ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ: ರೂ 20 ಕೋಟಿ ನಷ್ಟ!

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗದಗ:  ಬೆಲೆ ಕುಸಿತದ ಭೀತಿಯಲ್ಲಿದ್ದ ಈರುಳ್ಳಿ ಬೆಳೆದ ರೈತರಿಂದ ಬೆಂಬಲ ಬೆಲೆಯಲ್ಲಿ 2.8 ಲಕ್ಷ ಕ್ವಿಂಟಲ್ ಈರುಳ್ಳಿ ಖರೀದಿಸಿದ ಸರ್ಕಾರ ಇದಕ್ಕಾಗಿ ರೂ 21.55 ಕೋಟಿ ವಿನಿಯೋಗಿಸಿತು. ನಂತರ ಇದನ್ನು   ಮಾರಿದ್ದಕ್ಕೆ ಸರ್ಕಾರಕ್ಕೆ ಸಿಕ್ಕಿದ್ದು ಮಾತ್ರ ರೂ 1.5 ಕೋಟಿ. ಒಟ್ಟಾರೆ ಈ ವ್ಯವಹಾರದಲ್ಲಿ ಸರ್ಕಾರಕ್ಕೆ ಆದ ನಷ್ಟ 20 ಕೋಟಿ ರೂಪಾಯಿ !

ಇದು ಗದಗ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಿ, ಮಾರಾಟ ಮಾಡಿದ ವ್ಯವಹಾರದ ಅಂಕಿ-ಅಂಶ. ಹೆಚ್ಚುವರಿ ಜಿಲ್ಲಾಧಿಕಾರಿಗಳು ನೀಡಿದ ಮಾಹಿತಿಯೇ ಸರ್ಕಾರಕ್ಕೆ ಆದ ನಷ್ಟವನ್ನು ಎತ್ತಿ ತೋರಿಸಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಬೆಲೆ ಕುಸಿದ ಹಿನ್ನೆಲೆಯಲ್ಲಿ ಸರ್ಕಾರ ಖರೀದಿ ಕೇಂದ್ರಗಳ ಮೂಲಕ ರೈತರಿಂದ ಈರುಳ್ಳಿ ಖರೀದಿಗೆ ಮುಂದಾಗಿತ್ತು. ಗದಗ, ಹುಬ್ಬಳ್ಳಿ, ಕೊಪ್ಪಳ ಹಾಗೂ ಬಾಗಲಕೋಟೆ ಮೊದಲಾದೆಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಎಲ್ಲ ಕೇಂದ್ರಗಳ ಪೈಕಿ ಗದಗಿನಲ್ಲಿ ಅತಿಹೆಚ್ಚು ಖರೀದಿ ನಡೆದಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಎರಡು ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಮೂರು ದರ್ಜೆಗಳಲ್ಲಿ 2,81,426 ಕ್ವಿಂಟಲ್ ಈರುಳ್ಳಿಯನ್ನು ಖರೀದಿಸಲಾಗಿತ್ತು. ಈ ಪೈಕಿ ಹೊರರಾಜ್ಯಕ್ಕೆ ಎ ದರ್ಜೆ-34,053 ಕ್ವಿಂಟಲ್, ಬಿ ದರ್ಜೆ-2,858 ಕ್ವಿಂಟಲ್ ಹಾಗೂ ಸಿ ದರ್ಜೆಯ 3,797 ಕ್ವಿಂಟಲ್ ಮಾರಾಟ ಮಾಡಿದೆ.  ಅಲ್ಲದೇ ಬೆಂಗಳೂರು, ಮೈಸೂರು, ದಾವಣಗೆರೆ ಮೊದಲಾದ ಜಿಲ್ಲೆಗಳಿಗೆ ಗದಗಿನಿಂದ 84,272 ಕ್ವಿಂಟಲ್ ಮಾರಾಟ ಮಾಡಿದೆ.
 
ಟಿಎಪಿಸಿಎಂಎಸ್ ಆವರಣದಲ್ಲಿ 2,413 ಕ್ವಿಂಟಲ್, ಕಾಟನ್‌ಸೇಲ್ ಸೊಸೈಟಿ ಆವರಣದಲ್ಲಿ 6,000 ಕ್ವಿಂಟಲ್ ಈರುಳ್ಳಿ ಕೊಳೆತು ನಷ್ಟವಾಗಿದೆ. ಉಳಿದ 1,56,940 ಈರುಳ್ಳಿಯನ್ನು ಜಿಲ್ಲಾಡಳಿತವು ವಿದ್ಯಾರ್ಥಿನಿಲಯಗಳಿಗೆ, ಅಕ್ಷರ ದಾಸೋಹ, ಪಡಿತರ ಅಂಗಡಿ ಮೂಲಕ ಹಂಚಿದೆ.

ಈರುಳ್ಳಿ ಮಾರಾಟದಿಂದ ಜಿಲ್ಲಾಡಳಿತಕ್ಕೆ ಈವರೆಗೆ ಬಂದಿರುವ ಹಣ ರೂ  1.32 ಕೋಟಿ ಮಾತ್ರ. ಇನ್ನೂ ಹೆಚ್ಚೆಂದರೆ ರೂ 25-30 ಲಕ್ಷ ಬಾಕಿ ಬರಬಹುದು ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರೇಗೌಡ.
ರೈತರಿಗೆ ಸರ್ಕಾರ ಈಗ ಒಟ್ಟಾರೆ ರೂ 18.33 ಕೋಟಿ  ನೀಡಬೇಕಿದೆ. ಇದರ ಜೊತೆಗೆ ಸಾಗಾಣಿಕೆ, ಸೆಸ್, ಹಮಾಲಿ ವೆಚ್ಚ ಸೇರಿದಂತೆ ಒಟ್ಟು ರೂ 21.55 ಕೋಟಿ ವ್ಯಯ ಮಾಡಿದೆ. ಸರ್ಕಾರ ಜಿಲ್ಲಾಡಳಿತಕ್ಕೆ ರೂ 12.5 ಕೋಟಿ  ಬಿಡುಗಡೆ ಮಾಡಿದ್ದು, ಇದರಲ್ಲಿ ರೂ 9 ಕೋಟಿಯನ್ನು ಈರುಳ್ಳಿ ಮಾರಿರುವ ರೈತರಿಗೆ ಬುಧವಾರದಿಂದ ವಿತರಣೆ ಮಾಡುವುದಾಗಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT