ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ತಿದ್ದುಪಡಿ ಮಸೂದೆ ಅಂಗೀಕಾರ

Last Updated 31 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ, ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆಯೇ `ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆ-2013'ಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿದೆ. ವರ್ತಕರು ಒಂದೇ ಪರವಾನಗಿ ಪಡೆದು ರಾಜ್ಯದ ಯಾವುದೇ ಎಪಿಎಂಸಿ ವ್ಯಾಪ್ತಿಯಲ್ಲಿ ವಹಿವಾಟು ನಡೆಸುವುದಕ್ಕೆ ಈ ಮಸೂದೆ ಅವಕಾಶ ಕಲ್ಪಿಸಲಿದೆ.

ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ಅವರು ಮಸೂದೆ ಮಂಡನೆಗೆ ಮುಂದಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. `ಶಾಸಕರಿಗೆ ಮೊದಲೇ ಮಸೂದೆಯ ಪ್ರತಿ ನೀಡದೇ ಏಕಾಏಕಿ ಸದನದಲ್ಲಿ ಮಂಡಿಸುವುದು ಸರಿಯಲ್ಲ' ಎಂದು ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು. ಚರ್ಚೆಗೆ ಅವಕಾಶ ಒದಗಿಸುವ ದೃಷ್ಟಿಯಿಂದ ಮುಂದಿನ ಅಧಿವೇಶನದಲ್ಲಿ ಈ ಮಸೂದೆ ಮಂಡಿಸುವಂತೆ ಆಗ್ರಹಿಸಿದರು. ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪದೆ ಸಚಿವರು ಮಸೂದೆ  ಮಂಡಿಸಿದರು.

ಚರ್ಚೆ ಆರಂಭಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, `ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಭಾಗವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು (ಎಪಿಎಂಸಿ) ಅಸ್ತಿತ್ವಕ್ಕೆ ತರಲಾಗಿದೆ. ಆದರೆ, ಎಪಿಎಂಸಿಗಳಿಗೆ ಯಾವ ಅಧಿಕಾರವೂ ಇಲ್ಲ. ಎಲ್ಲಾ ಅಧಿಕಾರವೂ ಬೆಂಗಳೂರಿನಲ್ಲೇ ಕೇಂದ್ರೀಕೃತವಾಗಿದೆ. ವ್ಯವಸ್ಥೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ. ಈಗ ಸರ್ಕಾರ ತರಲು ಹೊರಟಿರುವ ತಿದ್ದುಪಡಿ ಮಸೂದೆಯೂ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೂಲಕ ರೈತರ ಹಿತಾಸಕ್ತಿ ರಕ್ಷಿಸುವ ಆಶಯಕ್ಕೆ ವಿರುದ್ಧವಾಗಿದೆ' ಎಂದು ಟೀಕಿಸಿದರು.

`ಪ್ರತಿ ಬಾರಿಯೂ ರೈತರ ಹಿತಾಸಕ್ತಿಯ ಹೆಸರಿನಲ್ಲೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಆದರೆ, ನಿಜವಾಗಿಯೂ ಇದರಿಂದ ರೈತರಿಗೆ ಯಾವ ಲಾಭವೂ ಆಗುವುದಿಲ್ಲ. ಈ ಕಾಯ್ದೆಗೆ ತಿದ್ದುಪಡಿ ತರುವುದೇ ಆದಲ್ಲಿ ಸಮಗ್ರವಾದ ಬದಲಾವಣೆ ಮಾಡಬೇಕು. ಈಗ ರೂಪಿಸಿರುವ ಕಾಯ್ದೆಯಲ್ಲಿ ಒಂದೇ ಪರವಾನಗಿಯಡಿ ಎಲ್ಲಿ ಬೇಕಾದರೂ ವ್ಯಾಪಾರಕ್ಕೆ ಅವಕಾಶ ನೀಡುವ ಪ್ರಸ್ತಾವವಿದೆ. ಇದು ತೆರಿಗೆ ವಂಚನೆ ಮತ್ತು ರೈತರನ್ನು ವಂಚಿಸಲು ಎಡೆ ಮಾಡಿಕೊಡಲಿದೆ' ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.

ಗುತ್ತಿಗೆ ಕೃಷಿಯ ಒಪ್ಪಂದಿಂದ ಉದ್ಭವಿಸುವ ವಿವಾದಗಳನ್ನು ಪರಿಹರಿಸುವ ಅಧಿಕಾರ ಈಗ `ವಿವಾದಗಳ ಸಮಿತಿ' ಬಳಿ ಇದೆ. ಅದನ್ನು `ನೋಂದಣಿ ಪ್ರಾಧಿಕಾರ'ಕ್ಕೆಗೆ ವರ್ಗಾಯಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಇದು ರೈತರ ಪರವಾದ ಅಂಶವಲ್ಲ. ಈ ರೀತಿಯ ರೈತ ವಿರೋಧಿ ಅಂಶಗಳನ್ನು ತಿದ್ದುಪಡಿ ಮೂಲಕ ಜಾರಿಗೆ ತರುವುದೇ ಆದಲ್ಲಿ ಒಂದೇ ಬಾರಿಗೆ ಎಪಿಎಂಸಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಿರಿ. ನಂತರ ರಾಜ್ಯದಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಎಂದು ಒತ್ತಾಯಿಸಿದರು.

`ಹೊರಕ್ಕೆ ತೋರಿಸುವುದು ರೈತರ ಹಿತ. ಒಳಗಡೆ ಕೃಷಿ ಕ್ಷೇತ್ರದ ಹೊರಗಿನ ವ್ಯಕ್ತಿಗಳ ಹಿತ ಅಡಗಿದೆ. ಇಂತಹ ಮಸೂದೆಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆ ಆಗುವುದಿಲ್ಲ. ಮತ್ತಷ್ಟು ಹಾಳಾಗುತ್ತದೆ' ಎಂದು ಜೆಡಿಎಸ್‌ನ ವೈ.ಎಸ್.ವಿ.ದತ್ತ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ಜಗದೀಶ ಶೆಟ್ಟರ್, ಕೆ.ಜಿ. ಬೋಪಯ್ಯ, ಸಿ.ಟಿ.ರವಿ, ಗೋವಿಂದ ಕಾರಜೋಳ, ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ, ಬಿ.ಬಿ.ನಿಂಗಯ್ಯ ಮತ್ತಿತರರು ಮಸೂದೆಯನ್ನು ಬಲವಾಗಿ ವಿರೋಧಿಸಿದರು. ಆದರೆ, ಮಸೂದೆ ಮಂಡನೆಯನ್ನು ಸಮರ್ಥಿಸಿಕೊಂಡ ಶಿವಶಂಕರಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಸುಧಾರಣೆ ಸಂಬಂಧ ಅಧ್ಯಯನ ನಡೆಸಲು ನೇಮಿಸಿದ್ದ ತಜ್ಞರ ಸಮಿತಿಯ ಶಿಫಾರಸಿನಂತೆ ಮಸೂದೆ ಮಂಡಿಸಲಾಗಿದೆ. ಇದರಿಂದ ರೈತರ ಹಿತಕ್ಕೆ ಧಕ್ಕೆ ಆಗುವುದಿಲ್ಲ. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ದರ ಸಿಗುತ್ತದೆ ಎಂದರು.

ಕೃಷಿ ಮಾರುಕಟ್ಟೆ ಸಚಿವರ ಬೆಂಬಲಕ್ಕೆ ನಿಂತ ಕಾನೂನು ಸಚಿವ ಟಿ.ಬಿ.ಜಯಚಂದ್ರ, `ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕೆಲವೇ ವ್ಯಕ್ತಿಗಳು ಏಕಸ್ವಾಮ್ಯ ಸಾಧಿಸುವುದನ್ನು ತಪ್ಪಿಸಲು ಈ ಮಸೂದೆ ರೂಪಿಸಲಾಗಿದೆ. ಮಾರುಕಟ್ಟೆಗಳ ವ್ಯಾಪ್ತಿಯಲ್ಲಿನ ಉಪ ಮಾರುಕಟ್ಟೆ, ಪ್ರಾಂಗಣಗಳಲ್ಲೂ ಉಗ್ರಾಣ ಸ್ಥಾಪಿಸುವ ಅಧಿಕಾರವನ್ನು ಸರ್ಕಾರಕ್ಕೆ ಪಡೆಯಲು ಮಸೂದೆ ರೂಪಿಸಲಾಗಿದೆ. ಗುತ್ತಿಗೆ ಕೃಷಿ ಒಪ್ಪಂದದಿಂದ ಉದ್ಭವಿಸುವ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ನೋಂದಣಿ ಪ್ರಾಧಿಕಾರಕ್ಕೆ ನೀಡುವುದರಿಂದಲೂ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ' ಎಂದರು.

ಹಿಂದೆ ಕೃಷಿ ಮಾರುಕಟ್ಟೆ ಸಚಿವರಾಗಿದ್ದ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಕೂಡ ಮಸೂದೆ  ಬೆಂಬಲಿಸಿ ಮಾತನಾಡಿದರು. ಆದರೆ, ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮತ್ತೆ ಹಟ ಹಿಡಿದರು. ಈ ನಡುವೆಯೇ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಮಸೂದೆಯನ್ನು ಮತಕ್ಕೆ ಹಾಕಲು ಮುಂದಾದರು. ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು. ಧ್ವನಿಮತದ ಮೂಲಕ ಮಸೂದೆಗೆ ಒಪ್ಪಿಗೆ ನೀಡಲಾಯಿತು.

ಮಸೂದೆಯಲ್ಲಿ ಏನಿದೆ?
ಈ ಮಸೂದೆ ಜಾರಿಯಾದ ಬಳಿಕ ಕೃಷಿ ಮಾರುಕಟ್ಟೆ ನಿರ್ದೇಶಕರು, ಉಪ ಮಾರುಕಟ್ಟೆ, ಮಾರುಕಟ್ಟೆ ಉಪ ಪ್ರಾಂಗಣ ಅಥವಾ ಉಪ ಮಾರುಕಟ್ಟೆ ಪ್ರಾಂಗಣಗಳಲ್ಲೂ `ಉಗ್ರಾಣ'ಗಳನ್ನು ಘೋಷಣೆ ಮಾಡಬಹುದು. ಖಾಸಗಿ ಮಾರುಕಟ್ಟೆಗಳಲ್ಲಿ ವ್ಯವಹಾರ ನಡೆಸುವಾಗ ಶೇಕಡ 33ರ ದರದಲ್ಲಿ ಮಾರುಕಟ್ಟೆ ಶುಲ್ಕ ವಿಧಿಸಬಹುದು. ಹೂ, ಹಣ್ಣು ಮತ್ತು ತರಕಾರಿಗಳ ಮೇಲೆ ಮಾರುಕಟ್ಟೆ ಶುಲ್ಕ ವಿಧಿಸುವಂತಿಲ್ಲ. ಈ ಉತ್ಪನ್ನಗಳ ವಿಷಯದಲ್ಲಿ ಉತ್ಪನ್ನದ ಖರೀದಿದಾರರಿಂದ ಶುಲ್ಕ ವಸೂಲಿ ಮಾಡಬೇಕು.

ರಾಜ್ಯದ ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರದೇಶಗಳಲ್ಲಿ ಅಥವಾ ಖಾಸಗಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಕೈಗೊಳ್ಳಲು ಕೃಷಿ ಮಾರುಕಟ್ಟೆ ನಿರ್ದೇಶಕರು ಪರವಾನಗಿ ಮಂಜೂರು ಮಾಡಬಹುದು. ಈಗ ವ್ಯಾಪಾರ ಪರವಾನಗಿ ಹೊಂದಿರುವವರು ಮಸೂದೆ ಜಾರಿಯಾದ ದಿನದಿಂದ ಆರು ತಿಂಗಳ ಒಳಗಾಗಿ ಹೊಸ ಪರವಾನಗಿ ಪಡೆಯಬೇಕಾಗುತ್ತದೆ.

ಗುತ್ತಿಗೆ ಕೃಷಿ ಒಪ್ಪಂದದಿಂದ ಉದ್ಭವಿಸುವ ವಿವಾದಗಳನ್ನು `ವಿವಾದಗಳ ಸಮಿತಿ'ಯ ಬದಲಾಗಿ `ನೋಂದಣಿ ಪ್ರಾಧಿಕಾರ' ತೀರ್ಮಾನಿಸಬೇಕಾಗುತ್ತದೆ. ವಿವಾದ ಬಗೆಹರಿಸಲು 30 ದಿನಗಳ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ. ಈ ಮಸೂದೆಯ ಮೂಲಕ ಹೂ, ಹಣ್ಣು ಮತ್ತು ತರಕಾರಿಗಳಿಗೆ ಮಾರುಕಟ್ಟೆ ಶುಲ್ಕದಿಂದ ವಿನಾಯಿತಿ ನೀಡಿದ್ದರಿಂದ ಬೊಕ್ಕಸಕ್ಕೆ ಏಳು ಕೋಟಿ ರೂಪಾಯಿ ನಷ್ಟ ಆಗಲಿದೆ.

ತಡವರಿಸಿದ ಸಚಿವರು
ಮಸೂದೆ ಮಂಡಿಸುವಾಗ, ಪರ್ಯಾಲೋಚಿಸುವಂತೆ ಕೋರುವಾಗ, ಅಂಗೀಕಾರಕ್ಕೆ ವಿನಂತಿಸುವಾಗ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹಲವು ಬಾರಿ ತಡವರಿಸಿದರು. ಇದರಿಂದ ಸಿಟ್ಟಾದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಸರಿಯಾಗಿ ಮಂಡಿಸುವಂತೆ ಗದರಿದರು. ಹೇಗೆ ಓದಬೇಕು ಎಂಬುದನ್ನು ತಿಳಿ ಹೇಳುವಂತೆ ಇತರೆ ಸಚಿವರಿಗೆ ಸೂಚಿಸಿದರು.

`ಚೇಂಬರ್ ಆಫ್ ಕಾಮರ್ಸ್‌ನವರು ಮಸೂದೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ' ಎಂದು ಸಚಿವರು ಹೇಳಿದ್ದು ಕೆಲಕಾಲ ಬಿಸಿಬಿಸಿ ಚರ್ಚೆ ಕಾರಣವಾಯಿತು. `ಅವರು (ಸಚಿವರು) ವ್ಯಾಪಾರಿ. ಹಾಗಾಗಿ ವ್ಯಾಪಾರಿಗಳ ಮಾತು ಕೇಳಿದ್ದಾರೆ. ಮಸೂದೆ ಕೂಡ ವ್ಯಾಪಾರಿಗಳ ಪರವಾಗಿಯೇ ಇದೆ' ಎಂದು ಪ್ರತಿಪಕ್ಷಗಳ ಸದಸ್ಯರು ಟೀಕಿಸಿದರು. `ನಾನು ರೈತನೂ ಹೌದು, ವ್ಯಾಪಾರಿಯೂ ಹೌದು' ಎಂದು ಸಚಿವರು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT