ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಪಕ್ಷ–ಟಿಎಂಸಿ ನಡುವೆ ಕೆಸರೆರಚಾಟ

ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಬಾಲಕಿಯ ಅಂತ್ಯಸಂಸ್ಕಾರ
Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಸಾಮೂಹಿಕ ಅತ್ಯಾ­ಚಾರಕ್ಕೆ ಒಳಗಾಗಿ ಮೃತ­ಪಟ್ಟ 16ರ ಹರೆಯದ ಬಾಲಕಿಯ ಮೃತ­ದೇಹ ತೃಣ­ಮೂಲ ಕಾಂಗ್ರೆಸ್‌  ಮತ್ತು ಎಡರಂಗದ ನಡುವಿನ ರಾಜಕೀಯ ಸಂಘರ್ಷಕ್ಕೆ ಕಾರಣ­ವಾಗಿದೆ.

ಮಗಳ ಮೃತ ದೇಹವನ್ನು ತೆಗೆದು­ಕೊಂಡು ರಾಜ್ಯ ಬಿಟ್ಟು ಹೋಗ­ಬೇಕು ಎಂದು ಪೊಲೀಸರು ಬೆದರಿಕೆ ಒಡ್ಡಿ­ದ್ದಾಗಿ  ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.
ಎಡಪಕ್ಷಗಳ ಕೆಲವು ನಾಯಕ­ರೊಂ­ದಿಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಎಂ.ಕೆ. ನಾರಾಯಣ್‌ ಅವರನ್ನು ಬುಧ­ವಾರ ಭೇಟಿ­ಯಾದ ಬಾಲಕಿಯ ಹೆತ್ತ­ವರು ರಕ್ಷಣೆ ಒದಗಿಸುವಂತೆ ಕೋರಿದ್ದಾರೆ.

‘ರಾಜ್ಯವನ್ನು ಬಿಟ್ಟು ಮಗಳ ದೇಹ­ದೊಂದಿಗೆ ಬಿಹಾರಕ್ಕೆ ಹೋಗು­ವಂತೆ ಮಂಗಳವಾರ ರಾತ್ರಿ ಕೆಲವು ಪೊಲೀಸ್‌ ಅಧಿಕಾರಿಗಳು ಒತ್ತಡ ಹೇರಿದ್ದಾರೆ. ರಾಜ್ಯ ಬಿಟ್ಟು ಹೋಗದಿದ್ದರೆ ಟ್ಯಾಕ್ಸಿ ಓಡಿ­ಸಲು ಬಿಡುವುದಿಲ್ಲ ಎಂದು ಕೆಲವು ಗೂಂಡಾ­ಗಳು ಮತ್ತು ಪೊಲೀಸ್‌ ಅಧಿ­ಕಾ­ರಿಗಳು ಬೆದರಿಕೆ ಒಡ್ಡಿದ್ದಾರೆ’ ಎಂದು ಬಿಹಾರ ಮೂಲದ ಬಾಲಕಿಯ ತಂದೆ ಹೇಳಿದ್ದಾರೆ. ಇವರು ಕೋಲ್ಕತ್ತದಲ್ಲಿ ಟ್ಯಾಕ್ಸಿ ಚಾಲಕರಾಗಿದ್ದಾರೆ. ಅತ್ಯಾಚಾರ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅ. 25ರಂದು ಬಾಲಕಿ ಎರಡು ಬಾರಿ ಸಾಮೂಹಿಕ ಅತ್ಯಾ­ಚಾರಕ್ಕೆ ಒಳಗಾಗಿ­ದ್ದಳು. ಡಿ. 23ರಂದು ಆಕೆ ಮನೆ­ಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ­ದ್ದಳು. ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಳು.

ಬಾಲಕಿಯ ಹೇಳಿಕೆ: ಈ ಮಧ್ಯೆ ಪ್ರಕರಣಕ್ಕೆ ಇನ್ನೊಂದು ತಿರುವು ಸಿಕ್ಕಿದ್ದು, ಅತ್ಯಾಚಾರವೆಸಗಿದವರೇ ತನಗೆ ಬೆಂಕಿಯನ್ನೂ ಹಚ್ಚಿದರು ಎಂದು ಬಾಲಕಿ ಸಾಯುವ ಮುನ್ನ ಹೇಳಿಕೆ ನೀಡಿದ್ದಾಳೆ. ಬಿಧನ್‌ ನಗರ್‌ ಪೊಲೀಸ್‌ ಕಮಿಷನರ್‌ ನಿಂಬಾಳ್ಕರ್‌ ಸಂತೋಶ್‌ ಉತ್ತಮ್‌ರಾವ್‌ ಬುಧವಾರ ಈ ವಿಷಯ ತಿಳಿಸಿದ್ದಾರೆ.   ಮೃತ ಬಾಲಕಿಗೆ ನ್ಯಾಯ ಒದಗಿ­ಸು­ವಂತೆ ಆಗ್ರಹಿಸಿ ಕೋಲ್ಕತ್ತ­ದಾದ್ಯಂತ ಮಂಗಳ­­ವಾರದಿಂದ ಪ್ರತಿಭಟನೆಗಳು ನಡೆಯುತ್ತಿವೆ.

ಬಾಲಕಿಯ ಮೃತದೇಹದ ಸಂಸ್ಕಾರಕ್ಕೆ ಸಂಬಂಧಿಸಿ ಎಡಪಕ್ಷಗಳು ಮತ್ತು ಕೋಲ್ಕತ್ತ ಪೊಲೀಸರ ನಡುವೆ ಮಂಗಳ­ವಾರ ರಾತ್ರಿ ಸಂಘರ್ಷ ಏರ್ಪಟ್ಟಿತು.
ಬಾಲಕಿಯ ತಂದೆ ಎಡಪಕ್ಷಗಳ ನೇತೃ­ತ್ವದ ಕಾರ್ಮಿಕ ಸಂಘಟನೆ ಸಿಐ­ಟಿಯು ಸದಸ್ಯರಾಗಿದ್ದಾರೆ. ಮೃತದೇಹವನ್ನು ನಗರದ ಶವಾಗಾರ­ದಲ್ಲಿ ಇರಿಸಿ, ನಂತರ ಸಂತಾಪ ಸೂಚಕ ಸಭೆ ಮತ್ತು ಮೆರವಣಿಗೆ ನಡೆಸಲು ಕುಟುಂಬ ಮತ್ತು ಕಾರ್ಮಿಕ ಸಂಘಟನೆ ನಿರ್ಧರಿಸಿತ್ತು ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಆದರೆ ಮಂಗಳವಾರ ರಾತ್ರಿ ಮೃತ ದೇಹವನ್ನು ಶವಾಗಾರಕ್ಕೆ ಒಯ್ಯುವ ಸಂದರ್ಭದಲ್ಲಿ ಪೊಲೀಸರು ಬಲವಂತ­ವಾಗಿ ದೇಹವನ್ನು ಒಯ್ದು ಸಂಸ್ಕಾರಕ್ಕೆ ಯತ್ನಿಸಿದರು ಎಂದು ಅವರು ಆರೋಪಿಸಿದ್ದಾರೆ.

‘ಬಾಲಕಿಯ ಮರಣ ಪ್ರಮಾಣಪತ್ರ ತಂದೆಯ ಬಳಿ ಇದ್ದುದರಿಂದ ಪೊಲೀ­ಸ­ರಿಗೆ ಅಂತ್ಯ ಸಂಸ್ಕಾರ ನಡೆಸುವುದು ಸಾಧ್ಯ­ವಾಗಲಿಲ್ಲ. ಸುದ್ದಿ ಹರಡುತ್ತಿದ್ದಂತೆ ಸಿಪಿ­ಐ(ಎಂ) ಮುಖಂಡರು ಮತ್ತು ಕಾರ್ಯ­ಕರ್ತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಆರಂಭಿಸಿದರು. ಇದರಿಂದಾಗಿ ಪೊಲೀ­ಸರು ಹಿಂದೆ ಸರಿದರು’ ಎಂದು ಸಿಪಿ­ಐ(ಎಂ) ರಾಜ್ಯ ಸಮಿತಿ ಸದಸ್ಯ ರಬಿನ್‌ ದೇವ್‌ ಹೇಳಿದ್ದಾರೆ.

ಪ್ರಕರಣ ಈಗ ಪೂರ್ತಿಯಾಗಿ ರಾಜ­ಕೀಯ ಬಣ್ಣ ಪಡೆದು­ಕೊಂಡಿದೆ. ಎಡ­ರಂಗ ಈ ವಿಷಯವನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಆಡಳಿತಾ­ರೂಢ ತೃಣಮೂಲ ಕಾಂಗ್ರೆಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT