ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತ ಹರಿಯಲಿದೆ ಯುವ ಮತದಾರರ ಚಿತ್ತ?

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಾನ್ಪುರ: ಮೊದಲ ಹಂತದ ಮತದಾನ ನಡೆದ ಫೈಜಾಬಾದ್ ಜಿಲ್ಲೆಯಲ್ಲಿ ಹಿಂದಿನ ರಾತ್ರಿ ಜೋರು ಮಳೆ ಸುರಿದಿತ್ತು, ಜತೆಗೆ ಗುಡುಗು-ಸಿಡಿಲು. ಮರುದಿನ ಹತ್ತುಗಂಟೆಯವರೆಗೂ ಮಳೆ ನಿಂತಿರಲಿಲ್ಲ, ಹನಿಯುತ್ತಲೇ ಇತ್ತು. ಆದರೆ ಆಗಲೇ ಅಯೋಧ್ಯೆಯ ರಾಜಕೀಯ (ಸರ್ಕಾರಿ) ಪ್ರಾಥಮಿಕ ಶಾಲೆಯ ಮತಗಟ್ಟೆ ಮುಂದೆ ಸುಮಾರು 200 ಮತದಾರರು ತಮ್ಮ ಸರದಿಗಾಗಿ ಕಾಯುತ್ತಾ ನಿಂತಿದ್ದರು. ಕೆಲವರ ಕೈಗಳಲ್ಲಿ ಕೊಡೆ,ಇನ್ನುಕೆಲವರ ತಲೆಯಲ್ಲಿ ಟೋಪಿಗಳು, ಅವೆರಡೂ ಇಲ್ಲದ ಮಹಿಳೆಯರು ತಲೆಮೇಲೆ ಸೆರಗುಹಾಕಿ ನಿಂತಿದ್ದರು. ಸಾಧುಗಳಿಂದ ಹಿಡಿದು ಬುರ್ಖಾಧಾರಿಗಳ ವರೆಗೆ, ಸೈಕಲ್ ರಿಕ್ಷಾವಾಲಾನಿಂದ ಹಿಡಿದು ವಿದ್ಯಾರ್ಥಿಗಳ ವರೆಗೆ ಎಲ್ಲ ವರ್ಗದವರು ಅಲ್ಲಿದ್ದರು. ಅವರಲ್ಲಿ ಹೆಚ್ಚಿನವರು ಯುವ ಮತದಾರರು.

ಇದನ್ನು ನೋಡಿದ ಟಿವಿ ಚಾನೆಲ್‌ಗಳ ವರದಿಗಾರರು ಪವಾಡವನ್ನು ಕಂಡವರಂತೆ ಕ್ಯಾಮೆರಾಗಳ ಮುಂದೆ ನಿಂತು ಕಿರುಚಾಡುತ್ತಿದ್ದರು. ಯಾವುದೋ ಒಂದು ಮತಗಟ್ಟೆಯಲ್ಲಿ ಮತದಾರರು ಮಳೆಯನ್ನು ಲೆಕ್ಕಿಸದೆ ಮತ ಹಾಕಲು ಬಂದಿರುವ ಮಾತ್ರಕ್ಕೆ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ ಎಂಬ ತೀರ್ಮಾನಕ್ಕೆ ಬರುವುದು ಅವಸರದ್ದು ಎಂದು ನನಗನಿಸಿತ್ತು. ಸಂಜೆ ಹೊತ್ತು ಚುನಾವಣಾ ಆಯೋಗದ ಅಧಿಕಾರಿಗಳು ಶೇ 62ರಷ್ಟು ಮತದಾನ ನಡೆದಿದೆ ಎಂದು ಪ್ರಕಟಿಸಿದಾಗಲೂ ಅಚ್ಚರಿ ಆಗಿರಲಿಲ್ಲ.

ಆದರೆ ಉತ್ತರಪ್ರದೇಶದ ಮತದಾರರ ಉತ್ಸಾಹ ಒಂದನೇ ಹಂತಕ್ಕಷ್ಟೇ ಸೀಮಿತವಾಗಿರಲಿಲ್ಲ. ಎರಡನೆ ಮತ್ತು ಮೂರನೆ ಹಂತಗಳಲ್ಲಿ ಕ್ರಮವಾಗಿ ಶೇಕಡಾ 60 ಮತ್ತು 57ರಷ್ಟು ಮತದಾನವಾಗಿತ್ತು. ಮತದಾನದ ಪ್ರಮಾಣದಲ್ಲಿನ ಹೆಚ್ಚಳ ನಾಲ್ಕನೆ ಹಂತದಲ್ಲಿಯೂ ಮುಂದುವರಿದಿದೆ. ಇಂದು ನಡೆದ ಮತದಾನದ ಪ್ರಮಾಣ ಶೇಕಡಾ 57. ಕಳೆದ ಚುನಾವಣೆಯಲ್ಲಿನ ಮತದಾನದ ಪ್ರಮಾಣ ಶೇಕಡಾ 48 ಎಂಬುದನ್ನು ಗಮನಕ್ಕೆ ತೆಗೆದುಕೊಂಡಾಗ ಈಗಿನ ಮತದಾನದ ಮಹತ್ವ ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಚುನಾವಣೆ ನಡೆದ ರಾಜ್ಯಗಳೆಲ್ಲ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಪಂಜಾಬ್‌ನಲ್ಲಿ ಶೇಕಡಾ 78, ಮಣಿಪುರದಲ್ಲಿ ಶೇಕಡಾ 82 ಮತ್ತು ಉತ್ತರಾಂಚಲದಲ್ಲಿ ಶೇಕಡಾ 70ರಷ್ಟು ಮತದಾನವಾಗಿದೆ. ರಾಜ್ಯದ ಮತದಾರರ ಉತ್ಸಾಹವನ್ನು ನೋಡಿದರೆ ಉಳಿದಿರುವ ಮೂರು ಹಂತಗಳಲ್ಲಿಯೂ ಮತದಾನದ ಪ್ರಮಾಣ ಕನಿಷ್ಠ ಶೇಕಡಾ 55 ದಾಟುವ ಸಾಧ್ಯತೆಗಳಿವೆ.

ಪ್ರತಿಯೊಂದು ಪಕ್ಷದ ಬೆರಳೆಣಿಕೆಯ ನಾಯಕರ ಸಾರ್ವಜನಿಕ ಸಭೆಗಳು ಮತ್ತು ಗಣ್ಯರ ಕ್ಷೇತ್ರಗಳಲ್ಲಿ ನಡೆಯುತ್ತಿರುವ ರೋಡ್‌ಶೋಗಳನ್ನು ಹೊರತುಪಡಿಸಿದರೆ ಚುನಾವಣೆ ನಡೆಯುತ್ತಿದೆ ಎನ್ನುವುದೇ ತಿಳಿಯದಷ್ಟು ರಾಜ್ಯ ಶಾಂತವಾಗಿದೆ. ಇದಕ್ಕೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳೂ ಕಾರಣ. ಹೀಗಿದ್ದರೂ ಮತದಾರರು ಸ್ವಯಿಚ್ಚೆಯಿಂದ ಹೊರಬಂದು ಇಷ್ಟೊಂದು ಉತ್ಸಾಹದಲ್ಲಿ ಪಾಲ್ಗೊಳ್ಳಲು ಕಾರಣಗಳೇನು ಎಂಬುದಕ್ಕೆ ಬಗೆಬಗೆಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.

ಸಾಮಾನ್ಯವಾಗಿ ಹೆಚ್ಚಿನ ಮತದಾನ ಪರಿವರ್ತನೆಯ ಸಂದೇಶ ನೀಡುತ್ತಾ ಬಂದಿರುವುದನ್ನು ಇಲ್ಲಿಯ ವರೆಗಿನ ಅನುಭವ ಹೇಳುತ್ತದೆ. ಇಲ್ಲಿನ ಮತದಾರಲ್ಲಿನ ಬದಲಾವಣೆಯ ಆಶಯವೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ.  ವಾರಣಾಸಿಯ ಸೈಕಲ್ ರಿಕ್ಷಾವಾಲಾ ಈಗಿನ ಸರ್ಕಾರದ ವಿರುದ್ಧ  ಮತಹಾಕಲು ಕಾರಣ ಬೆಲೆ ಏರಿಕೆಯಾದರೆ, ಕಾನ್ಪುರದ ಯುವಕನಿಗೆ ಕಾರಣ ನಿರುದ್ಯೋಗ. ಇಷ್ಟೇ ಅಲ್ಲ, ಬದಲಾವಣೆಯ ಬಗ್ಗೆ ಮಾತನಾಡುವ ಬಹಳಷ್ಟು ಮತದಾರರು ಬಿಹಾರ ಮತ್ತು ಗುಜರಾತ್ ರಾಜ್ಯಗಳನ್ನು ಉಲ್ಲೇಖಿಸುತ್ತಾರೆ. ಈ ದೃಷ್ಟಿಯಿಂದ ಬದಲಾವಣೆಯ ಗಾಳಿ ಬಿಜೆಪಿಗೆ ನೆರವಾಗಬೇಕಿತ್ತು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವ ನಾಯಕರಾಗಲಿ, ಯೋಜನೆಯಾಗಲಿ ಆ ಪಕ್ಷದಲ್ಲಿ ಇಲ್ಲದಂತಾಗಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಇಲ್ಲಿ ಪ್ರಚಾರಕ್ಕೆ ಬರಲಿಲ್ಲ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪೂರ್ವ ಉತ್ತರಪ್ರದೇಶದ ಒಂದೆರಡು ಕ್ಷೇತ್ರಗಳಲ್ಲಿ ಜೆಡಿ (ಯು) ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಹೊರಟುಹೋಗಿದ್ದಾರೆ.

ಉಳಿದಿರುವುದು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್. ಬದಲಾವಣೆಯ ಲಾಭ ತಮಗೆ ಎಂದು ಈ ಎರಡು ಪಕ್ಷಗಳು ತಮ್ಮದೇ ಲೆಕ್ಕಚಾರದಲ್ಲಿ ತೊಡಗಿವೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಪ್ರಚಾರವನ್ನು ಹೆಚ್ಚು ಆಕ್ರಮಣಕಾರಿಯಾಗಿ ನಡೆಸುತ್ತಿವೆ. ಯುವ ನಾಯಕರ ನೇತೃತ್ವ ಆ ಪಕ್ಷಗಳಿಗೆ ಇರುವ ಮುಖ್ಯ ಅನುಕೂಲತೆ. ರಾಜಕೀಯ ಕ್ಷೇತ್ರದ ಮಾನದಂಡದ ಪ್ರಕಾರ ಉಮಾಭಾರತಿ ಕೂಡಾ ಯುವವರ್ಗಕ್ಕೆ ಸೇರಿದ್ದರೂ ಅವರನ್ನು ಅವರ ಪಕ್ಷವೇ ಆ ರೀತಿ ಬಿಂಬಿಸುತ್ತಿಲ್ಲ. ಬಹುಷ: ಅಖಿಲೇಶ್ ಯಾದವ್ ಚುನಾವಣಾಕಣದಲ್ಲಿ ಇಲ್ಲದೆಹೋಗಿದ್ದರೆ ಬದಲಾವಣೆಯ ಗಾಳಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ತಂದುಕೊಡುತ್ತಿತ್ತೋ ಏನೋ? ಆದರೆ ಈಗ ಇಬ್ಬರ ನಡುವೆಯೂ ತೀವ್ರ ಪೈಪೋಟಿ ಇದೆ.

ಸಮಾಜವಾದಿ ಪಕ್ಷಕ್ಕೆ ತಳಮಟ್ಟದಿಂದ ಸಂಘಟನೆಯ ಶಕ್ತಿ ಇರವ ಕಾರಣ ಯುವಜನರನ್ನು ಸೆಳೆಯುವುದು ಅಖಿಲೇಶ್‌ಗೆ ಸುಲಭ. ಆದರೆ ವೈಯಕ್ತಿಕ ವರ್ಚಸ್ಸಿನ ದೃಷ್ಟಿಯಿಂದ ಅಖಿಲೇಶ್ ಯಾದವ್ ರಾಹುಲ್‌ಗಾಂಧಿಗೆ ಸಾಟಿ ಅಲ್ಲ.  ರಾಹುಲ್ ಹಳ್ಳಿಗಳಿಗೆ ಹೋಗಿ ದಲಿತರ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದರೆ, ಅಖಿಲೇಶ್ ಸೈಕಲ್ ಏರಿ ಊರೂರು ಸುತ್ತಿದ್ದಾರೆ. `ಸೈಕಲ್ ನಿಮ್ಮನ್ನು ಜನರ ಬಳಿಗೆ ಕರೆದೊಯ್ದರೆ, ವಿಮಾನ ನಿಮ್ಮನ್ನು ದೂರ ಓಡಿಸುತ್ತದೆ~ ಎಂದು ಅಖಿಲೇಶ್ ಇತ್ತೀಚೆಗೆ ರಾಹುಲ್‌ಗಾಂಧಿಗೆ ಚುಚ್ಚಿದ್ದರು. ಈ ಹೇಳಿಕೆ ಇಬ್ಬರೂ ನಾಯಕರ ವಿಭಿನ್ನ ಶೈಲಿಯ ರಾಜಕಾರಣವನ್ನು ಅರ್ಥಪೂರ್ಣವಾಗಿ ಪರಿಚಯಿಸುತ್ತದೆ. ಅಖಿಲೇಶ್ ಯಾದವ್‌ಗೆ ಇಲ್ಲದ ಇನ್ನೊಂದು ಅನುಕೂಲತೆ ರಾಹುಲ್‌ಗಾಂಧಿಯವರಿಗೆ ಇದೆ. ಸಾಮಾನ್ಯವಾಗಿ ಯುವ ಮತದಾರರು ಪ್ರಾದೇಶಿಕ ಪಕ್ಷಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಪಕ್ಷವನ್ನು ಇಷ್ಟಪಡುತ್ತಾರೆ. ಇಷ್ಟು ಮಾತ್ರವಲ್ಲ ರಾಹುಲ್‌ಗಾಂಧಿ ಕಾಂಗ್ರೆಸ್‌ನ ಭವಿಷ್ಯದಪ್ರಧಾನಿ ಅಭ್ಯರ್ಥಿ ಎನ್ನುವುದು ಕೂಡಾ ಅವರತ್ತ ಯುವ ಮತದಾರರನ್ನು ಆಕರ್ಷಿಸಬಹುದು.

ಯುವ ಮತದಾರರೂ ಸೇರಿದಂತೆ ಬದಲಾವಣೆ ಆಶಯ ಹೊಂದಿರುವ ಮತದಾರರೆಲ್ಲರೂ ಆಡಳಿತಾರೂಢ ಪಕ್ಷದ ವಿರುದ್ದವೇ ಮತಚಲಾಯಿಸುತ್ತಾರೆ ಎಂದು ಹೇಳಲಾಗುವುದಿಲ್ಲ.  ಮತದಾರರ ಬದಲಾವಣೆಯ ಆಶಯ ಹಾಲಿ ಶಾಸಕರು ಯಾವ ಪಕ್ಷದಲ್ಲಿದ್ದರೂ ಸೋಲಿಸಬಹುದು. ಇದನ್ನು ಮೊದಲೇ ಅರಿತವರಂತೆ ಮಾಯಾವತಿ ನೂರಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ಭ್ರಷ್ಟ ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ಮತಗಟ್ಟೆ ಅಧಿಕಾರಿ ಸಾವು

ಲಖನೌ (ಪಿಟಿಐ): ಭಾನುವಾರ ನಡೆದ 4ನೇ ಹಂತದ ಚುನಾವಣೆ ವೇಳೆ ಕರ್ತವ್ಯ ನಿರತರಾಗಿದ್ದ ಚುನಾವಣಾ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT