ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಟಿಸಿ: ಮಾರ್ಪಾಡಿಗೆ ರಾಜ್ಯ ಆಗ್ರಹ

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಲು ಉದ್ದೇಶಿತ `ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ~ (ಎನ್‌ಸಿಟಿಸಿ) ಸ್ಥಾಪನೆಗೆ ಸಂಬಂಧಿಸಿದ ಕಾನೂನಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶನಿವಾರ ಆಗ್ರಹಿಸಿದರು.

ಎನ್‌ಸಿಟಿಸಿ ಕುರಿತು ಚರ್ಚಿಸಲು ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕದ ಮಾದರಿಯಲ್ಲಿ ಎನ್‌ಸಿಟಿಸಿ ರೂಪಿಸಲಾಗುತ್ತಿದ್ದು ಇದು ಭಾರತದಂಥ ಒಕ್ಕೂಟ ವ್ಯವಸ್ಥೆಗೆ ಸರಿ ಹೊಂದುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಅಮೆರಿಕದ ಪ್ರತಿ ರಾಜ್ಯಗಳಿಗೂ ಪ್ರತ್ಯೇಕ ಕಾಯ್ದೆ ಇದೆ. ನಮ್ಮಲ್ಲಿ ಇಡೀ ದೇಶಕ್ಕೆ ಒಂದೇ ಐಪಿಸಿ, ಸಿಆರ್‌ಪಿಸಿಗಳಿದ್ದು, ಇವುಗಳ ಜಾರಿ ಹೊಣೆ ರಾಜ್ಯಗಳ ಮೇಲಿದೆ. ಆದರೆ, ಎನ್‌ಸಿಟಿಸಿ ಕಾಯ್ದೆಯಡಿ ವ್ಯಕ್ತಿಯ ಬಂಧನ, ಶೋಧ ಹಾಗೂ ಆಸ್ತಿ ಜಪ್ತು ಅಧಿಕಾರವನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡುವುದರಿಂದ ರಾಜ್ಯಗಳ ಅಧಿಕಾರಕ್ಕೆ ಚ್ಯುತಿ ಬರಲಿದ್ದು, ಇದನ್ನು ಮಾರ್ಪಾಡು ಮಾಡಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದರು.

ಸಾಮಾನ್ಯ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿಯ ಬಂಧನ, ಶೋಧನೆ ಹಾಗೂ ಆಸ್ತಿ ಜಪ್ತಿಗೆ ಸಂಬಂಧಿಸಿದ ಮಾಹಿತಿಯನ್ನು ತಡಮಾಡದೆ ಹತ್ತಿರದ ಪೊಲೀಸ್ ಠಾಣೆಗೆ ಎನ್‌ಸಿಟಿಸಿ ಅಧಿಕಾರಿಗಳು ತಿಳಿಸಬೇಕು. ತುರ್ತು ಸಂದರ್ಭಗಳಲ್ಲಿ ಎನ್‌ಸಿಟಿಸಿ ನೇರ ಕ್ರಮ ಕೈಗೊಳ್ಳಲು ಅವಕಾಶವಿದೆ.

ಆದರೆ, ಕಾರ್ಯಾಚರಣೆ ಮುಗಿದ ಬಳಿಕ ನೆಪಕ್ಕೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ಮುಟ್ಟಿಸುವ ಸಾಧ್ಯತೆ ಹೆಚ್ಚಿರುತ್ತದೆ. ತಮಗೆ ಕೊಡಲಾಗಿರುವ ಅಧಿಕಾರದಡಿ ಕ್ರಮ ಜರುಗಿಸಲಾಗಿದೆ ಎಂದು ಪ್ರತಿಪಾದಿಸುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಆತಂಕ ನಿವಾರಣೆ ಮಾಡಬೇಕು ಎಂದು ಸದಾನಂದಗೌಡರು ಹೇಳಿದರು.

`ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ~ಯಡಿ ಎನ್‌ಸಿಟಿಸಿ ಬಂಧಿಸಿದ ವ್ಯಕ್ತಿಗಳನ್ನು ಸ್ಥಳೀಯ ಪೊಲೀಸರ ಸುಪರ್ದಿಗೆ ವಹಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್‌ಗೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ಎನ್‌ಸಿಟಿಸಿ ಅಧಿಕಾರಿಗಳು ತೆಗೆದುಕೊಂಡ ನಿಲುವನ್ನು ಪರಿಶೀಲಿಸುವ ಅಧಿಕಾರ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಇರುವುದಿಲ್ಲ. ಇದು ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗುವುದರಿಂದ ಈ ಅಂಶಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಅನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ರಾಜ್ಯದ ನಿಲುವಿಗೆ ಬಹಳಷ್ಟು ಮುಖ್ಯಮಂತ್ರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT