ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದುರಾಳಿಯ ಕನವರಿಕೆಯಲ್ಲಿ ದೇಶಪಾಂಡೆ

Last Updated 31 ಜನವರಿ 2013, 19:59 IST
ಅಕ್ಷರ ಗಾತ್ರ

ಕಾರವಾರ: ಹಿಂದಿನ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಜಿಲ್ಲೆಯ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ `ಸೋಲಿಲ್ಲದ ಸರದಾರ' ಎನಿಸಿಕೊಂಡಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೋಲು ಅನುಭವಿಸಿದ್ದೇ ಕುತೂಹಲ ಮೂಡಿಸಿತ್ತು.

ಜಿಲ್ಲೆಯ ಉಳಿದ ಐದು ವಿಧಾನಸಭಾ ಕ್ಷೇತ್ರದಲ್ಲಿ ಯಾರು ಯಾರು ಜಯಗಳಿಸಿದ್ದಾರೆ ಎನ್ನುವುದಕ್ಕಿಂತ ಮುಖ್ಯವಾಗಿ ದೇಶಪಾಂಡೆ ಸೋಲಿನ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿತ್ತು.  ಈ ಸೋಲಿನಿಂದಾಗಿ ಅವರ ರಾಜಕೀಯ ಜೀವನ ಇಲ್ಲಿಗೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಈಗ, ದೇಶಪಾಂಡೆ ಹಳೆಯದನ್ನೆಲ್ಲ ಮರೆತು ಹೊಸ ಉತ್ಸಾಹದೊಂದಿಗೆ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಹಳಿಯಾಳ-ಕ್ಷೇತ್ರವನ್ನು ಕಸಿದುಕೊಂಡ ಜೆಡಿಎಸ್, ಶಾಸಕ ಸುನಿಲ್ ಹೆಗಡೆ ಅವರನ್ನೇ ಈ ಬಾರಿಯೂ ಕಣ್ಣಕ್ಕಿಳಿಸಲಿದೆ. ಬಿಜೆಪಿಯಿಂದ ಪಕ್ಷದ ಸ್ಥಳೀಯ ಅಧ್ಯಕ್ಷ ರಾಜು ಧೂಳಿ ಸೇರಿದಂತೆ ಮಂಗೇಶ ದೇಶಪಾಂಡೆ, ಎನ್.ವಿ.ಹೆಗಡೆ, ಅಶೋಕ ಪಾಟೀಲ ಮತ್ತು ಕೆಜೆಪಿಯಿಂದ ವಿಜೇಂದ್ರ ಜಾಧವ ಅಥವಾ ಉಡಚಪ್ಪ ಬೊಬಾಟೆ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ಶಾಸಕ ಸುನಿಲ್ ಹೆಗಡೆ ಅವರ ತಂದೆ ವಿ.ಡಿ.ಹೆಗಡೆ ಹಾಗೂ ವೃತ್ತಿಯಲ್ಲಿ ವಕೀಲರಾಗಿದ್ದ ಆರ್.ವಿ.ದೇಶಪಾಂಡೆ ಇಬ್ಬರೂ ಸ್ನೇಹಿತರು. ದೇಶಪಾಂಡೆ ಅವರು ಆರು ಬಾರಿ ಗೆಲುವು ಸಾಧಿಸಿದ್ದರ ಹಿಂದಿನ ಸೂತ್ರಧಾರ ವಿ.ಡಿ.ಹೆಗಡೆ ಎನ್ನುವುದು ಕ್ಷೇತ್ರದ ಮತದಾರರಿಗೆ ಗೊತ್ತಿದೆ. ವಿಧಾನಪರಿಷತ್‌ಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಿಲ್ಲ ಎಂಬ ಕಾರಣದಿಂದ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತು. ಇದು ಅವರ ಮಧ್ಯೆ ದೊಡ್ಡ ಕಂದಕವನ್ನೇ ಸೃಷ್ಟಿಸಿತು.

ದೇಶಪಾಂಡೆ ಅವರ ರಾಜಕೀಯದ ದೌರ್ಬಲ್ಯಗಳನ್ನು ಅರಿತಿದ್ದ ಹೆಗಡೆ ಅವರು ಮಗನಿಗೆ ಜೆಡಿಎಸ್‌ನಿಂದ ಟಿಕೆಟ್ ಕೊಡಿಸಿ, ಗ್ಲ್ಲೆಲಿಸುವ ಮೂಲಕ ರಾಜಕೀಯವಾಗಿಯೇ ದೇಶಪಾಂಡೆ ವಿರುದ್ಧ ಸೇಡು ತೀರಿಸಿಕೊಂಡರು. ಈಗ ಮತ್ತೊಂದು ಆಘಾತ ನೀಡಲು ಸಜ್ಜಾಗ ತೊಡಗಿದ್ದಾರೆ.

ಆತಂಕ ಮೂಡಿಸಿದ್ದ ಸಮೀಕ್ಷೆ: ಆರು ತಿಂಗಳ ಹಿಂದೆ ಖಾಸಗಿ ಸಂಸ್ಥೆಯೊಂದು ಹಳಿಯಾಳ ಕ್ಷೇತ್ರದಲ್ಲಿ ಮತದಾರರ ಸಮೀಕ್ಷೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಬಹುತೇಕ ಮತದಾರರು ಜೆಡಿಎಸ್‌ನತ್ತ ಒಲವು ತೋರಿದ್ದು ವರದಿಯಲ್ಲಿ ಸ್ಪಷ್ಟವಾಗಿತ್ತು. ಇದು ದೇಶಪಾಂಡೆ ಮತ್ತು ಅವರ ಬೆಂಬಲಿಗರಲ್ಲಿ ಆತಂಕ ತಂದಿತ್ತು.

ಈ ಸಮೀಕ್ಷೆ ನಂತರ ದೇಶಪಾಂಡೆಯವರು ಕ್ಷೇತ್ರ ಬದಲಾಯಿಸುತ್ತಾರೆ ಎನ್ನುವ ವದಂತಿಯೂ ಹಬ್ಬಿತ್ತು. ಕ್ಷೇತ್ರ ಪುನರ್‌ವಿಂಗಡಣೆ ನಂತರ ಹಳಿಯಾಳ-ಮುಂಡಗೋಡ ಕ್ಷೇತ್ರವು ಯಲ್ಲಾಪುರ-ಮುಂಡಗೋಡ ಕ್ಷೇತ್ರವಾಗಿದೆ. ಇಲ್ಲಿಂದ ಅವರು ಸ್ಪರ್ಧಿಸುತ್ತಾರೆ ಎನ್ನುವ ಮಾತು ಕೆಲಕಾಲ ಕೇಳಿಬಂದಿತ್ತು. ಈಗ ಅದಕ್ಕೆ ತಡೆ ಬಿದ್ದಿದ್ದು ಹಳಿಯಾಳ-ಜೋಯಿಡಾ ಕ್ಷೇತ್ರದಿಂದಲೇ ಅವರು ಸ್ಪರ್ಧಿಸುವುದು ಖಚಿತವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯ ಬಿಜೆಪಿಯೂ ಎರಡು ಹೋಳಾಗಿದೆ. ಒಮ್ಮೆ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ವಿಜೇಂದ್ರ ಜಾಧವ ಮತ್ತು ಮುಖಂಡ ಉಡಚಪ್ಪ ಬೊಬಾಟೆ  ಕೆಜೆಪಿಗೆ ಸೇರಿದ್ದಾರೆ. ಇಬ್ಬರೂ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT