ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ: ಬಗೆಹರಿಯದ ‘ಸೂಟ್’ ಸಮಸ್ಯೆ

Last Updated 18 ಡಿಸೆಂಬರ್ 2013, 5:48 IST
ಅಕ್ಷರ ಗಾತ್ರ

ರಾಯಚೂರು: ಈರುಳ್ಳಿ ಬೆಳೆ ಖರೀದಿ ಸಂದರ್ಭದಲ್ಲಿ ಪ್ರತಿ ಕ್ವಿಂಟಲ್‌ಗೆ ಒಂದೆ­ರಡು ಕೆ.ಜಿ ಈರುಳ್ಳಿ ಹೆಚ್ಚು ತೆಗೆಯು­ವುದು, ಖಾಲಿ ಚೀಲಕ್ಕೆ ಒಂದು ಕೆ.ಜಿ ಸೂಟ್ (ಚೀಲದ ತೂಕದ ಬದಲಾಗಿ 1 ಕೆ.ಜಿ ಈರುಳ್ಳಿ ಪಡೆಯುವುದು) ತೆಗೆಯು­ವುದರ ಬಗ್ಗೆ ರೈತರಿಗೆ ಆಗುತ್ತಿರುವ ಸಮಸ್ಯೆ ಹೋಗಲಾಡಿಸಬೇಕು. ಸೂಟ್ ರದ್ದುಪಡಿಸಬೇಕು ಎಂಬ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಒತ್ತಾಯದ ಮೇರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಂಗಳವಾರ ಸಂಜೆ ನಡೆದ ರೈತ ಸಂಘದ ಮುಖಂಡರು ಮತ್ತು ಖರೀದಿದಾರರ ಸಭೆ ಬರೀ ಚರ್ಚೆಯಲ್ಲೇ ಅಂತ್ಯಗೊಂಡಿತು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಎಪಿಎಂಸಿ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಂಜ್ ವರ್ತಕರ ಸಂಘದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ರೈತ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಲಕ್ಷ್ಮಣಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ನರಸಿಂಗ­ರಾವ್ ಹಾಗೂ ಇತರರು ಪಾಲ್ಗೊಂಡಿ­ದ್ದರು.

ರೈತರು ಈರುಳ್ಳಿ ಮಾರಾಟ ಮಾಡಲು ಬಂದಾಗ ಹೆಚ್ಚುವರಿ ಈರುಳ್ಳಿ ತೆಗೆದುಕೊಳ್ಳಬಾರದು. ಕ್ವಿಂಟಲ್‌ಗೆ ಒಂದು ಕೆ.ಜಿ ತೆಗೆದುಕೊಳ್ಳಬೇಕು. ಚೀಲದ ಸೂಟ್ ಹೆಸರಲ್ಲಿ ಮತ್ತೆ ಈರುಳ್ಳಿ ತೆಗೆದುಕೊಳ್ಳಬಾರದು ಎಂಬ ಬೇಡಿಕೆಯನ್ನು ರೈತರು ಇಟ್ಟಾಗ ವ್ಯಾಪಾರಸ್ಥರು ಒಪ್ಪಲಿಲ್ಲ. ಚೀಲದ ಸೂಟ್ ತೆಗೆಯಲೇಬೇಕಾಗುತ್ತದೆ. ಒಂದು ಚೀಲಕ್ಕೆ 10 ರೂಪಾಯಿ ಆಗುತ್ತದೆ. 10 ರೂಪಾಯಿ ರೈತರೇ ಕೊಡಲಿ. ಸೂಟ್ ತೆಗೆಯುವುದಿಲ್ಲ ಎಂದು ಉತ್ತರಿಸಿದರು.

ಚೀಲಕ್ಕೆ ಮತ್ತೆ ಹಣ ಕೊಡಲು ರೈತರು ಸಿದ್ದರಿಲ್ಲ. ಸೂಟ್ ಹೆಸರಲ್ಲಿ ಈರುಳ್ಳಿ ತೆಗೆದುಕೊಳ್ಳುವುದು ಬೇಡ ಎಂದು ರೈತ ಸಂಘಟನೆ ಮುಖಂಡರು ಒತ್ತಾಯಿಸಿದರು.

ಕೊನೆಗೆ ಮಧ್ಯಸ್ಥಿಕೆ ವಹಿಸಿದ ರೈತ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಅವರು, ಚೀಲಕ್ಕೆ 10 ರೂಪಾಯಿ ಆದರೆ ಕೇವಲ 5 ರೂಪಾಯಿ ವ್ಯಾಪಾರಸ್ಥರು ಕೊಡಲಿ. ರೈತರು 5 ರೂಪಾಯಿ ಕೊಡುತ್ತಾರೆ. ಆದರೆ, ಸೂಟ್ ಹೆಸರಲ್ಲಿ ಹೆಚ್ಚಿನ ಈರುಳ್ಳಿ ಪಡೆಯುವುದು ಬಂದ್ ಮಾಡಲೇಬೇಕು ಎಂದು ಹೇಳಿದರು.

ಆದರೆ, ವ್ಯಾಪಾರಸ್ಥರು ಒಪ್ಪದೇ ತಾವು ಈರುಳ್ಳಿ ಖರೀದಿಸಲೇಬೇಕು ಎಂಬುದಿಲ್ಲ. ಖರೀದಿಸಬೇಕಾದರೆ ಖರೀದಿಸುತ್ತೇವೆ. ಮಾರಾಟ ಮಾಡುವುದು ರೈತರಿಗೆ ಬಿಟ್ಟ ವಿಚಾರ. ನಮ್ಮ ನಿಲುವು ಇಷ್ಟೇ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಅವರು, ರೈತರೂ ಬೇರೆ ಕಡೆ ಹೋಗಿ ಈರುಳ್ಳಿ ಮಾರಾಟ ಮಾಡಿ ಬರಬ­ಹುದು. ಇಲ್ಲಿ ಎಪಿಎಂಸಿ ಎಂಬುದೊಂದು ಇದೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದು ಮಾರಾಟ ಮಾಡುತ್ತಾರೆ. ಖರೀದಿದಾರ ಧೋರಣೆ ಇದಾದರೆ ರೈತರೂ ಸಹ ತಮ್ಮ ಕೃಷಿ ಉತ್ಪನ್ನ ಮಾರಾಟಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.

ಸೋಮವಾರದವರೆಗೂ ಕಾಯ್ದು ನೋಡುತ್ತೇವೆ. ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಈ ಮಾರುಕಟ್ಟೆಗೆ ರೈತರು ಈರುಳ್ಳಿ ಮಾರಾಟ ಮಾಡಲು ತರದೇ ಬೇರೆ ಕಡೆ ಮಾರಾಟ ಮಾಡಿಕೊಳ್ಳಲು ಹೇಳಬೇಕಾಗುತ್ತದೆ. ಅಂಥ ಬೆಳೆವಣಿಗೆಗೆ ಖರೀದಿದಾರರು ಅವಕಾಶ ಕೊಡಬಾರದು ಎಂದು ಹೇಳುವ ಮೂಲಕ ಸಭೆಗೆ ಅಂತ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT