ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕಾಶಿಯಲ್ಲಿ ಮತ್ತೆ ಮಳೆ: ರೋಗ ಭೀತಿ

Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: `ಮತ್ತೆ ಮಳೆ ಹುಯ್ಯುತ್ತಿದೆ;  ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಮಧ್ಯೆ ಅಳಿದುಳಿದ ಜನರ ಆಕ್ರಂದನ. ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ನೀರು. ಆದರೂ ಕುಡಿಯಲು ಹನಿ ನೀರಿಗೂ ತತ್ವಾರ; ಉಸಿರಾಡಿದರೂ ರೋಗ ಬರುತ್ತದೆಂಬ ಭಯ...'

ಉತ್ತರಕಾಶಿಯ ಸದ್ಯದ ಸ್ಥಿತಿ ಇದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಹಾಗೂ ವೈದ್ಯರೂ ಆದ ಡಾ.ವಿ.ಎಲ್.ಎಸ್.ಕುಮಾರ್ ಪಿತೋರ್‌ಗಡ್‌ನಲ್ಲಿ ಪ್ರವಾಹ ಪೀಡಿತರ ಆರೈಕೆ ಮಾಡಿ ಈಗ ಉತ್ತರಕಾಶಿಗೆ ಬಂದಿದ್ದಾರೆ. ಅಲ್ಲೆಗ ಅವರು ಸಂತ್ರಸ್ತ ಜನರಿಗೆ ಕುಡಿಯುವ ನೀರು ಒದಗಿಸಲು ಸಮರೋಪಾದಿಯಲ್ಲಿ ಕಾರ್ಯನಿರತರಾಗಿದ್ದಾರೆ.

ಅಲ್ಲಿಂದ ದೂರವಾಣಿ ಮೂಲಕ `ಪ್ರಜಾವಾಣಿ' ಜತೆ ಮಾತನಾಡಿದ ಅವರು, `ಶುಕ್ರವಾರ ಮಧ್ಯಾಹ್ನದಿಂದ ಮತ್ತೆ ಮಳೆ ಆರಂಭವಾಗಿದೆ. ಉತ್ತರಕಾಶಿಯಿಂದ ಡೆಹ್ರಾಡೂನ್ ಮಾರ್ಗದಲ್ಲಿ ಸಾಕಷ್ಟು ಗುಡ್ಡಗಳು ಕುಸಿದಿವೆ. ಸಂಚಾರ ಅಸ್ತವ್ಯಸ್ತಗೊಂಡಿದೆ. ಹೆಲಿಕಾಪ್ಟರ್‌ಗಳು ಪರಿಹಾರ ಕಾರ್ಯಾಚರಣೆ ನಿಲ್ಲಿಸಿವೆ. ಮಳೆ ಇದೇ ರೀತಿ ಮುಂದುವರಿದರೆ ಗಾಯದ ಮೇಲೆ ಬರೆ ನಿಶ್ಚಿತ' ಎಂದು ಆತಂಕ ವ್ಯಕ್ತಪಡಿಸಿದರು.

`ಉತ್ತರಕಾಶಿಯಲ್ಲಿ ಈಗ ವಿದ್ಯುತ್ ಕೈಕೊಟ್ಟಿದೆ. ಕೆಲವು ದಿನಗಳಿಂದ ಕಗ್ಗತ್ತಲು ಕವಿದಿದೆ. ಪ್ರತಿ 15 ನಿಮಿಷಕ್ಕೊಮ್ಮೆ ಹಾರಾಡುತ್ತ ಯುದ್ಧಭೂಮಿ ನೆನಪಿಸಿದ್ದ ಹೆಲಿಕಾಪ್ಟರ್‌ಗಳ ಸಂಚಾರ ಈಗ ಬಂದ್ ಆಗಿದೆ. ಪರಿಹಾರ ಕಾರ್ಯಕ್ಕೆ ತೀವ್ರ ತೊಡಕಾಗಿದೆ' ಎನ್ನುತ್ತಾರೆ ಅವರು.

`ಭಾಗೀರಥಿಯಿಂದ ಉಕ್ಕಿ ಹರಿದ ನೀರು ಉತ್ತರಕಾಶಿ ನಗರದ ಎಲ್ಲೆಡೆ ಇದೆ. ಆದರೆ, ಅದು ಕಲುಷಿತಗೊಂಡಿದೆ. ಕಾಲರಾ ಹರಡುವ ಭೀತಿ ಕಾಣಿಸಿಕೊಂಡಿದೆ. ಕುಡಿಯುವ ನೀರನ್ನು ಶುದ್ಧೀಕರಿಸುವುದೇ ದೊಡ್ಡ ಸವಾಲಾಗಿದೆ. ಸ್ಥಳೀಯ ಆಡಳಿತ ಬ್ಲೀಚಿಂಗ್ ಪೌಡರ್ ಬಳಸಿ ನೀರನ್ನು ಶುದ್ಧೀಕರಣಗೊಳಿಸುವ ಪ್ರಯತ್ನ ಮಾಡುತ್ತಿದೆ. ಇದನ್ನೇ ಟ್ಯಾಂಕರ್ ಮೂಲಕ ಜನರಿಗೆ ಒದಗಿಸುತ್ತಿದೆ. ಆದರೆ, ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಇದನ್ನು ಗಮನಿಸಿ ರೆಡ್‌ಕ್ರಾಸ್ ನೆದರ್‌ಲ್ಯಾಂಡ್‌ನಿಂದ ನೊರಿಬ್ ಎಂಬ ನೀರು ಶುದ್ಧೀಕರಣ ಉಪಕರಣ ತರಿಸಿದೆ. ಅದನ್ನು ಉತ್ತರಕಾಶಿಯಲ್ಲಿ ಅಳವಡಿಸಲಾಗಿದೆ. ಈ ಉಪಕರಣ ಗಂಟೆಗೆ 30ಸಾವಿರ ಲೀಟರ್ ನೀರನ್ನು ಶುದ್ಧಗೊಳಿಸುತ್ತದೆ' ಎಂದು ಅವರು ಮಾಹಿತಿ ನೀಡಿದರು.

`ಇಂತಹ ಉಪಕರಣಗಳು ಒಟ್ಟು ಆರು ಬಂದಿವೆ. ಪ್ರವಾಹ ಪೀಡಿತ ಪ್ರದೇಶಗಳಾದ ಗುಪ್ತಕಾಶಿ, ರುದ್ರಪ್ರಯಾಗ್, ಕೇದಾರನಾಥ್‌ನಲ್ಲಿ ತಲಾ 1 ಹಾಗೂ ಪಿತೋರ್‌ಗಡ್‌ನಲ್ಲಿ 2 ಉಪಕರಣ ಅಳವಡಿಸುವ ಪ್ರಕ್ರಿಯೆ ಈಗ ಭರದಿಂದ ಸಾಗಿದೆ. ಈ ಉಪಕರಣದ ಮೌಲ್ಯ ರೂ 35 ಲಕ್ಷ. ಇಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ನೋಡಿದರೆ ಕನಿಷ್ಠ ಮೂರು ತಿಂಗಳು ಈ ಎಲ್ಲಾ ಉಪಕರಣಗಳನ್ನು ಇಲ್ಲಿಯೇ ಇಡಬೇಕಾಗುತ್ತದೆ. 500 ಕೆ ಜಿ ತೂಕ, ಬೃಹತ್ ಗಾತ್ರದ ಈ ಉಪಕರಣಗಳನ್ನು ತಂದು ಇಳಿಸಿ, ಅಳವಡಿಸುವುದು ಕಷ್ಟದ ಕೆಲಸವಾಗಿದೆ.

ಉತ್ತರಕಾಶಿಯಲ್ಲಿ ಗುಡ್ಡದ ಮೇಲೆ ಈ ಉಪಕರಣ ಅಳವಡಿಸಲಾಗಿದೆ. ಇಡೀ ಉತ್ತರಕಾಶಿಗೆ ಇರುವುದು ಒಂದೇ ಕ್ರೇನ್. ಈ ಉಪಕರಣವನ್ನು ವಾಹನದಿಂದ ಇಳಿಸುವುದಕ್ಕೆ ಕ್ರೇನ್‌ನವನು ಕೇಳಿದ್ದು 12 ಸಾವಿರ ರೂಪಾಯಿ. ಕೊನೆಗೆ ಜಿಲ್ಲಾಧಿಕಾರಿ ಮೂಲಕ ಆತನಿಗೆ ಹೇಳಿಸಿ, ಸ್ವಲ್ಪ ಕಡಿಮೆ ಮಾಡಿಸಲಾಯಿತು' ಎಂದು ಕುಮಾರ್ ಅಲ್ಲಿನ ಜನರ ಮನಃಸ್ಥಿತಿ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT