ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಮರೆಯ ತಾಳೆಗರಿ ಚಿತ್ರ ಕಲಾವಿದ

Last Updated 28 ಜೂನ್ 2011, 10:05 IST
ಅಕ್ಷರ ಗಾತ್ರ

ವಿಜಯಪುರ: `ಕಲೆಯು ಯಾರೊಬ್ಬರ ಸ್ವತ್ತೂ ಅಲ್ಲ. ಕಣ್ಣಲ್ಲಿ ನೋಡಿದ್ದನ್ನು ಕೈಯಲ್ಲಿ ಮಾಡಲು ಶಾಲಾ ಶಿಕ್ಷಣ ಬೇಕಿಲ್ಲ. ನಮ್ಮ ಪೂರ್ವಜರು ತಾಳೆಗರಿಯ ಮೇಲೆ ಬಿಡಿಸುತ್ತಿದ್ದ ಕಲೆಯನ್ನು ನೋಡಿಯೇ ನಾನೂ ಕಲಿತೆ~ ಎನ್ನುತ್ತಾರೆ ಚಿತ್ರಕಲಾವಿದ ಶಂಕರಪ್ಪ.

ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಮೂಲದ ಶಂಕರಪ್ಪ ತಮ್ಮ ಪತ್ನಿ ಮತ್ತು ಒಬ್ಬ ಮಗನೊಂದಿಗೆ ಆವತಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಪ್ರತಿ ದಿನ ಊರೂರು ತಿರುಗಿ ಆಟಿಕೆಗಳನ್ನು ಮಾರಾಟ ಮಾಡಿ ಬಂದದ್ದರಲ್ಲಿ ಹೊಟ್ಟೆಪಾಡು ನೀಗಿಸುತ್ತಿದ್ದಾರೆ. ರೈಲು ನಿಲ್ದಾಣ, ಶಾಲಾ ಕಟ್ಟಡಗಳೇ ಅವರಿಗೆ ವಾಸ ಸ್ಥಾನ. ಬಿಡುವಿನ ವೇಳೆಯಲ್ಲಿ ತಾಳೆ ಗರಿಯ ಮೇಲೆ ದೇವರ ಚಿತ್ರಗಳನ್ನು ಬಿಡಿಸುವ ಅದ್ಭುತ ಕಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಪತ್ನಿಯೂ ಹೇರ್‌ಪಿನ್, ಮತ್ತಿತರ ಸ್ತ್ರೀ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಮಗನೊಬ್ಬ ಯಲಹಂಕದಲ್ಲಿ ಕೂಲಿಯಲ್ಲಿ ತೊಡಗಿದ್ದಾನೆ. `ಮೂರ‌್ನಾಲ್ಕು ತಿಂಗಳಿಗೆ ಸ್ವಗ್ರಾಮಕ್ಕೆ ಹೋಗುತ್ತೇವೆ.ಉಳಿದಂತೆ ರೈಲು ನಿಲ್ದಾಣದಲ್ಲಿಯೇ ಜೀವಿಸುತ್ತಿದ್ದೇವೆ~ ಎಂದು ಅವರು ಹೇಳುತ್ತಾರೆ.

ಜ್ಯೋತಿಷಿಗಳು, ವೈದಿಕ ವೃತ್ತಿಯವರು ಇರುವ ಕಡೆ ತಾಳೆಗರಿ ತಂದು ಕೊಡುತ್ತಾರೆ. 30 ತಾಳೆಗರಿಯಲ್ಲಿ ವಿವಿಧ ದೇವರು, ರಾಮಾಯಣ, ಮಹಾಭಾರತ ದೃಶ್ಯಗಳನ್ನು ದಬ್ಬಳದ ಸಹಾಯದಿಂದ ಬಿಡಿಸಿ ಕೊಟ್ಟರೆ ಸುಮಾರು 500 ರೂಪಾಯಿ ಕೊಡುತ್ತಾರೆ. ಇದರಿಂದ ಬಿಡುವಿನ ವೇಳೆಯೂ ಉಪಯೋಗವಾದಂತಾಗುತ್ತದೆ. ಕಲೆಗೂ ಬೆಲೆ ಸಿಗುತ್ತಿದೆ ಎಂದು ಶಂಕರಪ್ಪ ಹೇಳುತ್ತಾರೆ.

ಚಿತ್ರ ಬಿಡಿಸಿ ಅರಿಶಿನ, ಕುಂಕುಮ ಸವರಿದರೆ ಚಿತ್ರಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ತಮ್ಮ ಕೈಯಿಂದ ಬಿಡಿಸಿದ ಚಿತ್ರಗಳಿರುವ ತಾಳೆಗರಿಗಳನ್ನು ಕೊಡುತ್ತಾರೆ. ಆದರೆ ಕಲೆ ಪ್ರದರ್ಶಿಸಲು ಸೂಕ್ತ ವೇದಿಕೆ, ಪ್ರೋತ್ಸಾಹ ಸಿಗದೆ ಎಲೆ ಮರೆಯ ಕಾಯಿಯಂತೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT