರೇಲ್‌ಗೆ ಎಚ್ಚರಿಕೆ ನೀಡಿರುವ ಬ್ರಿಟನ್, ತಾಳ್ಮೆ ವಹಿಸುವಂತೆ ಸಲಹೆ ನೀಡಿದೆ.

`ಆತುರದಲ್ಲಿ ಇರಾನ್ ಅಣು ಸ್ಥಾವರಗಳ ಮೇಲೆ  ದಾಳಿ ನಡೆಸುವ ನಿರ್ಧಾರ ಸರಿಯಾದುದಲ್ಲ. ಆ ರಾಷ್ಟ್ರದ ಮೇಲೆ ಹೇರಿರುವ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿ ಒತ್ತಡ ಹೇರುವ ತಂತ್ರ ಮುಂದುವರಿಸುವುದು ಮತ್ತು ಆ ಮೂಲಕ ಮಾತುಕತೆಗೆ ಬರುವಂತೆ ಮಾಡಲು ನಮ್ಮ ಬೆಂಬಲ ಇದೆ~ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ ಹೇಗ್ ತಿಳಿಸಿದ್ದಾರೆ.

`ಇರಾನ್ ವಿಷಯದಲ್ಲಿ ಎಲ್ಲಾ ಆಯ್ಕೆಗಳು ಮುಕ್ತಾವಾಗಿವೆ ಎನ್ನುವುದು ನಿಜ. ಆದರೆ, ಸೇನಾ ಕಾರ್ಯಾಚರಣೆಯಿಂದ ಘೋರ ಪರಿಣಾಮ ಉಂಟಾಗುತ್ತದೆ~ ಎಂದು ಅವರು `ಡೈಲಿ ಟೆಲಿಗ್ರಾಫ್~ ಪತ್ರಿಕೆಗೆ ತಿಳಿಸಿದ್ದಾರೆ.

ಇರಾನ್ ಪರಮಾಣು ತಂತ್ರಜ್ಞಾನವನ್ನು ಅಣ್ವಸ್ತ್ರ ತಯಾರಿಕೆಗೆ ಬಳಕೆ ಮಾಡುತ್ತಿದೆ ಎಂದು ಇಸ್ರೇಲ್, ಬ್ರಿಟನ್, ಅಮೆರಿಕ ಸೇರಿದಂತೆ ಇನ್ನಿತರ ಪಾಶ್ಚಾತ್ಯ ರಾಷ್ಟ್ರಗಳು ಬಲವಾಗಿ ಶಂಕಿಸಿವೆ. ಈ ವಿಚಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಅಂತರರಾಷ್ಟ್ರೀಯ ಘಟನಾವಳಿ ವೀಕ್ಷಕರು, ಇಸ್ರೇಲ್ ಇರಾನ್ ಮೇಲೆ ದಾಳಿಗೆ ಮುಂದಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬ್ರಿಟನ್ ತಾಳ್ಮೆ ವಹಿಸುವಂತೆ ಇಸ್ರೇಲ್‌ಗೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT