ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್ ರದ್ದತಿ ಕೋರಿ ಬಿಎಸ್‌ವೈ ಹೈಕೋರ್ಟ್‌ಗೆ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಈಗಾಗಲೇ ಕೆಲವು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವ ಮಧ್ಯೆಯೇ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ.

ಲೋಕಾಯುಕ್ತ ವರದಿಯ ಆಧಾರದ ಮೇಲೆ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ಕಳೆದ ಆ.22ರಂದು ದಾಖಲು ಮಾಡಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದತಿಗೆ ಕೋರಿ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿರುವ ವರದಿಯನ್ನು ರಾಜ್ಯಪಾಲರು ಏಕಾಏಕಿ ಅಂಗೀಕರಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಿದ್ದು, ಇದು ಕಾನೂನು ಬಾಹಿರ ಎನ್ನುವುದು ಯಡಿಯೂರಪ್ಪನವರ ವಾದ.

`ನಿಯಮದ ಪ್ರಕಾರ ವರದಿಯನ್ನು ಅಂಗೀಕಾರ ಮಾಡುವ ಮುನ್ನ ನೋಟಿಸ್ ಜಾರಿ ಮಾಡಬೇಕು. ಆದರೆ ಅಂಗೀಕಾರ ಮಾಡುವ ಮುನ್ನವಾಗಲೀ, ಅಂಗೀಕಾರವಾದ ನಂತರವಾಗಲೀ ಯಾವುದೇ ನೋಟಿಸ್  ನೀಡಿಲ್ಲ. ಈ ಬಗ್ಗೆ ಮಾಹಿತಿಯೇ ತಿಳಿಸಿಲ್ಲ. ಏಕಾಏಕಿಯಾಗಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಸಹಜ ನ್ಯಾಯ ಉಲ್ಲಂಘನೆ ಮಾಡಲಾಗಿದೆ. ತಮ್ಮ ವ್ಯಾಪ್ತಿಯನ್ನು ಮೀರಿ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ವಿವಾದದಲ್ಲಿ ಯಾವುದೇ ಸಂಬಂಧ ಇರದ ಖಾಸಗಿ ಕಂಪೆನಿಗಳ ವಿರುದ್ಧವಾಗಿಯೂ ಆರೋಪ ಹೊರಿಸಲಾಗಿದೆ~ ಎನ್ನುವುದು ಅವರ ಆರೋಪ.

ಆಕ್ಷೇಪಣೆ ಸಲ್ಲಿಕೆ: ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಲೋಕಾಯುಕ್ತ ಪೊಲೀಸರು `ಯಡಿಯೂರಪ್ಪನವರ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಇರುವುದನ್ನು ಗಮನಿಸಿಯೇ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗಿಲ್ಲ~ ಎಂದು ತಿಳಿಸಿದ್ದಾರೆ. ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿತು.

ಸೋಮಣ್ಣ ಅರ್ಜಿ: 16ಕ್ಕೆ ತೀರ್ಪು?

ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಸೋಮವಾರ (ಜ.16) ನೀಡುವ ಸಾಧ್ಯತೆ ಇದೆ.

ನಗರದ ನಾಗದೇವನಹಳ್ಳಿ ಬಳಿಯ ಸರ್ವೇ ನಂ.47 ಮತ್ತು 48ರಲ್ಲಿರುವ 3.40 ಎಕರೆ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ ಆರೋಪ ಇದಾಗಿದೆ. ನಗರದ ರವಿಕೃಷ್ಣ ರೆಡ್ಡಿ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ತನಿಖೆಗೆ ಕೋರ್ಟ್ ಆದೇಶಿಸಿದೆ.

ಈ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಅವರು ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಗುರುವಾರ ಅರ್ಜಿಯ ವಾದ, ಪ್ರತಿವಾದ ಮುಗಿದ ಕಾರಣ, ಸೋಮವಾರ ಕೋರ್ಟ್‌ನಲ್ಲಿಯೇ ತೀರ್ಪಿನ ಉಕ್ತಲೇಖನ (ಡಿಕ್ಟೇಷನ್) ನೀಡಲು ಆರಂಭಿಸುವುದಾಗಿ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT