ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊದಿಂದ 58 ಬಾಹ್ಯಾಕಾಶ ಕಾರ್ಯಕ್ರಮ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಂಗಳ ಮತ್ತು ಚಂದ್ರನಲ್ಲಿಗೆ ನೌಕೆ ಕಳುಹಿಸುವುದು, ದೇಶದ ಮೇಲೆ ನಿರಂತರವಾಗಿ ನಿಗಾ ಇಡುವಂತಹ ಉಪಗ್ರಹ ಉಡಾವಣೆ ಸೇರಿದಂತೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು 58 ಬಾಹ್ಯಾಕಾಶ ಯೋಜನೆಗಳನ್ನು ಜಾರಿಗೆ ತರಲು ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ಇಸ್ರೊ) ಚಿಂತಿಸುತ್ತಿದೆ.

ಜೊತೆಗೆ, ಏಳು ಉಪಗ್ರಹಗಳನ್ನು ಕಕ್ಷೆಗೆ ಹಾರಿ ಬಿಡುವ ಮೂಲಕ ತನ್ನದೇ ಆದ ಜಿಪಿಎಸ್‌ನ್ನು (ಉಪಗ್ರಹ ಆಧಾರಿದ ನಿಗಾ ವ್ಯವಸ್ಥೆ) ಸ್ಥಾಪಿಸಲು ಇಸ್ರೊ ಯೋಜಿಸಿದೆ.  ಈ ಏಳು ಉಪಗ್ರಹಗಳ ಸಮೂಹವು ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯನ್ನು (ಐಆರ್‌ಎನ್‌ಎಸ್‌ಎಸ್) ರಚಿಸಲಿವೆ.

ಕಳೆದವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿರುವ 12ನೇ ಪಂಚ ವಾರ್ಷಿಕ ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇಸ್ರೊ ಸಿದ್ಧತೆ ನಡೆಸಿದೆ. ನೂತನ ಪಂಚವಾರ್ಷಿಕ ಯೋಜನೆಯಲ್ಲಿ ಬಾಹ್ಯಾಕಾಶ ಇಲಾಖೆಗೆ ಒಟ್ಟು 39,750 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಡಿಟಿಎಚ್ ನಿರ್ವಾಹಕರಿಂದ, ಉಪಗ್ರಹ ಆಧಾರಿತ ಮೊಬೈಲ್ ಸಂವಹನ ಮತ್ತು ಹೊಸ ಪೀಳಿಗೆಯ ವಿಎಸ್‌ಎಟಿ ಬ್ರಾಡ್‌ಬಾಂಡ್ ವ್ಯವಸ್ಥೆಗಳಿಂದ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ  ಹೆಚ್ಚುವರಿಯಾಗಿ 400 ಟ್ರಾನ್ಸ್‌ಪಾಂಡರ್‌ಗಳನ್ನು (ರೇಡಿಯೊ ಸಂಜ್ಞೆಗಳನ್ನು ಗ್ರಹಿಸಿ ಸ್ವಯಂ ಆಗಿ ಬೇರೆ ಸಂಜ್ಞೆಗಳನ್ನು ಬಿತ್ತರಿಸುವ ಸಾಧನ) ಸ್ಥಾಪಿಸಲು ಇಸ್ರೊ ಯೋಜನೆ ರೂಪಿಸಿದೆ. ದೇಶದಲ್ಲಿ ಪ್ರಸಕ್ತ 187 ಟ್ರಾನ್ಸ್‌ಪಾಂಡರ್‌ಗಳಿವೆ.

`12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಒಟ್ಟು 58 ಯೋಜನೆಗಳ ಜಾರಿಗೆ ಚಿಂತನೆ ನಡೆಸಲಾಗಿದ್ದು, ಇವುಗಳಲ್ಲಿ  33 ಉಪಗ್ರಹಗಳ ಉಡಾವಣೆ ಮತ್ತು 25 ಉಡಾವಣಾ ವಾಹಕಗಳ ನಿರ್ಮಾಣ ಯೋಜನೆಗಳು ಸೇರಿವೆ~ ಎಂದು ಪಂಚವಾರ್ಷಿಕ ಯೋಜನೆಯ ದಾಖಲೆಯಲ್ಲಿ ಹೇಳಲಾಗಿದೆ.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT