ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಜಿಲ್ಲಾಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲ!

Last Updated 5 ಅಕ್ಟೋಬರ್ 2012, 6:10 IST
ಅಕ್ಷರ ಗಾತ್ರ

ಬಳ್ಳಾರಿ: ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ, ನಿವೇಶನ ಮಾರುವ ಮೂಲಕ ಸಾರ್ವಜನಿಕರ ದಿಕ್ಕು ತಪ್ಪಿಸು ತ್ತಿದ್ದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಕ್ರಮವನ್ನು ಕಂಡೂ ಕಾಣದಂತೆ ಸುಮ್ಮನಿರುವ ಪ್ರಕರಣ ಜಿಲ್ಲೆಯ ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಭೂ ಒಡೆತನದ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ  ನಡೆಯುತ್ತಿದ್ದರೂ, ಕೃಷಿ ಜಮೀನನ್ನು ಕೃಷಿಯೇತರ ಎಂದು ಪರಿವರ್ತಿಸದೆ, ಬಡಾವಣೆ ನಿರ್ಮಾಣಕ್ಕೆ ಅನುಮತಿಯನ್ನೂ ಪಡೆಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಜಿಲ್ಲಾಧಿಕಾರಿಯವರೇ ಸೂಚಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ.

ವಡ್ಡು ಗ್ರಾಮದ 262ನೇ ಸರ್ವೆ ನಂಬರ್‌ನ 6.16 ಎಕರೆ ಜಾಗದ ಮಾಲೀಕತ್ವ ಕುರಿತ ವಿವಾದ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಆದರೆ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ವಾಡಾ) ಹಾಗೂ ಕಂದಾಯ ಇಲಾಖೆಯಿಂದ ಅನುಮತಿ ಪಡೆಯದೆ, ಕೃಷಿ ಜಮೀನನ್ನು ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸದೆ ನಿವೇಶನಗಳನ್ನು ಬಸವರಾಜಯ್ಯ ಎಂಬುವವರು ಮಾರಾಟ ಮಾಡುತ್ತಿದ್ದು,

ನಿವೇಶನ ಖರೀದಿಸಿರುವ ಸಾರ್ವಜನಿಕರು ಮನೆಗಳನ್ನೂ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಚಾಮುಂಡೇಶ್ವರಿ ಎಂಬುವವರು ಎರಡು ವರ್ಷಗಳ ಹಿಂದೆಯೇ ಕೂಡ್ಲಿಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣ ಇತ್ಯರ್ಥವಾಗುವವರೆಗೆ ಜಮೀನನ್ನು ಪರಭಾರೆ ಮಾಡದಂತೆ ನ್ಯಾಯಾಲಯ ಆದೇಶಿಸಿದೆ. ಆದರೂ, ನಿವೇಶನಗಳ ಮಾರಾಟ ಪ್ರಕ್ರಿಯೆ, ಮನೆ ನಿರ್ಮಾಣ ಮಾತ್ರ ನಿಂತಿಲ್ಲ.

ಬಸವರಾಜಯ್ಯ ಅವರ ಸೋದರ ಸಂಬಂಧಿ ಪಂಪಾಪತಿ ಅವರ ಪುತ್ರಿ ಚಾಮುಂಡೇಶ್ವರಿ ಅವರು ಭೂಮಿಯ ಒಡೆತನ ಕುರಿತು ಸಂಡೂರು ತಹಶೀಲ್ದಾರ್ ಹಾಗೂ ವಾಡಾ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ.

`ಸರ್ವೇ ನಂಬರ್ 262ಕ್ಕೆ ಅಂಟಿಕೊಂಡಿರುವ ಸರ್ವೇ ನಂಬರ್ 261ರ 1.48 ಎಕರೆ ಸರ್ಕಾರಿ ಜಮೀನಿನಲ್ಲಿ ಅರ್ಧದಷ್ಟು ಜಮೀನನ್ನು ಬಸವರಾಜಯ್ಯ ಅವರೇ ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಇದೆ.
 
ಗ್ರಾಮ ಪಂಚಾಯಿತಿ ಆಡಳಿತ ಕೂಡ ಒತ್ತುವರಿ ಮತ್ತು ಅನಧಿಕೃತ ಬಡಾವಣೆ ಕುರಿತು ಚಕಾರ ಎತ್ತಿಲ್ಲ~ ಎಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹರಿಜನ ಲಿಂಗಪ್ಪ, ಮಾಜಿ ಸದಸ್ಯರಾದ ಕೆ.ಜಿ. ಶಂಕರಪ್ಪ, ಅಗಸರ ಹಳ್ಳಪ್ಪ, ಡಿ.ಮಲಿಯಪ್ಪ, ಪರಶುರಾಮ, ಧರ್ಮರಾಜು ಅವರು ವಾಡಾ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದಾರೆ.

ತೋರಣಗಲ್‌ಗೆ ಅಂಟಿಕೊಂಡಿರುವ ವಡ್ಡು ಗ್ರಾಮದ ಬಹುತೇಕ ರೈತರ ಜಮೀನು ಜಿಂದಾಲ್ ಉಕ್ಕಿನ ಕಾರ್ಖಾನೆಗಾಗಿ ಭೂಸ್ವಾಧೀನವಾಗಿದ್ದು, ಪಕ್ಕದಲ್ಲೇ ಇರುವ ಗ್ರಾಮದ ಇನ್ನುಳಿದ ರೈತರ ಜಮೀನಿಗೆ ಭಾರಿ ಬೆಲೆ ಬಂದಿದೆ. ಅಲ್ಲದೆ, ಅನೇಕ ಜನರು ಅನುಮತಿ ಯನ್ನೂ ಪಡೆಯದೆ ಅಕ್ರಮವಾಗಿ ನೂರಾರು ಮನೆಗಳನ್ನು ಕಟ್ಟಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.

`ಗ್ರಾಮದ 161 ಬಿ/1, ಬಿ/2, ಬಿ/3, ಬಿ/4 ಸರ್ವೇ ನಂಬರ್‌ನ ಜಮೀನಿನಲ್ಲೂ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ. ಈ ಕುರಿತೂ ದೂರು ನೀಡಲಾಗಿದೆ. ಆದರೆ ಕ್ರಮ ಜರುಗಿಲ್ಲ~ ಎಂದು ಚಾಮುಂಡೇಶ್ವರಿ `ಪ್ರಜಾವಾಣಿ~ಗೆ ತಿಳಿಸಿದರು.

ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಕ್ರಮ ಬಡಾವಣೆ ಮತ್ತು ಒತ್ತುವರಿ ಕುರಿತಂತೆ ಸಂಡೂರು ತಹಶೀಲ್ದಾರ್ ಕಚೇರಿಯಿಂದ ತಮ್ಮ ಕಚೇರಿಯ ಗಮನ ಸೆಳೆಯಲಾಗಿದ್ದು, ಬಡಾವಣೆಯಲ್ಲಿ ನಿವೇಶನ ಮಾರಾಟ ಮತ್ತು ಮನೆ ನಿರ್ಮಾಣವನ್ನು ತಡೆಯುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸೆ. 28ರಂದೇ ವಡ್ಡು ಗ್ರಾಮದ ವಿವಾದಿತ ಭೂಮಿಗೆ ತೆರಳಿದ್ದ ತಹಶೀಲ್ದಾರ್ ತಿಮ್ಮಯ್ಯ ಅವರು, `ಇದು ಅನಧಿಕೃತ ಬಡಾವಣೆಯಾಗಿದ್ದು, ಮನೆ ನಿರ್ಮಿಸದಂತೆ ಸೂಚಿಸಿ, ತೋರಣಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ~ ಎಂದು ತಿಳಿಸಿದ್ದಾರೆ.

`ಅಕ್ರಮ ಬಡಾವಣೆ ಮತ್ತು ನಿವೇಶನ ಮಾರಾಟದ ಬಗ್ಗೆ ಕಂದಾಯ ಇಲಾಖೆ ಹಾಗೂ ವಾಡಾ ಅಧಿಕಾರಿಗಳು ಗಮನಹರಿಸಿ ನಿವೇಶಣ ಖರೀದಿ, ಮನೆ ನಿರ್ಮಾಣವನ್ನು ತಡೆಯಬೇಕು. ಈ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ವಿಲ್ಲ~ ಎಂದು ತೋರಣಗಲ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಚಂದನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT