ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಗಳು ಖಾಲಿ ಖಾಲಿ...

Last Updated 15 ಫೆಬ್ರುವರಿ 2012, 6:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರೇಮಿಗಳ ದಿನಾಚರಣೆ (ವ್ಯಾಲಂಟೈನ್ಸ್ ಡೇ)ಯ ಸಂದರ್ಭದಲ್ಲಿ `ನೈತಿಕ ಪೊಲೀಸರ~ ಭಯವನ್ನು ಹೋಗಲಾಡಿಸಲು ಈ ಬಾರಿ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ನಗರದ ವಿವಿಧ ಉದ್ಯಾನವನಗಳಲ್ಲಿ ಪ್ರೇಮಿಗಳು ಸ್ವತಂತ್ರವಾಗಿ ವಿಹರಿಸಿದರು.

ನೃಪತುಂಗ ಬೆಟ್ಟ, ಇಂದಿರಾ ಗಾಜಿನಮನೆಯ ಉದ್ಯಾನದಲ್ಲಿ ಜೋಡಿಗಳು ಬೆಳಿಗ್ಗೆಯಿಂದಲೇ ಬರಲು ಆರಂಭಿಸಿದ್ದರು. ಪ್ರೇಮಿಗಳ ದಿನಾಚರಣೆಗೆ ಯಾವುದೇ ನಿರ್ದಿಷ್ಟ ಚೌಕಟ್ಟು ಇಲ್ಲದಿರುವುದರಿಂದ ತಮ್ಮದೇ ಆದ ಧಾಟಿಯಲ್ಲಿ ಯುವ ಜೋಡಿಗಳು ಪರಸ್ಪರ `ವ್ಯಾಲಂಟೈನ್ಸ್ ದಿನ~ದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು. ಹುಡುಗ- ಹುಡುಗಿಯರು ತಮ್ಮ ಸಂಗಾತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಈ ದಿನವನ್ನು ಉಪಯೋಗಿಸಿಕೊಂಡರು. 

ಯುವಜೋಡಿಗಳು ಹೆಚ್ಚಾಗಿ ಕಂಡು ಬರುವ ರಾಯಾಪುರ ಬಳಿಯ ಸಂಜೀವಿನಿ ಪಾರ್ಕ್ ಹಾಗೂ ಉಣಕಲ್ ಕೆರೆ ಉದ್ಯಾನಗಳು ಈ ಬಾರಿ ಭಣಗುಟ್ಟಿದವು. ಮಂಗಳವಾರ ಸಂಜೀವಿನಿ ಪಾರ್ಕ್‌ಗೆ ರಜೆ ಇದ್ದುದರಿಂದ ಧಾರವಾಡ ಹಾಗೂ ಹುಬ್ಬಳ್ಳಿ ನಗರಗಳಿಂದ ಅಲ್ಲಿಗೆ ಬಂದ ಯುವಜೋಡಿಗಳು `ಮಂಗಳವಾರ ರಜೆ~ ಎಂಬ ಬೋರ್ಡ್ ತಗುಲಿಸಿದ್ದನ್ನು ನೋಡಿ ಪೆಚ್ಚಾಗಿ, ಮತ್ತೊಂದು ಜಾಗ ಹುಡುಕಿಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಪಾರ್ಕ್‌ವರೆಗೂ ಬಂದಿದ್ದರಿಂದ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು, ಬಳಿಕ ಬೇರೆಡೆ ಸಾಗುತ್ತಿದ್ದರು. 

ಉಣಕಲ್ ಕೆರೆ ಉದ್ಯಾನ  ನವೀಕರಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದ ಹಿನ್ನೆಲೆಯಲ್ಲಿ ಇನ್ನೂ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಲ್ಲ. ಆದ್ದರಿಂದ ಈ ಉದ್ಯಾನಕ್ಕೆ ಬರುವ ಆಸೆಯನ್ನೂ ಯುವಜೋಡಿಗಳು ಬಿಟ್ಟಿದ್ದರು. ಇದ್ದುದರಲ್ಲಿಯೇ ಇಂದಿರಾ ಗಾಜಿನ ಮನೆ ಮತ್ತು ನೃಪತುಂಗ ಬೆಟ್ಟವನ್ನು ಪ್ರೇಮಿಗಳು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಿಬಂದರು.

ಎರಡು ವರ್ಷಗಳ ಹಿಂದೆ ಹಿಂದೂಪರ ಸಂಘಟನೆಗಳು ಉದ್ಯಾನಗಳಲ್ಲಿದ್ದ ಜೋಡಿಗಳಿಗೆ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ವಿವಿಧ ಉದ್ಯಾನಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಸಂಜೀವಿನಿ ಪಾರ್ಕ್ ಬಳಿ ಮಂಗಳವಾರ ಒಂದು ಪೊಲೀಸ್ ವಾಹನದೊಂದಿಗೆ ಕೆಲ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ನೃಪತುಂಗ ಬೆಟ್ಟದ ಬಳಿಯೂ ಆರು ಮಂದಿ ಪೊಲೀಸರನ್ನು (ಮಹಿಳಾ ಕಾನ್‌ಸ್ಟೇಬಲ್ ಸೇರಿ) ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಸಂಖ್ಯೆ ವಿರಳ: ಫೆ.14 ಬಂತೆಂದರೆ ಪಾರ್ಕ್‌ಗಳಲ್ಲೆಲ್ಲ `ಪ್ರಣಯದ ಹಕ್ಕಿಗಳ~ ಕಲರವವೇ ತುಂಬಿರುತ್ತಿತ್ತು. ಆದರೆ ಈ ಬಾರಿ ಅಂಥ ಸಡಗರವೇನೂ ಕಂಡು ಬರಲಿಲ್ಲ. ಕೆಲವೇ ಕೆಲವು ಜೋಡಿಗಳು ಮಾತ್ರ ಉದ್ಯಾನವನಗಳತ್ತ ತೆರಳಿ ವಿಹರಿಸಿದರು.

ದಿನಾಚರಣೆ ವಿರೋಧಿಗಳ ಕೈಗೆ ಸಿಕ್ಕು ಫಜೀತಿ ಪಡುವುದು ಏಕೆ ಎಂದು ಭಾವಿಸಿದ ಪ್ರೇಮಿಗಳು ಉದ್ಯಾನವನದತ್ತ ಬರದೇ ಹೋಟೆಲ್‌ಗಳಿಗೆ ತೆರಳಿ ಕಾಲಕಳೆದರು. ಅಲ್ಲದೇ ಕೆಲ ಜೋಡಿಗಳು ಬೈಕ್ ಮೂಲಕ ನಗರದ ಹೊರವಲಯಕ್ಕೂ ತೆರಳಿದ್ದಾರೆ ಎಂದು ಬಂದೋಬಸ್ತ್ ನಲ್ಲಿದ್ದ ಪೊಲೀಸರೊಬ್ಬರು ತಿಳಿಸಿದರು.

ಪ್ರೇಮಿಗಳ ದಿನವನ್ನು ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಲೆಂದೇ ಪ್ರಚಾರಗೊಳಿಸಲಾಗುತ್ತಿದೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತೆ ವಿವಿಧ ಉಡುಗೊರೆ ಅಂಗಡಿಗಳಲ್ಲಿ ವೈವಿಧ್ಯಮಯ ಶುಭಾಷಯ ಕಾರ್ಡ್, ಕೀಚೈನ್, ಟೀಶರ್ಟ್‌ಗಳನ್ನು ಮಾರಾಟಕ್ಕಿಡಲಾಗಿತ್ತು.

ಉಚಿತ ಎಸ್‌ಎಂಎಸ್‌ಗೆ ಕತ್ತರಿ

ಪ್ರೇಮಿಗಳ ದಿನದಂದು ಲಕ್ಷಾಂತರ ಪ್ರೇಮ ಸಂದೇಶಗಳು ವಿನಿಮಯವಾಗುತ್ತವೆ ಎಂದರಿತ ಖಾಸಗಿ ಮೊಬೈಲ್ ಕಂಪೆನಿಗಳು ಎರಡು ದಿನಗಳ ಮುಂಚೆಯೇ ತಮ್ಮ ಗ್ರಾಹಕರಿಗೆ ಸಂದೇಶ ಕಳುಹಿಸಿ ಫೆ.14ರಂದು ಕಳುಹಿಸುವ ಪ್ರತಿ ಎಸ್‌ಎಂಎಸ್‌ಗೂ ಹಣ ತೆರಬೇಕಾಗುತ್ತದೆ ಎಂದು ಸೂಚನೆ ನೀಡಿದ್ದವು.
 
ಮತ್ತೊಂದೆಡೆ ಅದೇ ಕಂಪೆನಿಗಳು `ವ್ಯಾಲೆಂಟೈನ್ಸ್ ಡೇ~ ಅಂಗವಾಗಿ, ಇಷ್ಟು ಮೊತ್ತದ ಕರೆನ್ಸಿ ರೀಚಾರ್ಜ್ ಮಾಡಿಸಿದರೆ ಅಷ್ಟೂ ಮೊತ್ತದ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ ಎಂಬ ಮೆಸೇಜ್‌ಗಳನ್ನು ಕಳಿಸಿದ್ದವು. ಅಲ್ಲದೇ, ಪ್ರೇಮಿಗೆ ಕಳುಹಿಸಲು ಅನುವಾಗುವಂತೆ ಮೊಬೈಲ್ ಕಂಪೆನಿಗಳೇ ಎಸ್‌ಎಂಎಸ್‌ಗಳನ್ನು ಸಿದ್ಧಮಾಡಿ ಗ್ರಾಹಕರಿಗೆ ಕಳಿಸುತ್ತಿದ್ದವು!

ಒಂದು ಸ್ಯಾಂಪಲ್ ಹೀಗಿದೆ...
ನಾನು ದೇವರಿಗೆ ಒಂದು ಹೂ ಕೊಡು ಎಂದು ಪ್ರಾರ್ಥಿಸಿದೆ, ಅವನು ಹೂಗಳ ಗುಚ್ಛವನ್ನೇ ನೀಡಿದ
ಒಂದು ನಿಮಿಷ ಕೊಡು ಎಂದು ಕೋರಿದೆ, ಅದಕ್ಕೆ ಒಂದು ದಿನವನ್ನೇ ದಯಪಾಲಿಸಿದ
ನನಗಾಗಿ ಚೆಲುವೆ ಏಂಜೆಲ್‌ಳನ್ನು ಕೊಡು ಎಂದೆ, ಅದಕ್ಕೆ ನಿನ್ನನ್ನೇ ಕೊಟ್ಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT