ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ನುಡಿತೇರು ಬೆಳಗಾವಿಗೆ

Last Updated 5 ಮಾರ್ಚ್ 2011, 6:15 IST
ಅಕ್ಷರ ಗಾತ್ರ

ಕಾರವಾರ: ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಜಿಲ್ಲೆಯ ವೈವಿಷ್ಟ್ಯವನ್ನು ಬಿಂಬಿಸುವ ಸ್ತಬ್ಧಚಿತ್ರ ಹೊಂದಿದ ಕನ್ನಡ ನುಡಿ ತೇರು ಬೆಳಗಾವಿಗೆ ಸಂಚರಿಸುವುದಕ್ಕೆ ಕಾರವಾರ ತಾಲ್ಲೂಕಿನ ಗಡಿಯಲ್ಲಿರುವ ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸದಾಶಿವಗಡದಲ್ಲಿ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಶುಕ್ರವಾರ ಚಾಲನೆ ನೀಡಿದರು.ಜಿಲ್ಲೆಯ ವೈಶಿಷ್ಟ್ಯವನ್ನು ನುಡಿತೇರಿನಲ್ಲಿ ಬಿಂಬಿಸಲಾಗಿದೆ. ಸ್ತಬ್ಧಚಿತ್ರದ ಎದುರು ದೇವಸ್ಥಾನದ ಮಾದರಿ ನಿರ್ಮಿಸಿ ಅದರೊಳಗೆ ಭುವನೇಶ್ವರಿ ಪ್ರತಿಮೆ ಇಡಲಾಗಿದೆ. ಹಿಂದೆ ರಥದ ರಚಿಸಿ ಅದರೊಳಗೆ ವಿಶ್ವಕನ್ನಡ ಸಮ್ಮೇಳನದ ಲಾಂಛನ ಇಡಲಾಗಿದೆ.

ಕನ್ನಡ ನುಡಿ ತೇರಿನ ಒಂದು ಬದಿಯಲ್ಲಿ ಕನ್ನಡ ವರ್ಣಮಾಲೆ ಹಾಗೂ ಇನ್ನೊಂದು ಬದಿಯಲ್ಲಿ ಕನ್ನಡ ಅಂಕಿಗಳನ್ನು ಬರೆಯಲಾಗಿದೆ. ನಾಡೋಜ ಸುಕ್ರಿ ಬೊಮ್ಮ ಗೌಡ, ಚುಟುಕು ಬ್ರಹ್ಮ ದಿನಕರ ದೇಸಾಯಿ, ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಯಶವಂತ್ ಚಿತ್ತಾಲ, ಕವಿ ಬಿ.ಎ. ಸನದಿ ಹಾಗೂ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಭಾವಚಿತ್ರಗಳನ್ನು ರಥದ ಸುತ್ತಲೂ ಅಳವಡಿಸಲಾಗಿದೆ.

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಹಳಿಯಾಳದ ಕೋಟೆ, ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನ, ಕಾರವಾರ ಕಡಲತೀರದಲ್ಲಿರುವ ಚಾಪೆಲ್ ಯುದ್ಧನೌಕೆ, ಅತ್ತಿವೇರಿ ಪಕ್ಷಿಧಾಮ, ಹೊನ್ನಾವರದಲ್ಲಿರುವ ಚತುರ್ಮುಖ ಜೈನ ಬಸದಿ, ಮುರ್ಡೇಶ್ವರ, ಭುವನೇಶ್ವರಿ, ಶಿರಸಿ ಮಾರಿಕಾಂಬಾ ದೇವಾಲಯ, ಸಾತೊಡ್ಡಿ ಫಾಲ್ಸ್, ಭಟ್ಕಳದಲ್ಲಿರುವ ಚಿನ್ನದ ಪಳ್ಳಿ, ಶಿರಸಿಯಲ್ಲಿ ಸೇಂಟ್ ಅಂತೋನಿ ಚರ್ಚ್‌ನ ಭಾವಚಿತ್ರಗಳನ್ನು ರಥದ ಎರಡೂ ಬದಿಯಲ್ಲಿ ಅಂಟಿಸಲಾಗಿದೆ.

ಸಚಿವ ಕಾಗೇರಿ ಗೈರು: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರವಾರ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ. ಗಡಿಭಾಗವನ್ನು ಕಡೆಗಣಿಸಿದ್ದು ನುಡಿ ತೇರಿನ ಉದ್ಘಾಟನೆಗೆ ಸಚಿವರನ್ನು ಆಹ್ವಾನಿಸುವುದು ಬೇಡ ಎಂದು ಗಡಿಭಾಗದ ಪಂಚಾಯಿತಿ ಪ್ರತಿನಿಧಿಗಳು ನಿರ್ಣಯ ಕೈಗೊಂಡಿದ್ದರು. ಇದರ ಜೊತೆಯಲ್ಲೇ ಶುಕ್ರವಾರ ನಡೆದ ತೇರಿನ ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವರು ಬರಲಿಲ್ಲ.

ಅಂಕೋಲಾದಲ್ಲಿ ವೈಭವದ ಸ್ವಾಗತ

ಅಂಕೋಲಾ: ಬೆಳಗಾವಿಯಲ್ಲಿ ಜರುಗಲಿರುವ ವಿಶ್ವ ಕನ್ನಡ ಮೇಳದ ಪ್ರಯುಕ್ತ ಜಾಗೃತಿ ಅಭಿಯಾನ ಕೈಗೊಂಡಿರುವ ನುಡಿತೇರನ್ನು ಶುಕ್ರವಾರ ನಗರದಲ್ಲಿ ಸಾಂಪ್ರದಾಯಿಕ ಸಡಗರ ಸಂಭ್ರಮದೊಂದಿಗೆ ಪುರ ಜನರು, ವಿದ್ಯಾರ್ಥಿ ಸಮೂಹ, ಕವಿ ಕಲಾವಿದರು, ಅಧಿಕಾರಿಗಳು ಮತ್ತು ಪಂಚವಾದ್ಯ ತಂಡದವರು ಬರಮಾಡಿಕೊಂಡರು.

ಕಣಕಣೇಶ್ವರ ದೇವಸ್ಥಾನದ ಎದುರು ನುಡಿತೇರಿಗೆ ನಾಡೋಜ ಸುಕ್ರಿ ಗೌಡ ಆರತಿ ಬೆಳಗಿ ಶುಭ ಕೋರಿದರು. ತಹಸೀಲ್ದಾರ ಡಾ. ಉದಯಕುಮಾರ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ.ಬಿ. ತೀರ್ಥ, ಜಿ.ಪಂ. ಸದಸ್ಯ ವಿನೋದ ನಾಯ್ಕ, ಚಿನ್ನದ ಗರಿ ಯುವಕ ಸಂಘದ ವಿಲಾಸ ನಾಯಕ ಮತ್ತು ಪದಾಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾರ್ವೇಕರ, ಸಾಹಿತಿಗಳಾದ ವಿ.ಜೆ. ನಾಯಕ, ವಿಷ್ಣು ನಾಯ್ಕ, ಶಾಂತಾರಾಮ ನಾಯಕ ಹಿಚ್ಕಡ, ಕರ್ನಾಟಕ ಸಂಘದ ರಾಮಕೃಷ್ಣ ನಾಯಕ ಸೂರ್ವೆ, ನಾಗೇಂದ್ರ ನಾಯಕ ಹಾಗೂ ಕೆಎಲ್‌ಇ ಸಂಸ್ಥೆಯ ಬಿಎಡ್ ಮತ್ತು ಡಿಎಡ್ ವಿದ್ಯಾರ್ಥಿಗಳು ತೇರಿನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದಿನಕರ ದೇಸಾಯಿ ಮಾರ್ಗ ಮೂಲಕವಾಗಿ  ಬೀಳ್ಕೊಟ್ಟರು.

ಹೊನ್ನಾವರಕ್ಕೆ ತೇರು ಇಂದು
ಹೊನ್ನಾವರ: ಬೆಳಗಾವಿಯಲ್ಲಿ ಮಾ.11ರಿಂದ ಆರಂಭವಾಗುವ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಚರಿಸುತ್ತಿರುವ ನುಡಿತೇರು ತಾಲ್ಲೂಕಿಗೆ ಮಾ.5ರಂದು ಆಗಮಿಸಲಿದೆ. ಮಧ್ಯಾಹ್ನ 1ಕ್ಕೆ ಪಟ್ಟಣದ ಕಾಲೇಜು ಸರ್ಕಲ್ ಬಳಿ ನುಡಿತೇರನ್ನು ಬರಮಾಡಿಕೊಂಡು ನಂತರ ಶರಾವತಿ ಸರ್ಕಲ್ ವರೆಗೆ ಮೆರವಣಿಗೆಯಲ್ಲಿ ಸಾಗಿ ಇದನ್ನು ಬೀಳ್ಕೊಡಲಾಗುವುದು. ಹಳದೀಪುರ ಗ್ರಾಮದ ಅಗ್ರಹಾರದಿಂದ ಮಂಕಿ ಸೂಳೆಬೀಳಿನ ತನಕ ಸಾಗುವ ನುಡಿತೇರನ್ನು ಆಯಾ ಸ್ಥಳದ ಗ್ರಾ.ಪಂ. ವತಿಯಿಂದ ಸ್ವಾಗತಿಸಿ ಬೀಳ್ಕೊಡಲಾಗುವುದು. ಕನ್ನಡಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ತಹಸೀಲ್ದಾರ ಗಾಯತ್ರಿ ನಾಯಕ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT