ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಟಿಪಿಸಿ ಕಚೇರಿ ಮೇಲೆ ಕಲ್ಲು ತೂರಾಟ-ಹಲ್ಲೆ

Last Updated 28 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಆಲಮಟ್ಟಿ (ವಿಜಾಪುರ ಜಿಲ್ಲೆ): ಜಿಲ್ಲೆಯ ಕೂಡಗಿ ಬಳಿ ಎನ್‌ಟಿಪಿಸಿ ಸ್ಥಾಪಿಸುತ್ತಿರುವ ಶಾಖೋತ್ಪನ್ನ ಕೇಂದ್ರದ ಕಚೇರಿಯ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆದಿದೆ.

ಕೇಂದ್ರದ ಚಿಮಣಿ ನಿರ್ಮಾಣಕ್ಕೆ ಮಕ್ಕಳನ್ನು ಬಲಿ ನೀಡಲೆಂದು ಮಕ್ಕಳ ಅಪಹರಣ ನಡೆಯುತ್ತಿದೆಂಬ ವದಂತಿಯ ಹಿನ್ನೆಲೆಯಲ್ಲಿ ಕೂಡಗಿ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಜನರು ಕಲ್ಲು ತೂರಾಟ ನಡೆಸಿದ್ದರಿಂದ ಎನ್‌ಟಿಪಿಸಿಗೆ ಸೇರಿದ ಒಂದು ಬಸ್, ಟಾಟಾ ಸುಮೊ ವಾಹನ,  ಎಂಟು ಫೋಕಸ್ ಲೈಟ್ ಹಾಗೂ ಭದ್ರತಾ ಸಿಬ್ಬಂದಿ ಕೋಣೆಯ ಗಾಜುಗಳು ಒಡೆದು ಹಾನಿಯಾಗಿದೆ.

ಆಕ್ರೋಶಗೊಂಡ ಜನತೆಯನ್ನು ಸಮಾಧಾನಗೊಳಿಸಲು ಬಂದ ಭದ್ರತಾ ಸಿಬ್ಬಂದಿ  ಹಾಗೂ ಎನ್‌ಟಿಪಿಸಿ ಯ  ಒಬ್ಬ ಅಧಿಕಾರಿಯನ್ನು ಥಳಿಸಲಾಗಿದೆ. ಆದರೇ ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

ವದಂತಿಗೆ ಪುಷ್ಟಿ ನೀಡುವಂತೆ ಕೂಡಗಿ ತಾಂಡಾ ಹಾಗೂ ಕೂಡಗಿ ಗ್ರಾಮದ ಬಾಲಕನೊಬ್ಬನನ್ನು ಪ್ರತ್ಯೇಕವಾಗಿ ಅಪಹರಿಸುವ ಯತ್ನ ವಿಫಲವಾಗಿದೆ. ಅಪಹರಣಕಾರರಿಂದ ವಿದ್ಯಾರ್ಥಿಗಳು ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಕೂಡಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೇ ವಾಸ್ತವವಾಗಿ ಇದು ಎಷ್ಟು ನಿಜ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಾಗಿದೆ.

ಗುರುವಾರ ಮುಂಜಾನೆ ಮತ್ತೊಬ್ಬ ಬಾಲಕನನ್ನು ಅಪಹರಿಸಲು ಕೆಲವರು ಯತ್ನಿಸಿದ್ದಾರೆ. ಅದಕ್ಕೆ ಎನ್‌ಟಿಪಿಸಿಯವರೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಏಕಾಏಕಿ ಈ ದಾಳಿ ನಡೆಸಿದ್ದಾರೆ.

ಸಂಧಾನ
`ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲಾಗಿದ್ದು, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಇನ್ನೊಮ್ಮೆ ಇಂತಹ ಅಹಿತಕರ ಘಟನೆ ಮರುಕಳಿಸಬಾರದು ಎಂದು ಗ್ರಾಮಸ್ಥರಿಗೆ ಎಚ್ಚರಿಸಲಾಗಿದೆ` ಎಂದು ಪಿಎಸ್‌ಐ ಪಾಟೀಲ ತಿಳಿಸಿದ್ದಾರೆ.  ಮುನ್ನೆಚ್ಚರಿಕೆಯ ಕ್ರಮವಾಗಿ ಎನ್‌ಟಿಪಿಸಿ ಕಚೇರಿಗೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಅಧಿಕಾರಿಗಳ ಹೇಳಿಕೆ
`ಇದೊಂದು ತಪ್ಪು ತಿಳಿವಳಿಕೆಯಿಂದಾದ ಘಟನೆ. ಘಟನೆಯಲ್ಲಿ ಒಂದು ಬಸ್,  ಒಂದು ಟಾಟಾ ಸುಮೊ ವಾಹನದ ಗಾಜು ಹಾಗೂ ಕೆಲವು ವಿದ್ಯುತ್ ದೀಪಗಳನ್ನು ಒಡೆಯಲಾಗಿದೆ. ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ. 21ನೇ ಶತಮಾನಕ್ಕೆ ಕಾಲಿಡುತ್ತಿರುವ ನಾವು ಮೂಢನಂಬಿಕೆಯಲ್ಲಿ ಭರವಸೆ ಇಡುವುದಿಲ್ಲ, ಅಪಹರಣ ಕುರಿತು ಯಾವುದೇ ಸಂಶಯವಿದ್ದರೇ ಪೊಲೀಸರಿಗೆ ದೂರು ನೀಡಲಿ` ಎಂದು ಎನ್‌ಟಿಪಿಸಿ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ (ಸಿಬ್ಬಂದಿ) ಸಿ. ಕುಮಾರ ಹೇಳಿದ್ದಾರೆ.

ಶಾಂತಿ ಸಭೆ: ಕೂಡಗಿ ಗ್ರಾಮಸ್ಥರು ಹಾಗೂ ಎನ್‌ಟಿಪಿಸಿ ಅಧಿಕಾರಿಗಳ ಶಾಂತಿ ಸಭೆ ನಡೆದಿದ್ದು,  ಮುಖಂಡರಾದ ಅಬ್ದುಲ್ ರಜಾಕ್ ಕೊಳ್ಳಿ, ಶೇಖಪ್ಪ ಯಾಳಗಿ, ಎಸ್.ಎನ್. ಮಿಣಜಗಿ, ಸಂಗನಗೌಡ ಪಾಟೀಲ, ಶೇಖರಗೌಡ ಪಾಟೀಲ, ಈರಣ್ಣ ಭೋವಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT