ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದು: ಸಮೃದ್ಧ ಬೆಳೆ; ಸಿಗದ ಬೆಲೆ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವರುಣನ ಕೃಪೆಯಿಂದಾಗಿ ಉದ್ದು ಬೆಳೆಯ ಸಮೃದ್ಧ  ಫಸಲು ಪಡೆದಿರುವ ರೈತರು, ಈಗ ಒಂದು ಕಡೆ ನ್ಯಾಯಯುತ ಬೆಲೆ ನೀಡದ ಮಧ್ಯವರ್ತಿಗಳ ಧೋರಣೆ ಮತ್ತು ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬೆಳೆಗೆ ಉತ್ತಮ ಬೆಲೆ ಪಡೆಯದ ಬೇಗುದಿಯಲ್ಲಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಉದ್ದು ಖರೀದಿ ದರ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂದಲೂ ಕ್ವಿಂಟಲ್‌ಗೆ ಸುಮಾರು ರೂ 1000 ಕಡಿಮೆ ಇದೆ ಎಂಬುದು ಈ ಬೇಗುದಿಗೆ ಕಾರಣ. ಜಿಲ್ಲೆಯ ಉದ್ದು ಬೆಳೆಗಾರನ ಸ್ಥಿತಿ ಸದ್ಯಕ್ಕೆ `ದೇವರೂ ಕೊಟ್ಟರೂ ಪೂಜಾರಿ ಕೊಡ~ ಎಂಬಂತಾಗಿದೆ.

ಘೋಷಣೆ ಮಾಡಿದ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದ್ದಾಗ, ಸರ್ಕಾರವೇ ಖರೀದಿ ಕೇಂದ್ರಗಳನ್ನು ತೆರೆದು ಬೆಳೆ ಖರೀದಿಸುವ ಮೂಲಕ ಅನ್ನದಾತನ ನೆರವಿಗೆ ಧಾವಿಸಬೇಕು. ಆದರೆ, ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸುವ ಯಾವುದೇ ಸೂಚನೆಯು ಕಾಣದಿರುವುದು ರೈತನ ದುಗುಡ ಹೆಚ್ಚಿಸಿದೆ.

ಕೇಂದ್ರ ಸರ್ಕಾರ 2012-13ನೇ ಸಾಲಿಗೆ ಉದ್ದು ಖರೀದಿಗೆ ಪ್ರತಿ ಕ್ವಿಂಟಲ್ ಬೆಂಬಲ ಬೆಲೆಯನ್ನು ರೂ4,300 ಎಂದು ಘೋಷಿಸಿದೆ. ಬೀದರ್‌ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಅಧಿಕಾರಿಗಳ ಪ್ರಕಾರ, ಉದ್ದು ಖರೀದಿ ದರ ಉದ್ದು ಬೆಳೆ ಗುಣಮಟ್ಟ ಆಧರಿಸಿ ಅ. 1ರಂದು ಕ್ವಿಂಟಲ್‌ಗೆ ಕನಿಷ್ಠ ರೂ2,750 ರಿಂದ ಗರಿಷ್ಠ ರೂ3,181 ಇತ್ತು.

ಅಂದರೆ, ಸರ್ಕಾರವೇ ಘೋಷಿಸಿದ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆ ದರವು ಒಂದು ಸಾವಿರದಿಂದ 1,200 ರೂಪಾಯಿವರೆಗೂ ಕಡಿಮೆ ಇದೆ. ಬಂಪರ್ ಬೆಳೆ ಬೆಳೆದು ಉತ್ತಮ ಬೆಲೆ ನಿರೀಕ್ಷಿಸಿದ್ದ ರೈತನಿಗೆ, ರೈತಸ್ನೇಹಿಯಲ್ಲದ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಪಟ್ಟ ಶ್ರಮಕ್ಕೂ ಸೂಕ್ತ ನ್ಯಾಯ ಸಿಗದಂತಾಗಿದೆ.

ಕೃಷಿ ಇಲಾಖೆಯ ಮೂಲಗಳ ಪ್ರಕಾರ, 2012-13ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 33,754 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತಲಾಗಿತ್ತು. ವರುಣನ ಕೃಪೆಯಿಂದಾಗಿ ಫಸಲೂ ಚೆನ್ನಾಗಿ ಬಂದಿದೆ. 2,53,155 ಕ್ವಿಂಟಲ್ ಉದ್ದು ಬೆಳೆ ಆಗಬಹುದು ಎಂಬುದು ಅಧಿಕಾರಿಗಳ ಅಂದಾಜು.

ಜಿಲ್ಲೆಯ ಮಾರುಕಟ್ಟೆಗೆ ಸೆಪ್ಟೆಂಬರ್ 3 ರಿಂದ 24ರವರೆಗೂ ಅಂದಾಜು 14,000 ಕ್ವಿಂಟಲ್ ಉದ್ದು ಆವಕವಾಗಿದೆ. ಕೃಷಿಗಾಗಿ ಆಗಿರುವ ವೆಚ್ಚ ಸರಿದೂಗಿಸಲು ರೈತರು ಲಭ್ಯ ಬೆಲೆಗೆ ಉದ್ದು ಮಾರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ತಲುಪಿದ್ದಾರೆ.

ಬೀದರ್ ಎಪಿಎಂಸಿ ಅಧಿಕಾರಿಗಳ ಪ್ರಕಾರ, ಅಕ್ಟೋಬರ್ 1ರಂದು ಉದ್ದು ಖರೀದಿ ದರ ಕನಿಷ್ಠ ರೂ 2,750 ರಿಂದ ಗರಿಷ್ಠ  ರೂ3,181 ಇತ್ತು. ಸೆ.  29ರಂದು ಕನಿಷ್ಠ ರೂ 2,710 ರಿಂದ ಗರಿಷ್ಠ ರೂ3,322 ಹಾಗೂ ಸೆ. 28ರಂದು ಕನಿಷ್ಠ ರೂ2,794 ರಿಂದ ಗರಿಷ್ಠ ರೂ 3,275ವರೆಗೂ ಇತ್ತು.

ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಅವರನ್ನು ಸಂಪರ್ಕಿಸಿದಾಗ, `ಈ ಸಂಗತಿ ನಮ್ಮ ಗಮನಕ್ಕೆ ಬಂದಿದೆ. ಖರೀದಿ ಕೇಂದ್ರಗಳನ್ನು ಆರಂಭಿಸಿ ಉದ್ದು ಖರೀದಿಸುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಕಾರ್ಯಪಡೆಯ ಗಮನಕ್ಕೂ ತರಲಾಗಿದೆ~ ಎಂದರು.

ದೊರಕದ ಲಾಭ: ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ, `ಶ್ರಮ ಪಟ್ಟು ಬೆಳೆ ಬೆಳೆದರೂ ಅದರ ಲಾಭ ರೈತರಿಗೆ ದೊರಕುತ್ತಿಲ್ಲ. ರೂ2,800, ರೂ3000, ರೂ3,200 ದಿನಕ್ಕೊಂದು ಬೆಲೆ ನಿಗದಿಪಡಿಸಿ ಖರೀದಿಸುತ್ತಿದ್ದಾರೆ. ಆರ್ಥಿಕ ಸ್ಥಿತಿ ಹಿನ್ನೆಲೆಯಲ್ಲಿ ಕೆಲ ರೈತರು ಅನಿವಾರ್ಯವಾಗಿ ಇದೇ ದರಕ್ಕೆ ಮಾರಬೇಕಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು.

`ವಾಸ್ತವ ಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೇಂದ್ರ ಘೋಷಿಸಿರುವ ಬೆಂಬಲ ಬೆಲೆ ಕ್ವಿಂಟಲ್‌ಗೆ ರೂ4,300ರ ಜೊತೆಗೆ ರಾಜ್ಯ ಸರ್ಕಾರವೂ ಕ್ವಿಂಟಲ್‌ಗೆ ರೂ500 ಘೋಷಿಸಬೇಕು. ಒಟ್ಟು, ರೂ4,800ರ ದರಕ್ಕೆ  ಉದ್ದು ಖರೀದಿಸಬೇಕು ಎಂಬುದು ನಮ್ಮ ಬೇಡಿಕೆ. ಖರೀದಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಆದಷ್ಟುಶೀಘ್ರ ಈ ಕುರಿತಂತೆ ತೀರ್ಮಾನ ಕೈಗೊಳ್ಳದೇ ಇದ್ದರೆ ಬೀದಿಗಿಳಿಯದೇ ಅನ್ಯ ಮಾರ್ಗವಿಲ್ಲ~ ಎಂದು ಪ್ರತಿಕ್ರಿಯೆ ನೀಡಿದರು.

ಈಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಪಡೆಯ ಸಭೆಯಲ್ಲಿಯೂ ಈ ವಿಷಯ ಚರ್ಚೆಗೆ ಬಂದಿದೆ. ಆದರೆ, ರೈತನ ನೆರವಿಗೆ ಧಾವಿಸುವ ತೀರ್ಮಾನಗಳು ಇನ್ನೂ ಹೊರಬಿದ್ದಿಲ್ಲ ಎಂಬ ಬೇಸರ ರೈತರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT