ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಸಿಎಸ್‌ಟಿ ರಾಷ್ಟ್ರೀಯ ಸಮ್ಮೇಳನ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ಎಂಜಿನಿಯರಿಂಗ್ ಕಾಲೇಜು `ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ -ಎಫ್‌ಸಿಎಸ್‌ಟಿ 12~ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಈಚೆಗೆ ಆಯೋಜಿಸಿತ್ತು. ಎರಡು ದಿನಗಳ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಸವಾಲುಗಳ ಜೊತೆಗೆ ಹೊಸ ಪರಿಕಲ್ಪನೆಗಳನ್ನು ಚರ್ಚಿಸಲಾಯಿತು. ತಜ್ಞರು ತಮ್ಮ ತಂತ್ರಜ್ಞಾನಗಳ ಕಲ್ಪನೆ ಮತ್ತು ಮಾಹಿತಿಯನ್ನು ಹಂಚಿಕೊಂಡರು. ಇದು ಸಂಶೋಧನೆಯ ಉತ್ತೇಜನ ಹಾಗೂ ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಇತ್ತೀಚಿನ ಪ್ರವೃತ್ತಿಗಳ ಮಾಹಿತಿಯನ್ನು ಹಂಚಿಕೊಳ್ಳಲು ಒಂದು ವೇದಿಕೆಯಾಗಿ ಪರಿಣಮಿಸಿತು.

ರಾಜರಾಜೇಶ್ವರಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಎ.ಸಿ ಷಣ್ಮುಗನ್ ಮಾತನಾಡಿ, `ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಈ ಸಮ್ಮೇಳನ ವಿವಿಧ ಕ್ಷೇತ್ರಗಳಲ್ಲಿ ಸವಾಲುಗಳ ಚರ್ಚೆ ಜೊತೆಗೆ ಹೊಸ ಪರಿಕಲ್ಪನೆಗಳನ್ನು ಹೊರತರುವ ಉದ್ದೇಶ ಹೊಂದಿದೆ. ತಂತ್ರಜ್ಞಾನಗಳ ವಿಚಾರ ಹಂಚಿಕೊಳ್ಳಲು ಇದು ಉತ್ತಮ ವೇದಿಕೆ ಒದಗಿಸುತ್ತಿದೆ~ ಎಂದರು.

ಮಂಗಳೂರು ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ. ಟಿ.ಸಿ.ಶಿವಶಂಕರ ಮೂರ್ತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅನಂತರ ಮಾತನಾಡಿದ ಅವರು, 2005 ಮತ್ತು 2010 ರ ನಡುವೆ, ಭಾರತ ವಿಶ್ವದ ಪ್ರಮುಖ ಮೂರು ವೈಜ್ಞಾನಿಕ ಪತ್ರಿಕೆಗಳಲ್ಲಿ ಕೇವಲ 16 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದೆ.

ಆದರೆ ಅಮೆರಿಕ 480, ಚೀನಾ 76, ದಕ್ಷಿಣ ಕೊರಿಯಾ 46, ಬ್ರೆಜಿಲ್ 24 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ನಾವು ಕೂಡ ಗುಣಮಟ್ಟ ಮತ್ತು ಶೈಕ್ಷಣಿಕ ಸಂಸ್ಥೆಗಳ ಮಾಹಿತಿ ಸಂವಹನ ವ್ಯವಸ್ಥೆಯ ಬಳಕೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ 53 ಹುದ್ದೆಗಳು ಖಾಲಿ ಇವೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ  ಉಪನ್ಯಾಸಕರ ಪೈಕಿ ಶೇ 48 ಮಂದಿ ಪಿಎಚ್‌ಡಿ ಹೊಂದಿಲ್ಲ ಎಂದರು.

ಬೆಂಗಳೂರಿನ ಯುವಿಸಿಇ ಪ್ರಾಂಶುಪಾಲ ಪ್ರೊ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ಭಾರತ ಕಲೆ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿಯಲ್ಲಿ ಸಮೃದ್ಧ ದೇಶ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶ ಮುಂದುವರಿದಿದೆ. ಇತರರಿಗೆ ಹೋಲಿಸಿದರೆ ನಾವು ಉತ್ತಮರು. ನಮ್ಮಲ್ಲಿ ಪ್ರತಿಭಾವಂತ ಮಾನವ ಸಂಪನ್ಮೂಲ ಇದೆ. ಆದರೆ ಆತ್ಮವಿಶ್ವಾಸದ ಕೊರತೆ ಇದೆ. ಇದನ್ನು ನೀಗಿಸಬೇಕು ಎಂದರು.

ಐಬಿಎಂ ಸಾಫ್ಟ್‌ವೇರ್ ಗ್ರೂಪ್‌ನ ಐಬಿಎಂ ಇಂಡಿಯಾ ಪ್ರೈ. ಲಿಮಿಟೆಡ್‌ನ ಕಂಟ್ರಿ ಲೀಡರ್ ಎಸ್.ಮಾಲತಿ, ಮಂಗಳೂರು ವಿ.ವಿ.ಯ ಪಿಜಿ ಸ್ಟಡೀಸ್ ಮತ್ತು ರಿಸರ್ಚ್ ಇನ್ ಕಂಪ್ಯೂಟರ್ ಸೈನ್ಸ್ ಅಧ್ಯಕ್ಷ ಡಾ. ಡಿ.ಎಚ್.ಮಂಜಯ್ಯ, ಇಸ್ರೋದ ಹಿರಿಯ ವಿಜ್ಞಾನಿ ಸಿ.ಜೆ.ಜಗದೀಶ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT