ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಅಪಹರಣ ಪ್ರಕರಣ ಸುಖಾಂತ್ಯ

ಸಾಲ ವಾಪಸ್ ಕೇಳಿದ್ದಕ್ಕಾಗಿ ಅಪಹರಣ, ಬಿಡುಗಡೆಗೆ ರೂ 50 ಲಕ್ಷ ಬೇಡಿಕೆ
Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಉದ್ಯಮಿ, ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆ (ಎಸ್‌ವಿಇಐ) ಖಜಾಂಚಿ ಪ್ರಭಾಕರ ಶೆಟ್ಟಿ ಅಪಹರಣ ಪ್ರಕರಣ ಸುಖಾಂತ್ಯವಾಗಿದ್ದು, ಮಂಡಿ ಠಾಣೆ ಪೊಲೀಸರು ಮೂವರನ್ನು ಸೋಮವಾರ ಬಂಧಿಸಿದ್ದಾರೆ. 6 ಮಂದಿ ಅಪಹರಣಕಾರರು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಗೋಕುಲಂ ನಿವಾಸಿ ಲಿಂಗರಾಜು, ಶಿವು ಮತ್ತು ಸುರೇಶ್ ಬಂಧಿತರು. ಲಿಂಗರಾಜು ಶ್ರೀರಂಗಪಟ್ಟಣದಲ್ಲಿ ಬಿಂದಾಸ್ ಬಾರ್ ನಡೆಸುತ್ತಿದ್ದಾರೆ. ಶಿವು ಬಾರ್‌ನ ರೈಟರ್, ಸುರೇಶ್ ಕೆಲಸಗಾರನಾಗಿದ್ದಾನೆ.

ಘಟನೆ ವಿವರ: ಪ್ರಭಾಕರ ಶೆಟ್ಟಿ ಅವರಿಂದ ಲಿಂಗರಾಜು ರೂ 30 ಲಕ್ಷ ಸಾಲ ಪಡೆದಿದ್ದರು. ಶೆಟ್ಟಿ ಅವರು ಸಾಲ ವಾಪಸ್ ನೀಡುವಂತೆ ಕೇಳಿದ್ದರು. ಸಕಾಲಕ್ಕೆ ಸಾಲ ವಾಪಸ್ ನೀಡದ ಕಾರಣ ಇಬ್ಬರ ನಡುವೆ ಜಗಳವಾಗಿತ್ತು. ಶೆಟ್ಟಿ ಅವರನ್ನು ಅಪಹರಿಸಲು ಲಿಂಗರಾಜು ನಿರ್ಧರಿಸಿದರು. ಇದಕ್ಕಾಗಿ ವೃತ್ತಿನಿರತ ಅಪಹರಣಕಾರರಿಗೆ ಸುಪಾರಿ ನೀಡಿದರು.

ತಾಲ್ಲೂಕಿನ ಬಿದರಹಳ್ಳಿಹುಂಡಿ ಬಳಿ ಇರುವ ಕೋಳಿ ಫಾರಂಗೆ ಹೋಗಲು ಶೆಟ್ಟಿ ಅವರು ಭಾನುವಾರ ಬೆಳಿಗ್ಗೆ 10.30ರ ವೇಳೆಯಲ್ಲಿ ಮನೆಯಿಂದ ಕಾರಿನಲ್ಲಿ ಹೊರಟರು. ಇವರು ಬರುವ ದಾರಿಯನ್ನೇ ಅಪಹರಣಕಾರರು ಎದುರು ನೋಡುತ್ತಿದ್ದರು. ಶಿವು, ಸುರೇಶ್ ಮತ್ತು 6 ಮಂದಿ ಅಪಹರಣಕಾರರು ಶೆಟ್ಟಿ ಅವರ ಕಾರನ್ನು ಬಿದರಹಳ್ಳಿಹುಂಡಿ ಬಳಿ ತಡೆದರು. ಓಮ್ನಿ ವ್ಯಾನ್‌ನಲ್ಲಿ ಬೆಳಿಗ್ಗೆ 11.30ರ ಸುಮಾರಿನಲ್ಲಿ ಶೆಟ್ಟಿ ಅವರನ್ನು ಅಪಹರಿಸಿದರು. ಈ ನಡುವೆ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಉರುಳಿಬಿತ್ತು. ವ್ಯಾನನ್ನು ಸ್ಥಳದಲ್ಲೇ ಬಿಟ್ಟ ಅಪಹರಣಕಾರರು, ಶೆಟ್ಟಿ ಅವರ ಕಾರಿನಲ್ಲೇ ತೆರಳಿದರು.

ನಗರದ ಶ್ರೀನಾಗರಾಜ್ ಚಿತ್ರಮಂದಿರದ ಎದುರು ಇರುವ ಲಿಂಗರಾಜುಗೆ ಸೇರಿದ ಸಣ್ಣ ಕಾರ್ಖಾನೆಯಲ್ಲಿ ಶೆಟ್ಟಿ ಅವರನ್ನು ರಾತ್ರಿ ಕೂಡಿ ಹಾಕಿದ್ದರು. ಶಿವು ಮತ್ತು ಸುರೇಶ್‌ನನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಅಪಹರಣಕಾರರು ಮದ್ಯ ಸೇವಿಸಿದ್ದರು. ಮುಂಜಾನೆ ನಿದ್ರೆಗೆ ಜಾರಿದ ಸಂದರ್ಭದಲ್ಲಿ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿಕೊಂಡ ಶೆಟ್ಟಿ ಅವರು ಶಿವು, ಸುರೇಶ್ ಕಣ್ತಪ್ಪಿಸಿ ಸೋಮವಾರ ಬೆಳಿಗ್ಗೆ 6 ಗಂಟೆಗೆ ಹೊರಬಂದಿದ್ದಾರೆ. ಮಂಡಿ ಪೊಲೀಸ್ ಠಾಣೆ ತಲುಪಿ, ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಮಂಡಿ ಠಾಣೆ ಇನ್‌ಸ್ಪೆಕ್ಟರ್ ಟಿ.ಬಿ. ರಾಜಣ್ಣ ಮತ್ತು ಸಿಬ್ಬಂದಿ ಸಯ್ಯಾಜಿರಾವ್ ರಸ್ತೆಯ ಪಂಚಮುಖಿ ಗಣಪತಿ ದೇವಸ್ಥಾನದ ಬಳಿ ಇರುವ ಪಾಳುಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಲಿಂಗರಾಜು, ಶಿವು ಮತ್ತು ಸುರೇಶ್‌ನನ್ನು ಬಂಧಿಸಿದ್ದಾರೆ.

ಸುಪಾರಿ ಪಡೆದಿದ್ದ ಅಪಹರಣಕಾರರು ಪರಾರಿಯಾಗಿದ್ದಾರೆ. ಅಪಹರಣಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೂ 50 ಲಕ್ಷಕ್ಕೆ ಬೇಡಿಕೆ: ಶೆಟ್ಟಿ ಅವರನ್ನು ಅಪಹರಿಸಿರುವುದಾಗಿ ಪುತ್ರ ಡಾ.ಸಚಿನ್ ಶೆಟ್ಟಿ ವಿ.ವಿ.ಪುರಂ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದರು. ಒತ್ತೆಯಾಗಿ ಇಟ್ಟುಕೊಂಡಿರುವ ಶೆಟ್ಟಿ ಅವರನ್ನು ಬಿಡಲು ರೂ 50 ಲಕ್ಷ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT