ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಂಇಎಸ್ ಕೈಗೆ ಕರ್ನಾಟಕದ ಜುಟ್ಟು'

ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ ವಿಶ್ವಾಸ
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ: `ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಬಹುಮತ ಪಡೆಯುವುದಿಲ್ಲ. ಮರಾಠಿಗರೆಲ್ಲ ಒಗ್ಗಟ್ಟಿನಿಂದ ಶ್ರಮಿಸಿದರೆ ಐವರು ಎಂಇಎಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಿದೆ. ಆಗ ಕರ್ನಾಟಕ ಸರ್ಕಾರ ನಮ್ಮ ಕೈಗೊಂಬೆಯಾಗಲಿದೆ' ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸಂಬಾಜಿ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಕರ್ತ ಕಿರಣ ಠಾಕೂರರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, `ಎಂಇಎಸ್‌ನ ಎಲ್ಲ ಘಟಕಗಳೂ ಒಂದಾಗಿ ಚುನಾವಣೆಯನ್ನು ಎದುರಿಸಿದರೆ, ಈ ಹಿಂದಿನಂತೆ ಎಂಇಎಸ್‌ನ ಐವರು ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತ. ಆಗ ಕರ್ನಾಟಕ ಸರ್ಕಾರವೇ ನಮ್ಮ ಕಾಲ ಬಳಿ ಬರಲಿದೆ. ಇದರಿಂದ 150 ವರ್ಷಗಳ ಕನಸು ನನಸಾಗಲಿದೆ' ಎಂದು ತಿಳಿಸಿದರು.

`ಕರ್ನಾಟಕ ಸರ್ಕಾರ ಮರಾಠಿಗರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಇದು ಮರಾಠಿಗರ ಮನಸ್ಸಿಗೆ ನೋವುಂಟುಮಾಡಿದೆ. ಇನ್ನು ಮುಂದೆ ಬೆಳಗಾವಿಗೆ ಆಗಮಿಸುವ ರಾಜಕಾರಣಿಗಳು ಪೊಲೀಸ್ ಭದ್ರತೆಯಲ್ಲಿ ಸಂಚರಿಸಬೇಕಾದೀತು. ಇದು ಎಂಇಎಸ್ ರಾಜಕಾರಣಿಗಳಿಗೆ ನೀಡುವ ಎಚ್ಚರಿಕೆ ಗಂಟೆಯಾಗಿದೆ' ಎಂದು ಹೇಳಿದರು.

`ನಮ್ಮ ಹೋರಾಟ ಕರ್ನಾಟಕದ ವಿರುದ್ಧವಲ್ಲ. ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಶ್ರಮಿಸಲಿದೆ' ಎಂದರು.
`ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮರಾಠಿ ಭಾಷಿಕ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಮುಂಬರುವ ಮೇಯರ್ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಪಾಲಿಕೆಯ ಮೇಲೆ ಭಗವಾಧ್ವಜ ಹಾರಿಸಲಾಗುವುದು' ಎಂದರು.

ನೀತಿ ಸಂಹಿತೆ ಉಲ್ಲಂಘನೆ?
ಬೆಳಗಾವಿಯ ಸಂಭಾಜಿ ಉದ್ಯಾನದಲ್ಲಿ ಭಾನುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೇ ಎಂಬ ಸಂದೇಹ ಮೂಡಿದೆ.

ಖಾಸಗಿ ಕಾರ್ಯಕ್ರಮಕ್ಕಾಗಿ ಪರವಾನಿಗೆ ಪಡೆದಿದ್ದ ಸಮಾರಂಭದಲ್ಲಿ ಗೃಹ ಸಚಿವರು ಬಹಿರಂಗವಾಗಿ ಚುನಾವಣಾ ಭಾಷಣ ಮಾಡುತ್ತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

`ಎಂಇಎಸ್‌ನ ಐವರು ಶಾಸಕರಾದರೆ ಕರ್ನಾಟಕ ಸರ್ಕಾರ ನಮ್ಮ ಕೈಗೊಂಬೆಯಾಗಲಿದೆ ಎಂಬಂತಹ ಹೇಳಿಕೆಯನ್ನು ಮಹಾರಾಷ್ಟ್ರ ಗೃಹ ಸಚಿವರು ನೀಡಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಸಮಾರಂಭದಲ್ಲಿ ನಮ್ಮ ಸಿಬ್ಬಂದಿ ವೀಡಿಯೊ ಚಿತ್ರೀಕರಣ ಮಾಡಿದ್ದಾರೆ. ಗೃಹ ಸಚಿವರ ಭಾಷಣ ರಿಶೀಲಿಸಿ, ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ಭಾಷಣ ಮಾಡಿದರೆ, ಅದನ್ನು ಸಂಬಂಧಪಟ್ಟವರ ವೆಚ್ಚಕ್ಕೆ ಸೇರಿಸಿಕೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಮುನೀಶ್ ಮೌದ್ಗಿಲ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT