ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಡಿಎ, ಎಸ್‌ಡಿಎ ಹುದ್ದೆಗೆ ಅರ್ಜಿ, ಅಭ್ಯರ್ಥಿಗಳ ಗೋಳು

Last Updated 6 ಮಾರ್ಚ್ 2011, 8:55 IST
ಅಕ್ಷರ ಗಾತ್ರ

ಹಾವೇರಿ: ‘ಕಂಪ್ಯೂಟರ್ ಸೆಂಟರ್‌ನಲ್ಲಿ ಅರ್ಜಿಗಳು ಅಪ್‌ಲೋಡ್ ಆಗುತ್ತಿಲ್ಲ. ಒಂದು ವೇಳೆ ಅಪ್‌ಲೋಡ್ ಆದರೆ, ಬ್ಯಾಂಕ್‌ನಲ್ಲಿ ಚಲನ್ ತುಂಬಲು ಕಿಲೋ ಮೀಟರ್‌ಗಟ್ಟಲೇ ಸರತಿ ನಿಲ್ಲಬೇಕಾದ ಅನಿವಾರ್ಯತೆಯಿದೆ. ಒಂದು ಅರ್ಜಿ ಹಾಕಲು ಮೂರ್ನಾಲ್ಕು ದಿನಗಳಿಂದ ಓಡಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಯಾಕಾದರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತಂದಿತೆನಿಸುತ್ತಿದೆ’.

ಇದು ಸರ್ಕಾರವು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕ ಮಾಡಿಕೊಳ್ಳುತ್ತಿರುವ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಜಿಲ್ಲೆಯ ಸಾವಿರಾರು ಅಭ್ಯರ್ಥಿಗಳ ಅನಿಸಿಕೆ.

ಒಂದು ವಾರದಿಂದ ಮನೆ ಬಿಟ್ಟು ಅರ್ಜಿ ಸಲ್ಲಿಸುವುದಕ್ಕಾಗಿಯೇ ಹಾವೇರಿಯಲ್ಲಿದ್ದೇನೆ. ನಗರದ ಒಂದೇ ಒಂದು ಕಂಪ್ಯೂಟರ್ ಸೆಂಟರ್‌ನಲ್ಲಿ ಅರ್ಜಿ ಅಪ್‌ಲೋಡ್ ಆಗುತ್ತಿಲ್ಲ. ಅರ್ಜಿ ಸ್ವೀಕಾರಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿಯಿವೆ. ತಾಂತ್ರಿಕ ತೊಂದರೆ ಅರ್ಜಿ ಹಾಕಲು ಸಾಧ್ಯವಾಗದೇ ತೊಂದರೆ ಅನುಭವಿಸಬೇಕಾಗಿದೆ ಎಂದು ಎಸ್‌ಡಿಎ ಅರ್ಜಿ ಸಲ್ಲಿಸಲಾಗದೇ ನಿರಾಸೆಯಿಂದ ಕಂಪ್ಯೂಟರ್ ಸೆಂಟರ್‌ಗೆ ಅಲೆಯುತ್ತಿರುವ ತಾಲ್ಲೂಕಿನ ಕೊರಡೂರು ಗ್ರಾಮದ ರೇಖಾ ದಬ್ಬನ್ನವರ ವ್ಯವಸ್ಥೆಯನ್ನು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸರ್ಕಾರ ಕೆಪಿಎಸ್‌ಸಿ ಮೂಲಕ 1134 ಎಸ್‌ಡಿಎ ಹುದ್ದೆಗಳನ್ನು ಹಾಗೂ 758 ಎಫ್‌ಡಿಎ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಈ ಅರ್ಜಿಗಳನ್ನು ಆನಲೈನ್ ಮೂಲಕ ಭರ್ತಿ ಮಾಡುವ ವ್ಯವಸ್ಥೆಯನ್ನು ಅಳವಡಿಸಿದೆ. ಆನಲೈನ್ ಮೂಲಕ ಅರ್ಜಿ ಕಳುಹಿಸಿದ ಮೇಲೆ ಪರೀಕ್ಷಾ ಶುಲ್ಕ ಕಟ್ಟುವ ಬ್ಯಾಂಕ್ ಚಲನ್ ಆನ್‌ಲೈನ್ ಮೂಲಕವೇ ಬರುತ್ತದೆ. ಆಗ ಚಲನ್ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಅಲ್ಲಿಂದ ಬ್ಯಾಂಕಿಗೆ ತೆರಳಿ ಶುಲ್ಕ ಪಾವತಿಸುವ ವ್ಯವಸ್ಥೆಯಿದೆ.

ಆದರೆ, ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿದೆಯೋ ಅಥವಾ ಕೆಪಿಎಸ್‌ಸಿ ಆನ್‌ಲೈನ್ ಸೇವೆಯೇ ನಿಧಾನವಾಗಿದೆಯೋ ಗೊತ್ತಿಲ್ಲ. ಒಂದು ಅರ್ಜಿ ಸಲ್ಲಿಸಲು ಬರೊಬ್ಬರಿ ಮೂರು ಗಂಟೆಯಿಂದ ಎರಡು ದಿನಗಳು ಕಾಲ ಕಾಯ್ದು ನಿಂತ ಉದಾಹರಣೆಗಳಿವೆ. ಆದರೂ ಸಹ ಅರ್ಜಿ ಅಪ್‌ಲೋಡ್ ಆಗುತ್ತಿಲ್ಲ. ಇದರಿಂದ ಬೇಸರಗೊಂಡ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸದೇ ವಾಪಸ್ಸು ಹೋಗಿದ್ದಾರೆ.

ಅರ್ಜಿ ಸಲ್ಲಿಸಿಯೇ ಹೋಗಬೇಕೆಂದವರು ಹಗಲು ರಾತ್ರಿ ಇಂಟರ್‌ನೆಟ್ ಸೆಂಟರ್‌ನಲ್ಲಿಯೇ ಕಾಲ ಕಳೆಯಬೇಕಿದೆ. ಕೆಪಿಎಸ್‌ಸಿ ವೆಬ್‌ಸೈಟ್ ತೆಗೆದು ಅರ್ಜಿಯನ್ನು ಭರ್ತಿ ಮಾಡಿ, ಅದಕ್ಕೆ ಫೋಟೋ ಅಪ್‌ಲೋಡ್ ಮಾಡಿದ ಮೇಲೆ ಅರ್ಜಿ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಮೂರ್ನಾಲ್ಕು ಗಂಟೆಗಳ ಅರ್ಜಿ ಅಪ್‌ಲೋಡ್ ಆಗುತ್ತಿದೆ ಎಂದಷ್ಟೇ ತೋರಿಸುತ್ತದೆ. ಹೊರತು ಅಪ್‌ಲೋಡ್ ಆಗುವುದಿಲ್ಲ. ಅಷ್ಟರಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡರೆ, ಭರ್ತಿ ಮಾಡಿದ ಅರ್ಜಿಯನ್ನು ಮತ್ತೆ ತೆಗೆಯಲು ಬರುವುದಿಲ್ಲ. ಆಗ ಮತ್ತೊಮ್ಮೆ ಅರ್ಜಿ ಭರ್ತಿ ಮಾಡಬೇಕು. ಈ ಎಲ್ಲ ತಾಂತ್ರಿಕ ತೊಂದರೆಗಳು ಅಭ್ಯರ್ಥಿಗಳನ್ನು ರೋಷಗೊಳ್ಳುವಂತೆ ಮಾಡಿವೆ.

ಅರ್ಜಿ ಅಪ್‌ಲೋಡ್ ಆಯಿತೆಂದರೆ, ಅಲ್ಲಿಂದ ಬರುವ ಬ್ಯಾಂಕ್ ಚಲನ ತೆಗೆದುಕೊಂಡು ಎಸ್‌ಬಿಎಂ ಬ್ಯಾಂಕಿನಲ್ಲಿ ಹಣ ಪಾವತಿ ಮಾಡಬೇಕು. ಕೇವಲ ಎಸ್‌ಬಿಎಂ ಬ್ಯಾಂಕಿನಲ್ಲಿ ಮಾತ್ರ ಹಣ ಪಾವತಿ ಮಾಡಬೇಕು. ಹೀಗಾಗಿ ಕಿಲೋಮೀಟರ್‌ಗಟ್ಟಲೇ ಸರತಿ ಸಾಲಿನಲ್ಲಿ ಏಳೆಂಟು ಗಂಟೆ ಕಾಲ ಕಾಯ್ದು ಚಲನ್ ಪಾವತಿಸಬೇಕು. ಅಲ್ಲಿಯೂ ಹೆಚ್ಚಿನ ಕೌಂಟರ್ ಮಾಡದೇ ಇರುವುದು ಅಭ್ಯರ್ಥಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ.

ಮಾರ್ಚ್ 8 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆದರೆ ಅಷ್ಟರೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆಯೇ ಇಲ್ಲವೋ ಎನ್ನುವ ಭೀತಿ ಎದುರಾಗಿದೆ. ಕೇವಲ ಎಸ್‌ಬಿಎಂ ಬ್ಯಾಂಕಿನಲ್ಲಿ ಮಾತ್ರ ಶುಲ್ಕ ತುಂಬಲು ಹೇಳಿರುವುದು ಸಮಸ್ಯೆಗೆ ಕಾರಣವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶುಲ್ಕ ಭರ್ತಿಗೆ ಅವಕಾಶ ನೀಡಬೇಕು ಎಂದು ಅಭ್ಯರ್ಥಿ ಮಾಹಾಂತೇಶ ಕಣವಿ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT