ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಕೆ ತುಣುಕಿಗೆ ಸರೋವರದಲ್ಲಿ ಶೋಧ

Last Updated 16 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮಾಸ್ಕೊ (ಎಎಫ್‌ಪಿ): ಮಧ್ಯ ರಷ್ಯಾದ ಚೆಲ್ಬಾಬಿನ್ಸ್ಕ್ ಪ್ರದೇಶದ್ಲ್ಲಲಿ ಸಂಭವಿಸಿದ ಉಲ್ಕಾಸ್ಫೋಟದಲ್ಲಿ ಸಿಡಿದ ಉಲ್ಕೆಯ ತುಣುಕೊಂದು ಅರಲ್ ಪ್ರದೇಶದ ಚೆಬರ್ಕುಲ್ ಹಿಮ ಸರೋವರದಲ್ಲಿ ಬಿದ್ದಿರಬಹುದು ಎಂಬ ಅನುಮಾನದಿಂದ ಆರು ಜನ ಮುಳುಗು ಪರಿಣತರ ತಂಡ ಶನಿವಾರ ಶೋಧ ಕಾರ್ಯ ನಡೆಸಿತು.

`ಹಿಮಗಟ್ಟಿರುವ ಸರೋವರದಲ್ಲಿ ಸೃಷ್ಟಿಯಾದ ಹೊಂಡವನ್ನು ಮುಳುಗುಗಾರರು ಜಾಲಾಡುತ್ತಿದ್ದಾರೆ. ಸುತ್ತಲಿನ ಪ್ರದೇಶಗಳಲ್ಲಿ 20 ಸಾವಿರ ರಕ್ಷಣಾ ಕಾರ್ಯಕರ್ತರು ತೀವ್ರ ಶೋಧ ನಡೆಸಿದ್ದಾರೆ. ಆದರೆ ಇದುವರೆಗೂ ಉಲ್ಕೆಯ ತುಣುಕುಗಳು ಪತ್ತೆಯಾಗಿಲ್ಲ' ಎಂದು ರಷ್ಯಾದ ತುರ್ತು ಪರಿಹಾರ ಖಾತೆ ಸಚಿವ ವ್ಲಾಡಿಮಿರ್ ಪುಕೋವ್ ತಿಳಿಸಿದ್ದಾರೆ.

ಉಲ್ಕಾಸ್ಫೋಟದಿಂದ ಗಾಯಗೊಂಡ ಜನರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಪುಕೋವ್, `ವಿಶೇಷ ತಂಡವೊಂದು ಭೂಕಂಪನ ನಿರೋಧಕ ಕಟ್ಟಡಗಳ ಸ್ಥಿರತೆ ಕುರಿತು ಪರಿಶೀಲಿಸುತ್ತಿದೆ.  ಅಲ್ಲದೆ, ಅಡುಗೆ ಅನಿಲ ಉರಿಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು' ಎಂದು ಸಲಹೆ ನೀಡಿದ್ದಾರೆ.
ಸ್ಫೋಟದ ನಂತರ ಸಿಡಿದ ತುಣುಕುಗಳಿಂದ ಗಾಯಗೊಂಡವರ ಸಂಖ್ಯೆ 1200ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ  ಹೆಚ್ಚು ಮನೆಗಳು ಹಾನಿಗೊಂಡಿವೆ.

30 ಬಾಂಬ್‌ನ ಶಕ್ತಿ: ರಷ್ಯಾದಲ್ಲಿ ಸ್ಫೋಟಗೊಂಡ 10 ಟನ್ ಭಾರದ ಉಲ್ಕೆಯ ಸಾಮರ್ಥ್ಯ ಜಪಾನ್‌ನ ಹಿರೋಷಿಮಾ ನಗರದ ಮೇಲೆ ಅಮೆರಿಕ ಎರಡನೇ ಮಹಾಯುದ್ಧದ ವೇಳೆ ಹಾಕಿದ್ದ ಪರಮಾಣು ಬಾಂಬ್‌ಗಿಂತ 30 ಪಟ್ಟು ಅಧಿಕ ಎಂದು ಅಮೆರಿಕದ ನಾಸಾ ವಿಜ್ಞಾನಿಗಳು ಅಂದಾಜಿಸಿದ್ದಾರೆ. `100 ವರ್ಷಗಳಿಗೊಮ್ಮೆ ಇಂತಹ ಅಪರೂಪದ ವಿದ್ಯಮಾನ ಜರುಗಬಹುದು' ಎಂದು ನಾಸಾದ ವಿಜ್ಞಾನಿ ಪೌಲ್ ಚೊಡಾಸ್ ಅವರು ಅಭಿಪ್ರಾಯಟ್ಟಿದ್ದಾರೆ.

ತುಣುಕಿಗೂ ಬೆಲೆ!
ಅಂತರಿಕ್ಷದಿಂದ ಬೆಂಕಿ ಉಂಡೆಯಂತೆ  ಸಿಡಿದ ಉಲ್ಕೆಯ ಸಾಧಾರಣ ತುಣುಕು ಸುಮಾರು 1 ಲಕ್ಷ ಡಾಲರ್ (ಅಂದಾಜು ರೂ 54 ಲಕ್ಷ ) ಬೆಲೆ ಬಾಳಲಿದೆ ಎಂದು ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

`ಅತ್ಯಂತ ಅಪರೂಪದ ಉಲ್ಕೆಯ ತುಣುಕುಗಳ ಮೂಲ ಯಾವುದು ಎಂಬುದರ ಮೇಲೆ ಅವುಗಳ ಮೌಲ್ಯ ನಿರ್ಧಾರವಾಗುತ್ತವೆ' ಎಂದು ನಾಸಾದ ಉಲ್ಕಾಶಿಲೆ ತಜ್ಞ ಜೋಸೆಫ್ ಗುತೇನ್ಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT