ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಎಲ್ಲವೂ ದುರವಸ್ಥೆ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅದು ಕಳೆದ ಗಣರಾಜ್ಯೋತ್ಸವ ಸಮಾರಂಭ. ವಿದ್ಯಾರ್ಥಿಗಳ ಪಥಸಂಚಲನ ಆಕರ್ಷಕವಾಗಿತ್ತು. ಆದರೆ ಪ್ರೇಕ್ಷಕರು ಕರವಸ್ತ್ರದಿಂದ ಪದೇ ಪದೇ ಮುಖ ಒರೆಸಿಕೊಳ್ಳುತ್ತಿದ್ದರು. ಪಥಸಂಚಲನದಿಂದ ಮೈದಾನದಲ್ಲಿ ಭಾರೀ ಪ್ರಮಾಣದಲ್ಲಿ ದೂಳು ಎದ್ದಿದ್ದು ಇದಕ್ಕೆ ಕಾರಣ. ಜನಪ್ರತಿನಿಧಿಗಳಂತೂ ಮುಜುಗರಕ್ಕೆ ಒಳಗಾಗಬೇಕಾಯಿತು.

-ದಾವಣಗೆರೆ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಪರಿಸ್ಥಿತಿ ಹೇಗಿದೆ ಎಂಬ ಚಿತ್ರಣವನ್ನು ಕಟ್ಟಿಕೊಡಲು ಇಂತಹ ಹಲವು ನಿದರ್ಶನಗಳನ್ನು ನೀಡಬಹುದು.
ಇಲ್ಲಿನ ಕ್ರೀಡಾಂಗಣ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದ್ದು, ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಇದು, ಇಲ್ಲಿನ ಕ್ರೀಡಾ ಕ್ಷೇತ್ರದ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದಲ್ಲದೇ, ಸಂಘ ಸಂಸ್ಥೆಗಳ, ರಾಜಕೀಯ ಪಕ್ಷಗಳ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಮಣ್ಣಿನ ಟ್ರ್ಯಾಕ್ ಇನ್ನಷ್ಟೂ ಹಾಳಾಗುತ್ತಿದೆ.

ನಿತ್ಯವೂ ಇಲ್ಲಿ, ಯುವಕರು, ಮಕ್ಕಳು ಹಲವು ಗುಂಪುಗಳಾಗಿ ಕ್ರಿಕೆಟ್ ಆಡುತ್ತಾರೆ. ಇದರಿಂದ ಅಥ್ಲೀಟ್‌ಗಳಿಗೆ ತೊಂದರೆಯಾಗುತ್ತಿದೆ. ಕ್ರಿಕೆಟ್ ಆಡುವವರ ಮಧ್ಯೆ `ಓಟದ ಅಭ್ಯಾಸ' ನಡೆಸಬೇಕಾದ ಸ್ಥಿತಿ ಅಥ್ಲೀಟ್‌ಗಳದ್ದು. ಇಲ್ಲಿ ಕ್ರಿಕೆಟ್ ಆಡುವವರ ಒತ್ತಡಕ್ಕೆ ಮಣಿದು, ಸಿಂಥೆಟಿಕ್ ಟ್ರ್ಯಾಕ್ ಯೋಜನೆ ಬೇರೆಡೆಗೆ ಸ್ಥಳಾಂತರಗೊಂಡಿತು ಎಂಬ `ಆರೋಪ'ವೂ ಅಥ್ಲೀಟ್‌ಗಳ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆಯೂ ಇಲ್ಲಿಲ್ಲ. ಹೀಗಾಗಿ ಜಡಿ ಮಳೆ ಸುರಿದಾಗ ಮೈದಾನ ಕೆಂಪುಮಣ್ಣಿನ ಕೆಸರು ಗದ್ದೆಯಂತಾಗುತ್ತದೆ. ಟ್ರ್ಯಾಕ್‌ನ ಡ್ರೈನೇಜ್ ಕೆಲವೆಡೆ ಮುಚ್ಚಿ ಹೋಗಿದೆ. ಔಟರ್ ಡ್ರೈನೇಜ್ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕ್ರೀಡಾಂಗಣದ ಒಂದು ಬದಿಯಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗಿದೆಯಾದರೂ, ಪ್ರಯೋಜನ ಆಗುತ್ತಿಲ್ಲ. ತೊಟ್ಟಿ ಸುತ್ತಲೂ ಕಲ್ಲುಮಣ್ಣಿನ ರಾಶಿ ಬಿದ್ದಿರುವುದು ನಿರ್ವಹಣೆಯ ಕೊರತೆಗೆ ಕನ್ನಡಿ ಹಿಡಿದಂತಿದೆ. ಒಂದು ಭಾಗದಲ್ಲಿ ಹಿಂದೆ ಇದ್ದ ಪ್ರವೇಶ ದ್ವಾರಕ್ಕೆ ತಡೆಗೋಡೆ ಹಾಕಲಾಗಿದೆ. ಕಬ್ಬಿಣದ ಗೇಟು ಮುರಿದುಬಿದ್ದಿದ್ದು ತುಕ್ಕುಹಿಡಿಯುತ್ತಿದೆ.

ಆ ಸ್ಥಳ `ಡಂಪಿಂಗ್ ಯಾರ್ಡ್'ನಂತಾಗಿದೆ. ಕಸ ಕಡ್ಡಿ, ಮದ್ಯದ ಬಾಟಲಿಗಳು, ಬೀಡಿ, ಸಿಗರೇಟ್ ಪ್ಯಾಕ್‌ಗಳು ಬಿದ್ದಿದ್ದು, ಆ ಭಾಗದ ಸಮೀಪದಲ್ಲಿ ಕ್ರೀಡಾಪಟುಗಳು ಅಭ್ಯಾಸ ನಡೆಸಲಾರದಷ್ಟು ಅಸಹನೀಯ ಸ್ಥಿತಿಯಿದೆ. ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆಯೇ, ಎಡಭಾಗದಲ್ಲಿ ಒಳಚರಂಡಿಗೆ ಹಾಕಿದ್ದ ತಡೆಗೋಡೆ ಮುರಿದು ಚರಂಡಿಯೊಳಕ್ಕೇ ಬಿದ್ದಿದೆ. ಅಲ್ಲಲ್ಲಿ ಭಾರಿ ಗಾತ್ರದ ಚಪ್ಪಡಿಗಳು ಅನಾಥವಾಗಿ ಬಿದ್ದಿವೆ. ಅಭ್ಯಾಸ ನಡೆಸುವ ಕ್ರೀಡಾಪಟುಗಳು ಎಚ್ಚರತಪ್ಪಿದರೆ ಅನಾಹುತ ಕಟ್ಟಿಟ್ಟಬುತ್ತಿ. ಕೆಲವರು, ಬಿದ್ದು ಗಾಯಗೊಂಡಿದ್ದೂ ಇದೆ. ಇಲ್ಲಿ ಅಳವಡಿಸುವ `ಸ್ಕೋರ್ ಬೋರ್ಡ್' ತುಕ್ಕುಹಿಡಿಯುತ್ತಿದೆ. ಇದರ ಆಸರೆಯೊಂದಿಗೆ ಮುಳ್ಳಿನ ಗಿಡವೊಂದು ಬೆಳೆಯುತ್ತಿದೆ. ಕೆಲವು ವಾರ ಬಿಟ್ಟರೆ ಮುಳ್ಳಿನಗಿಡ ಸ್ಕೋರ್ ಬೋರ್ಡ್ ಎತ್ತರಕ್ಕೆ ಬೆಳೆಯುತ್ತದೆ !

ನಾಲ್ಕು ದಶಕಗಳ ಹಿಂದೆ ಉದ್ಘಾಟನೆಗೊಂಡಿರುವ ವ್ಯಾಯಾಮ ಶಾಲೆ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆಯೇ ಇದೆ. ಅದೇ ಕಟ್ಟಡದಲ್ಲಿ ಪೆವಿಲಿಯನ್ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕೊಠಡಿ ಇದೆ.  ಕಟ್ಟಡದ ಗೋಡೆಯ ಕೆಲವು ಭಾಗ ಬಿರುಕು ಬಿಟ್ಟಿದೆ.
ಕ್ರೀಡಾಂಗಣದಲ್ಲಿ `ಹಣ ಪಾವತಿಸಿ ಬಳಸುವ ವ್ಯವಸ್ಥೆ'  ಶೌಚಾಲಯ ವ್ಯವಸ್ಥೆ ಇದೆ. ಮುಂಜಾನೆ ವಾಯುವಿಹಾರಕ್ಕೆ ಬರುವವರು, ಶೌಚಾಲಯದ ಬದಲಿಗೆ, ಕ್ರೀಡಾಂಗಣದ ಯಾವುದಾದರೂ ಒಂದು ಭಾಗದಲ್ಲಿ `ಪ್ರಕೃತಿ ಕರೆ' ಮುಗಿಸಿಬಿಡುವ ಪ್ರಸಂಗಗಳೇ ಹೆಚ್ಚು.

  ಪಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ಬರುವವರಿಗೆ ಈ ಶೌಚಾಲಯ ಹೆಚ್ಚು ಅನುಕೂಲ ಆಗುತ್ತಿದೆ. ಕ್ರೀಡಾಕೂಟಗಳು ಅಥವಾ ತರಬೇತಿ ನಡೆಯುವಾಗ, ಕ್ರೀಡಾಪಟುಗಳಿಗೆ `ಡ್ರೆಸ್ಸಿಂಗ್ ರೂಂ' ವ್ಯವಸ್ಥೆ ಇಲ್ಲ. ಸುತ್ತಲೂ ಶಾಮಿಯಾನ ಕಟ್ಟಿ `ತಾತ್ಕಾಲಿಕ ಡ್ರೆಸ್ಸಿಂಗ್ ರೂಂ' ಮಾಡಿಕೊಳ್ಳಬೇಕು. ಕ್ರೀಡಾಂಗಣದ ಮಧ್ಯ ಭಾಗದಲ್ಲಿ ನೀರು ಸಿಂಪಡಿಸಲು ಸೂಕ್ತ ವ್ಯವಸ್ಥೆ ಇಲ್ಲಯೇ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ದೂಳು ತುಂಬಿಕೊಂಡಿದೆ.

`ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಕ್ರೀಡಾಂಗಣದ ಪೆವಿಲಿಯನ್‌ನಲ್ಲಿ ನೀರಿನ ತೊಟ್ಟಿ ಇದೆಯಾದರೂ ಅಲ್ಲಿ ನೀರು ಬಂದಿದ್ದನ್ನು ಕಂಡವರೇ ಇಲ್ಲ. ರಾತ್ರಿ ಕಾವಲುಗಾರ ಇ್ದ್ದದರಾದರೂ, ಅವರಿಂದ ಕ್ರೀಡಾಂಗಣದ ಒಳಗೆ ಪ್ರವೇಶಿಸುವವರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಮೂಲಸೌಲಭ್ಯದ ಕೊರತೆ ಇರುವುದರಿಂದ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಬರುತ್ತಿಲ್ಲ' ಎನ್ನುತ್ತಾರೆ ಕೋಚ್ ಸಂತೋಷ್.

`ಜಿಮ್ನಾಷಿಯಂನಲ್ಲಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅಭ್ಯಾಸ ನಡೆಸುವ ಸಲಕರಣೆಗಳು ಹಳತಾಗಿವೆ.  ಜನಪ್ರತಿನಿಧಿಗಳು ಬಂದು ವೀಕ್ಷಿಸಿ ಹೋಗುತ್ತಾರೆಯೇ ಹೊರತು ಸುಧಾರಣೆಗೆ ಕ್ರಮ ಕೈಗೊಂಡಿಲ್ಲ. ಇದರಿಂದ ಆತಂಕದಲ್ಲಿಯೇ ಅಭ್ಯಾಸ ನಡೆಸುವಂತಾಗಿದೆ' ಎಂದು ನಿತ್ಯವೂ ಅಭ್ಯಾಸಕ್ಕೆ ಬರುವ ವಿನಯ್ ಹೇಳುತ್ತಾರೆ.

`ಹಿಂದೆ ಈ ಕ್ರೀಡಾಂಗಣದಲ್ಲಿ 12 ಮಂದಿ ತರಬೇತುದಾರರಿದ್ದರು. ಪ್ರಸ್ತುತ, ಕುಸ್ತಿ, ಕಬಡ್ಡಿ ಹಾಗೂ ಕೊಕ್ಕೊಗೆ ಮಾತ್ರ ತರಬೇತುದಾರರಿದ್ದಾರೆ. ಕ್ರೀಡಾಪಟುಗಳ ಅನುಕೂಲಕ್ಕೆ ಅಗತ್ಯ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕು' ಎನ್ನುತ್ತಾರೆ ಕ್ರೀಡಾಪ್ರೇಮಿ ತಾರಾನಾಥ್.

ದಾವಣಗೆರೆಯವರೇ ಆದ ಎಸ್.ಎಸ್. ಮಲ್ಲಿಕಾರ್ಜುನ ಅವರು ಕ್ರೀಡಾ ಸಚಿವರಾಗಿದ್ದಾಗ ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕೃತಕ ಗೋಡೆ ನಿರ್ಮಿಸಲಾಯಿತು. ಸುತ್ತಲೂ ತಂತಿಬೇಲಿ ಅಳವಡಿಸಲಾಯಿತು. ಒಳಾಂಗಣ ಕ್ರೀಡಾಂಗಣ, ಈಜುಕೊಳ ಮಂಜೂರಾಗಿತ್ತು. ಪ್ರಸಕ್ತ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಸುಚೇತಾ ನೆಲವಗಿ ಅವರು ನಿಯೋಜನೆ ಮೇಲೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಅವರು, `ಕ್ರೀಡಾಂಗಣದ ಮೂಲಸೌಕರ್ಯ ಸುಧಾರಿಸಲು, ಶೌಚಾಲಯ ನಿರ್ಮಿಸಲು, ಪೆವಿಲಿಯನ್ ಬ್ಲಾಕ್ ನಿರ್ಮಾಣ ಮಾಡಲು ಒಂದು ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಿ ಎರಡು ಬಾರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ' ಎಂದರು.

............
ನಿಮ್ಮ ಅನಿಸಿಕೆಗಳನ್ನು ಬರೆಯಿರಿ
email: kreede@ prajavani.co.in,

feedbacksports@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT