ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಅಧಿಕಾರಿಗಳೂ ನಾಗರಿಕ ಸನ್ನದು ಕಾಯ್ದೆ ವ್ಯಾಪ್ತಿಗೊಳಪಡಲಿ

Last Updated 12 ಜನವರಿ 2012, 8:55 IST
ಅಕ್ಷರ ಗಾತ್ರ

ರಾಯಚೂರು: ಜನಸಾಮಾನ್ಯರಿಗೆ ನಿರೀಕ್ಷಿತ ಮಟ್ಟದಲ್ಲಿ ಸೇವೆ ಕಲ್ಪಿಸಲು ರಾಜ್ಯ ಸರ್ಕಾರವು ನೂತನವಾಗಿ ರೂಪಿಸಿರುವ ನಾಗರಿಕ ಸನ್ನದು ಕಾಯ್ದೆ ಜಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಬಲವಿದೆ. ಈ ಕಾಯ್ದೆ ವ್ಯಾಪ್ತಿಗೆ ಉನ್ನತ ಅಧಿಕಾರಿಗಳನ್ನು ಒಳಪಡಿಸಬೇಕು ಎಂದು ಸಂಘವು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಲ್ ಭೈರಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ಇಲಾಖೆಗಳನ್ನು ರಾಜ್ಯ ಸರ್ಕಾವರು ನಾಗರಿಕ ಸನ್ನದು ಕಾಯ್ದೆ ವ್ಯಾಪ್ತಿಗೊಳಪಡಿಸಿದೆ. ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಶೀಘ್ರ ಸರ್ಕಾರದ ಗಮನಕ್ಕೆ ತಂದು ಪರಿಹರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಕೇವಲ ಸರ್ಕಾರಿ ನೌಕರರ ಸಿಬ್ಬಂದಿಗಳದ್ದು ಮಾತ್ರ ಜವಾಬ್ದಾರಿ ಇರುವುದಿಲ್ಲ. ಐಎಎಸ್, ಕೆಎಎಸ್ ಅಧಿಕಾರಿಗಳದ್ದು ಮುಖ್ಯ ಜವಾಬ್ದಾರಿ ಇರುತ್ತದೆ. ಅವರನ್ನು ನಾಗರಿಕ ಸನ್ನದು ಕಾಯ್ದೆ ವ್ಯಾಪ್ತಿಗೊಳಪಡಿಸಬೇಕು. ಈ ರೀತಿ ಆದರೆ ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಉತ್ತಮ ರೀತಿ ಸೇವೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಖಾಲಿ ಹುದ್ದೆ ಭರ್ತಿಗೆ ಆಗ್ರಹ: ರಾಜ್ಯ ಸರ್ಕಾರದಲ್ಲಿ ಪ್ರಸ್ತುತ  ವಿವಿಧ ವೃಂದದ ಸುಮಾರು 1.7 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಜವಾಬ್ದಾರಿಗಳನ್ನು ಹಾಲಿ ಸೇವೆ ಸಲ್ಲಿಸುತ್ತಿರುವ ನೌಕರರೇ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಕಾರ್ಯಭಾರ ಒತ್ತಡದಿಂದ  ನೌಕರರು ದಕ್ಷತೆ ಕಳೆದುಕೊಳ್ಳಬೇಕಾಗುತ್ತದೆ.
 
ಇದು ಆಡಳಿತಾತ್ಮಕವಾಗಿ ಹಲವು ಸಮಸ್ಯೆಗಳಿಗೆ ಕಾರಣೀಭೂತವಾಗುತ್ತದೆ. ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವಲ್ಲಿ ಕಷ್ಟಸಾಧ್ಯ ಪರಿಸ್ಥಿತಿ ನಿರ್ಮಾಣಕ್ಕೂ ಅವಕಾಶ ಮಾಡಿಕೊಟ್ಟಿದೆ. ಈ ಎಲ್ಲ ಸಮಸ್ಯೆ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ಕೂಡಲೇ ಖಾಲಿ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ದಿನಗೂಲಿ ಆಧಾರದ ಮೇಲೆ 17000, ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರು 6,000, ಡಿ ದರ್ಜೆ ಹುದ್ದೆಯಲ್ಲಿ 6000 ಸಿಬ್ಬಂದಿಯನ್ನು ಗುತ್ತಿಗೆ, ಹೊರಗುತ್ತಿಗೆ ಪದ್ಧತಿಯಡಿ ನೇಮಿಸಿ ಕೆಲಸ ಪಡೆಯಲಾಗುತ್ತಿದೆ. ಈಗ ಸೇವೆ ಸಲ್ಲಿಸುತ್ತಿರುವ ಇಂಥವರೆಲ್ಲರ ಸೇವಾ ಕಾಯಂಗೊಳಿಸಬೇಕು. ಬಳಿಕ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂದು ಸರ್ಕಾರಿಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ವಿವರಿಸಿದರು.

6ನೇ ವೇತನ ಆಯೋಗದ ಸವಲತ್ತುಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರ ಮಾಡಬೇಕು. ರಾಷ್ಟ್ರದ ಎಲ್ಲ ರಾಜ್ಯಗಳ ಸರ್ಕಾರಗಳು ತನ್ನ ನೌಕರರಿಗೆ ಕೇಂದ್ರಕ್ಕೆ ಸರಿಸಮನಾಗಿ, ಸ್ವಲ್ಪ ಕಡಿಮೆ ಅಂತರದಲ್ಲಿ ವೇತನ ಭತ್ಯೆ ಪರಿಷ್ಕರಣೆ ಮಾಡಿವೆ. ಸಂಘದ ಈ ಒತ್ತಾಯದ ಮೇರೆಗೆ 1-11-2011ರಿಂದ ಶೇ 15ರಷ್ಟು ಮಧ್ಯಂತರ ಪರಿಹಾರ ನೀಡಿದೆ. ಬಜೆಟ್‌ನಲ್ಲಿ 6ನೇ ವೇತನ ಆಯೋಗದ ಸವಲತ್ತುಗಳನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರವು ವಾಣಿಜ್ಯ, ಆದಾಯ ಸೇರಿದಂತೆ ಆರ್ಥಿಕ ಸಮಪನ್ಮೂಲ ಇಲಾಖೆಗಳಿಗೆ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗಿದೆ. ಹೀಗಾಗಿ ಸರ್ಕಾರಕ್ಕೆ 6ನೇ ವೇತನ ಆಯೋಗದಡಿ ಸವಲತ್ತು ಕಲ್ಪಿಸಲು ಹೊರೆ ಆಗುವುದಿಲ್ಲ. 6ನೇ ವೇತನ ಆಯೋಗದ ಸವಲತ್ತು ಕಲ್ಪಿಸಿದರೆ 1,500 ಕೋಟಿ ಸರ್ಕಾರ ಹೆಚ್ಚುವರಿಗೆ ನೌಕರರಿಗೆ ಕಲ್ಪಿಸಬೇಕಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ  ಆರ‌್ಯೋ ಭಾಗ್ಯ ಯೋಜನೆ ಮತ್ತು ಯಶಸ್ವಿನಿ ಯೋಜನೆಯ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ನಗದು ರಹಿತ ಚಿಕಿತ್ಸೆ ಪಡೆಯುವ ಯೋಜನೆಯನ್ನು ಜಾರಿಗೊಳಿಸಬೇಕು. ಈ ಬಗ್ಗೆ ಈಗಾಗಲೇ ರಾಜ್ಯ ಆಡಳಿತ ಸುಧಾರಣಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೊಳ್ಳುವ ಶಿಕ್ಷಕರು ಮತ್ತು ನೌಕರರು ಹಿಂದಿನ ಜಿಲ್ಲೆಯಲ್ಲಿ ಸಲ್ಲಿಸಿರುವ ಸೇವೆಯನ್ನು  ಪರಿಗಣಿಸಬೇಕು. 10 ವರ್ಷದ ಕಾಲಮಿತಿ ಬಡ್ತಿ, 15 ವರ್ಷಗಳ ಸ್ವಯಂ ಚಾಲಿತ ಬಡ್ತಿ ಹಾಗೂ 20 ವರ್ಷದ ವಾರ್ಷಿಕ ಬಡ್ತಿಯ ಬಗ್ಗೆ ರಾಜ್ಯ ಜಂಟಿ ಸಮಾಲೋಚನ ಸಮಿತಿಯಲ್ಲಿ ಹಲವು ಸುತ್ತಿನ ಚರ್ಚೆ ನಡೆದಿದೆ.
 
ಈಡೇರಿಸುವ ಅಂತಿಮ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾಗ್ಯೂ ಸಹ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮತ್ತೊಮ್ಮೆ ಇಲಾಖಾ ಮುಖ್ಯಸ್ಥರಿಗೆ ಆದೇಶ ನೀಡಲು ಸಂಘವು ಸರ್ಕಾರವನ್ನು ಒತ್ತಾಯಿಸಲಿದೆ ಎಂದು ಹೇಳಿದರು.

ರಾಯಚೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಹೆಬೂಬ ಪಾಷಾ ಮೂಲಿಮನಿ, ನೌ ಕರರ ಸಂಘದ ಗುಲ್ಬರ್ಗ ವಿಭಾಗ ಉಪಾಧ್ಯಕ್ಷ ಬಾಲಸ್ವಾಮಿ ಕೊಡ್ಲಿ, ರಾಜ್ಯ ಘಟಕದ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT