ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಪ್ರತಿಭಟನೆ

ಕ್ಯಾರಿ ಓವರ್‌ನಲ್ಲಿ ಬದಲಾವಣೆಗೆ ಒತ್ತಾಯ
Last Updated 3 ಆಗಸ್ಟ್ 2013, 12:44 IST
ಅಕ್ಷರ ಗಾತ್ರ

ಉಡುಪಿ: ಹತ್ತು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಮುಂದಿನ ತರಗತಿಗೆ ವಿದ್ಯಾರ್ಥಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಕ್ಯಾರಿ ಓವರ್ ನಿಯಮದಲ್ಲಿ ಬದಲಾವಣೆ ತರುವಂತೆ ಆಗ್ರಹಿಸಿ ಉಡುಪಿಯ ವಿವಿಧ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಉಪವಾಸ ನಡೆಸಿದರು.

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್ ನಿಯಮದಿಂದ ಸಮಸ್ಯೆ ಆಗಿದೆ. ಈಗಿನ ನಿಯಮದ ಪ್ರಕಾರ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮಾತ್ರ ಮುಂದಿನ ತರಗತಿಗೆ ಪ್ರವೇಶ ಪಡೆಯಬಹುದಾಗಿದೆ. ಇದರಿಂದಾಗಿ ಕರಾವಳಿ ಕರ್ನಾಟಕ ಭಾಗದ ಸುಮಾರು 5ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆಯಲಾಗದು. ಈ ಬಗ್ಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಹಲವು ಬಾರಿ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಕಳೆದ ವರ್ಷವೂ ಈ ಕ್ಯಾರಿ ಓವರ್ ನಿಯಮದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು, ಹೈಕೋರ್ಟ್ ವೆುಟ್ಟಿಲೇರಿದ ಪರಿಣಾಮ ಕೋರ್ಟ್ ಆದೇಶದಂತೆ ವಿದ್ಯಾರ್ಥಿಗಳಿಗೆ ಪ್ರವೇಶ ಸಿಕ್ಕಿತ್ತು. ವಿದ್ಯಾರ್ಥಿಗಳ ಈ ಸಮಸ್ಯೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ತಿಳಿಸಿದರು. ಶಿಕ್ಷಣ ಸಚಿವರು ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳೂರು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಿತ್ ಪೂಜಾರಿ ಹೇಳಿದರು.

ಪಾಲಿಟೆಕ್ನಿಕ್ ಸರ್ವಕಾಲೇಜ್ ವಿದ್ಯಾರ್ಥಿ ಸಂಘದ ಸಂಚಾಲಕ ನ್ಯಾಯವಾದಿ ದಿನಕರ್ ಶೆಟ್ಟಿ, ಉಡುಪಿ ಘಟಕದ ಅಧ್ಯಕ್ಷ ಜೋವಿನ್, ಅಜಿತ್ ಕರ್ಕೇರ, ಮೋಹಿತ್, ಸಚಿನ್ ಭಂಡಾರಿ, ರೋಶನ್, ಸಂದೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT