ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ದಂಪತಿ ಬುಧವಾರ ಸಹ ನ್ಯಾಯಾಲಯಕ್ಕೆ ಗೈರು

Last Updated 7 ಸೆಪ್ಟೆಂಬರ್ 2011, 6:45 IST
ಅಕ್ಷರ ಗಾತ್ರ

ಬೆಂಗಳೂರು : ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿ ಗುತ್ತಿಗೆ ಲೈಸೆನ್ಸ್ ನೀಡುವಲ್ಲಿ ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಭೂಮಿ ಮಂಜೂರು ಮಾಡುವಲ್ಲಿ ಅಕ್ರಮ ಎಸಗಿರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ಅವರ ಪತ್ನಿ ಬುಧವಾರ ಸಹ ಹಾಜರಾಗಲಿಲ್ಲ.

ಹೀಗಾಗಿ ಅವರು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 1ಗಂಟೆಗೆ ಮುಂದೂಡಿದ್ದಾರೆ.

ವಕೀಲರಾದ ವಿನೋದ್‌ಕುಮಾರ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ಆರಂಭಿಸಿರುವ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ` (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್, ಆಗಸ್ಟ್ 30ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಅನಾರೋಗ್ಯದ ಕಾರಣ ನೀಡಿ ಅಂದು ಇಬ್ಬರೂ ವಿಚಾರಣೆಗೆ ಹಾಜರಾಗಿರಲಿಲ್ಲ. 

ಆಗ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿ ಅಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ತಿಳಿಸಿತ್ತು.

ಎಚ್‌ಡಿಕೆ ದಂಪತಿ ಸೋಮವಾರವೂ ಸಹ ಅನಾರೋಗ್ಯದ ಕಾರಣ ನೀಡಿದ್ದು, ಖುದ್ದು ಹಾಜರಾತಿಯಿಂದ ಎರಡು ವಾರಗಳ ವಿನಾಯಿತಿ ಕೋರಿ ತಮ್ಮ ವಕೀಲರ ಮೂಲಕವಾಗಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಈ ಮನವಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ನ್ಯಾಯಾಲಯ ಆಪಾದಿತರು ನ್ಯಾಯಾಲಯಕ್ಕೆ ಗಡುವು ನೀಡುವಂತಿಲ್ಲ ಎಂದು ಎಚ್ಚರಿಸಿ, ಸೆ 7ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.

ಪದೇ ಪದೇ ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯಕ್ಕೆ ಎಚ್‌ಡಿಕೆ ದಂಪತಿ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಧೀಶರು ಅವರ ಅನಾರೋಗ್ಯ ಕುರಿತಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಚ್‌ಡಿಕೆ ಪರ ವಕೀಲರಿಗೆ ಸೂಚಿಸಿದ್ದಾರೆ.
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT