ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಪಕ್ಷಗಳ ನಾಯಕರಿಗೊಂದು ಬಹಿರಂಗ ಪತ್ರ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚುನಾವಣೆಗಳು ಬರುತ್ತಿವೆ. ಸಾರ್ವತ್ರಿಕ ಶಾಂತಿ ಘೋಷಿಸಲಾಗಿದೆ. ತೋಳಗಳು ಕೋಳಿಸಂತತಿಯ ಆಯುಷ್ಯ ಹೆಚ್ಚಿಸುವತ್ತ ಪ್ರಾಮಾಣಿಕ ಆಸಕ್ತಿ ವಹಿಸತೊಡಗಿವೆ. 
- ಜಾರ್ಜ್ ಎಲಿಯಟ್

ಮಾನ್ಯರೇ,
ಚುನಾವಣೆ ಹತ್ತಿರ ಬರುತ್ತಿದೆ. ಇದುವರೆಗೆ ದಿನನಿತ್ಯವೂ ಪತ್ರಿಕೆಗಳಲ್ಲಿ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು ನಡೆಸುತ್ತಿದ್ದ ನಾನಾ ರೀತಿಯ ಕಸರತ್ತುಗಳನ್ನು ಗಮನಿಸಿದ್ದೇವೆ. ಸಂಭಾವ್ಯ ಪಟ್ಟಿ, ಪ್ರಥಮ ಸಂಭವನೀಯ ಪಟ್ಟಿ, ಪ್ರಥಮ ಪಟ್ಟಿ, ದ್ವಿತೀಯ ಪಟ್ಟಿ, ಅಂತಿಮ ಪಟ್ಟಿ, ಭಿನ್ನಮತ ಇವೆಲ್ಲ ಯಾವ ಪಕ್ಷದ ಕಾರಿಡಾರುಗಳಲ್ಲಿ ಹೇಗೆ ಹೇಗೆ ನಡೆದು ಏನಾಗಬಹುದೆಂದು ಸೂಕ್ಷ್ಮವಾಗಿ ರಾಜಕೀಯ ವಿದ್ಯಮಾನಗಳನ್ನು ಗಮನಿಸುವ ಪ್ರತಿಯೊಬ್ಬರೂ ಊಹಿಸಬಹುದಾಗಿದೆ.

ಭಿನ್ನಮತೀಯರನ್ನು ಸುಮ್ಮನಿರಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೆಂದರೆ ಚುನಾವಣೆಯನ್ನು ಅರ್ಧ ಗೆದ್ದ ಹಾಗೆ ಎಂದು ಎಲ್ಲ ಪಕ್ಷಗಳೂ ಭಾವಿಸಿರುವುದರಿಂದ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನದ ಕೊನೆಯ ಕ್ಷಣದವರೆಗೆ ಊಹೆ, ಕಸರತ್ತು, ಲಾಬಿ, ಭಿನ್ನಮತ ಎಲ್ಲವೂ ನಡೆಯುತ್ತಿರುತ್ತವೆ.

ಹೌದು. ಚುನಾವಣೆಯೆಂಬ ಮಾಯಾಬಜಾರ್ ತಂದುಕೊಡುವ ಅಖಂಡ ಐದು ವರ್ಷಗಳ ಎಣೆಯಿಲ್ಲದ ಅಧಿಕಾರಕ್ಕಾಗಿಯೇ ಈ ಎಲ್ಲ ಕಸರತ್ತು ಎಂದು ಅರಿತುಕೊಳ್ಳುವುದು ಕಷ್ಟವೇನಲ್ಲ. ತಾನು ಪ್ರತಿನಿಧಿಸುವ ಜನರಿಗಾಗಿಯೇ ಕೆಲಸ ಮಾಡಲು ಬಯಸುವವನು ಸೋತರೂ ಜನರ ನಡುವೆ ಇದ್ದು ಕೆಲಸ ಮಾಡುತ್ತಾನೆ. ಆದರೆ ಈಗ `ಜನಸೇವೆ'  ಎಂದರೆ ಗೆದ್ದು, ಅಧಿಕಾರ ಪಡೆದು ತನ್ನ ಹಿಂಬಾಲಕರಿಗೆ ಕೊಡುವ ಅಪಾತ್ರದಾನವಾಗಿರುವುದರಿಂದ ಗೆಲುವು ಮುಖ್ಯವೇ ಹೊರತು ಜನಸೇವೆಯಲ್ಲ. ಚುನಾವಣೆಗೆ ನಿಲ್ಲುವ ಯಾವ ಅಭ್ಯರ್ಥಿಯೂ ವಿರೋಧಪಕ್ಷವಾಗಿ ಜನಸೇವೆ ಮಾಡುವ ಕನಸು ಹೊಂದುವುದಿಲ್ಲ.

ಇಂದು ನಿನ್ನೆ ರಾಜಕೀಯಕ್ಕೆ ಬಂದವನೂ ಹೇಗಾದರೂ ಮಾಡಿ, ಮತದಾರರ ಹಾದಿಯುದ್ದಕ್ಕೂ ಹಣಹೆಂಡ ಸುರಿದು ಗೆಲ್ಲಲು ಪ್ರಯತ್ನಿಸುತ್ತಾನೆಯೇ ಹೊರತು ಸೋಲ ಬಯಸುವುದಿಲ್ಲ. ಇದೆಲ್ಲ ಇರಲಿ. ಎಲ್ಲ ರಾಜಕೀಯ ಪಕ್ಷಗಳ ನಾಯಕರೇ, ಈ ಪತ್ರ ಬರೆದ ಉದ್ದೇಶ ಎಚ್ಚೆತ್ತ ಮಹಿಳಾ ಸಮೂಹ ಸೂಕ್ಷ್ಮವಾಗಿ ನಿಮ್ಮ ರಾಜಕೀಯ ನಡೆಗಳನ್ನು ಗಮನಿಸುತ್ತಿದೆ ಎಂದು ಹೇಳುವುದು. ಅನಾದಿಯಿಂದ ಮಹಿಳೆಯರನ್ನು ಅಧಿಕಾರದಿಂದ ದೂರ ಇಡಲಾಗಿದೆ. ಮಹಿಳೆ ಎಲ್ಲಿದ್ದರೂ ವಿರೋಧ ಪಕ್ಷದವಳೇ, ಆಳುವವರ ಪರವಾಗಿರುವುದಿಲ್ಲ.

ಎಂದೇ ಪ್ರಶ್ನಿಸುವ ಹೆಣ್ಣುಗುಣಕ್ಕೆ ಹೆದರಿ ಅವಳನ್ನು ಅಧಿಕಾರದ ಸ್ಥಾನಗಳಿಂದ ದೂರವಿಡಲಾಗಿದೆ. ಅವಳನ್ನು ನಿಭಾಯಿಸುವುದು ಕಷ್ಟವೆಂಬ ಕಾರಣಕ್ಕೆ ಒಳವ್ಯೆಹ ತಂತ್ರ ಗುಟ್ಟುಗಳ ರಾಜಕಾರಣದ ಲೋಕಕ್ಕೆ ಅವಳು ಸೂಕ್ತವಲ್ಲವೆಂಬ ಮಿಥ್ ಸೃಷ್ಟಿಸಿ, `ಗೆಲುವಿನ ಸಾಧ್ಯತೆ'  ಇಲ್ಲವೆಂದು ಹಣೆಪಟ್ಟಿ ಹಚ್ಚಿ ರಾಜಕೀಯದ ಕಾರಿಡಾರುಗಳಿಗೆ ಕಾಲಿಡದಂತೆ ನೋಡಿಕೊಳ್ಳಲಾಗಿದೆ.

ಇತ್ತೀಚೆಗೆ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಸಂದರ್ಭದಲ್ಲಿ ಪಕ್ಷಭೇಧ ಮರೆತು ಎಲ್ಲ ಮಹಿಳಾ ಸಂಸತ್ ಸದಸ್ಯೆಯರು ಪರಸ್ಪರ ಅಪ್ಪಿ ಹಿಡಿದು ಸಂಭ್ರಮಿಸಿದ್ದ ಚಿತ್ರ ಇನ್ನೂ ಕಣ್ಣ ಮುಂದಿದೆ. ನಮ್ಮ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳೂ ಮಹಿಳಾ ಮೀಸಲಿನ ಪರವಾಗಿಯೇ ಮತ ಹಾಕಿದ್ದವು. ಹಾಗೆ ಮುಕ್ತಕಂಠದಿಂದ ಮಹಿಳಾ ಮೀಸಲಾತಿ ಬೆಂಬಲಿಸಿ ಕತ್ತಿ ಹರಿತಗೊಳಿಸಿಕೊಂಡವರು ಈಗ ಅಭ್ಯರ್ಥಿ ಆಯ್ಕೆ ಸಮಯದಲ್ಲಿ ಏಕೆ ತಂತಮ್ಮ ಕತ್ತಿಗಳನ್ನು ಒರೆಯಲ್ಲಿಟ್ಟು ಸುಮ್ಮನಿದ್ದಾರೆ? ಸಮಸಮಾಜದ ಕನಸು ಬಿತ್ತುವ ಎಡ ಪಕ್ಷಗಳಿಂದ ಹಿಡಿದು ಶಕ್ತಿದೇವತೆಯನ್ನು ಶಂಖಜಾಗಟೆ ಹಿಡಿದು ಪೂಜಿಸುವ ಕೋಮುವಾದಿಗಳ ತನಕ ಎಲ್ಲ ರಾಜಕೀಯ ಪಕ್ಷಗಳೂ, ಸಂಘಟನೆಗಳೂ ಮಹಿಳೆಯರನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲವೆಂಬಂತೆ ಭಾವಿಸಿದ್ದಾರೆ.

ಬೃಂದಾ ಕಾರಟ್ ಬಿಟ್ಟರೆ ಎಡಪಕ್ಷಗಳಲ್ಲಿ ವರ್ಚಸ್ವೀ ಮಹಿಳಾ ನಾಯಕತ್ವ ಬೆಳೆದು ಬರಲಿಲ್ಲ. ಎಡಪಕ್ಷಗಳ ಸರ್ಕಾರಗಳಲ್ಲಿ ಕೂಡಾ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲೇ ಇಲ್ಲ. ರಾಜ್ಯದ ಪ್ರಗತಿಪರ ಸಂಘಟನೆಗಳು ಇತ್ತೀಚೆಗೆ ಸೇರಿ ರಚಿಸಿಕೊಂಡಿರುವ ಪ್ರಜಾ ಪ್ರಗತಿ ರಂಗದಲ್ಲಿಯೂ ಮಹಿಳಾ ನಾಯಕಿಯರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿಲ್ಲ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಹಿಳೆಯೇ ಆಗಿದ್ದರೂ ಆ ಪಕ್ಷದ ಮಹಿಳಾ ನಾಯಕಿಯರು ಚುನಾವಣೆಯಲ್ಲಿ ಟಿಕೆಟ್ ಕೋರಿ ಅಧ್ಯಕ್ಷರ ಮನೆಯ ಮುಂದೆ ಧರಣಿ ನಡೆಸಬೇಕಾದ ಪರಿಸ್ಥಿತಿ ಇದೆ. ಚೆಲುವ ಕನ್ನಡನಾಡು ರಚನೆಗೊಂಡು 63 ವರ್ಷಗಳ ಬಳಿಕವೂ ಮಹಿಳಾ ಮುಖ್ಯಮಂತ್ರಿಯಾಗಬಹುದಾದ ಅಭ್ಯರ್ಥಿ ಕಂಡುಬರುವುದಿಲ್ಲ. ಇವೆಲ್ಲ ಸೂಚಿಸುವುದಾದರೂ ಏನನ್ನು?

ಸಂವಿಧಾನ ರಚನಾ ಸಭೆಯ ಕಾಲದಿಂದಲೂ ಸೂಕ್ತ ಪ್ರಾತಿನಿಧ್ಯವಿಲ್ಲದೇ ಮಹಿಳೆ ವಂಚಿತಳಾಗಿರುವ ಕ್ಷೇತ್ರ ರಾಜಕಾರಣ. ಅಧಿಕಾರ ವಿಕೇಂದ್ರೀಕರಣದ ಕನಸಿನಿಂದ ಪಂಚಾಯತ್ ರಾಜ್ ಮಸೂದೆ ಬಂತು. ಅದರ ಫಲವಾಗಿ ಬಹುತೇಕ ಗ್ರಾಮ/ ತಾಲ್ಲೂಕು/ ಜಿಲ್ಲಾ ಪಂಚಾಯತ್‌ಗಳಲ್ಲಿ ಮಹಿಳಾ ಪ್ರತಿನಿಧಿಗಳನ್ನು ಕಾಣಬಹುದಾಗಿದೆ.

ಆದರೆ ಹಾಗೆ ರಾಜಕೀಯ ಪ್ರವೇಶಿಸಿದ ಸಾವಿರಾರು ಮಹಿಳಾ ಪ್ರತಿನಿಧಿಗಳಲ್ಲಿ ಕೈ ಬೆರಳೆಣಿಕೆಯಷ್ಟು ಮಹಿಳೆಯರೂ ತಮ್ಮ ಸ್ಥಾನವನ್ನು ಮೆಟ್ಟಿಲೋಪಾದಿಯಲ್ಲಿ ಬಳಸಿಕೊಂಡು ವಿಧಾನಸಭೆ, ಸಂಸತ್ತಿಗೆ ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲವೇಕೆ? ಅಧಿಕಾರ, ಹಣಕಾಸು ನಗಣ್ಯವೆನ್ನುವಷ್ಟಿರುವ ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರನ್ನು ಕೈಗೊಂಬೆಗಳಾಗಿ ರಾಜಕೀಯ ನಡೆಸಲು ಬಿಟ್ಟು ಉನ್ನತ ಮಟ್ಟದ ಅಧಿಕಾರ ಸ್ಥಾನಗಳಿಗೆ ಮಾತ್ರ ಜಾತಿ/ಹಣ/ಕುಟುಂಬದ ಹೆಸರಿನ ಬೆಂಬಲವಿರುವ ಕೆಲ ನಾಯಕಿಯರನ್ನೇ ತರಲಾಗುತ್ತಿದೆ ಏಕೆ?

ಇತ್ತೀಚೆಗೆ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತ ಮಹಿಳಾಲೋಕ ಈ ಎಲ್ಲ ಪ್ರಶ್ನೆ ಕೇಳಿಕೊಳ್ಳತೊಡಗಿದೆ. ಹೆಣ್ಣು, ಮಾನ, ಶೀಲ ಇತ್ಯಾದಿ `ಮೌಲ್ಯ'ಗಳ ಕುರಿತು ಎಗ್ಗಿಲ್ಲದೇ ಮಾತನಾಡುವ ಯಾವ ರಾಜಕಾರಣಿ/ರಾಜಕೀಯ ಪಕ್ಷವಾದರೂ ಮಹಿಳೆಯನ್ನು `ವೋಟ್‌ಬ್ಯಾಂಕ್' ಎಂದು ಪರಿಗಣಿಸಿದೆಯೆ? ತನ್ನ ಮಹಿಳಾ ಪ್ರತಿನಿಧಿಗಳನ್ನು ಸಮಷ್ಟಿಗಾಗಿ ಮತ್ತು ಮಹಿಳೆಯರ ಏಳ್ಗೆಗಾಗಿ ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿದೆಯೆ?

ಮಹಿಳಾ ಬಸ್, ಮಹಿಳಾ ಬ್ಯಾಂಕ್, ಮಹಿಳಾ ಪೊಲೀಸ್ ಸ್ಟೇಷನ್, ರಾತ್ರಿಪಾಳಿ ನಿಷೇಧಗಳೆಂಬ ಮೇಲುಮೇಲಿನ ತೋರುಗಾಣಿಕೆಯ ಸ್ಲೋಗನ್ನುಗಳಿಂದ ಇಷ್ಟು ದಿನ ಸಾಧಿಸಿದ್ದಾದರೂ ಏನು? ತನ್ನ ಕುರ್ಚಿಯಲ್ಲಿ ಕೂರುವ ಜಾಗಕ್ಕೆ ಪಾಲು ಕೇಳುತ್ತ ಬಾರದಿರಲೆಂದೇ ಲಂಗ, ಸೀರೆ, ಬ್ಲೌಸು, ದುಡ್ಡು, ತಾಳಿ ಕೊಡುತ್ತೇವೆಂಬ ಆಮಿಷಗಳೇ? ನಿಜವಾದ ಮಹಿಳಾಪರ ಕಾಳಜಿಯಿದ್ದರೆ ಮಹಿಳಾ ಮೀಸಲಾತಿ ಕಾನೂನು ಇಲ್ಲದಿದ್ದರೂ ತಂತಮ್ಮ ಪಕ್ಷದಲ್ಲಿ ಅರ್ಹ ಮಹಿಳೆಯರಿಗೆ ಕನಿಷ್ಠ ಮೂರನೇ ಒಂದು ಭಾಗದಷ್ಟಾದರೂ ಸೀಟು ಕೊಡಲು ಯಾವ ಅಡಚಣೆಯಿದೆ? ಅಂಥ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲು ಏನು ಕಷ್ಟವಿದೆ?

ಇತ್ತೀಚೆಗೆ ಪಕ್ಷದ ನಾಯಕಿಯೊಬ್ಬರು ಮಹಿಳೆಯರ ಹೆಸರಿಲ್ಲದ ಪಟ್ಟಿಯನ್ನು ತಿರಸ್ಕರಿಸಿದ್ದು ಎಚ್ಚೆತ್ತ ಮಹಿಳಾಪ್ರಜ್ಞೆಯ ಒಂದು ಕುರುಹಾಗಿ ಭಾವಿಸಬಹುದಾದರೆ, ರಾಜಕೀಯ ಬಂಧುಗಳೇ, ನಿಮ್ಮ ನಡೆಗಳನ್ನು ನಾವು ಗಮನಿಸುತ್ತಿದ್ದೇವೆ. ಪಕ್ಷಗಳಲ್ಲಿ ಮಹಿಳಾ ನಾಯಕತ್ವ ಬೆಳೆಸಿ. ಮುಕ್ತವಾಗಿ ಕೆಲಸ ಮಾಡಲು ಅವಕಾಶ ಕೊಡಿ. ಇಲ್ಲದಿದ್ದರೆ ಸೂಕ್ತ ಪ್ರಾತಿನಿಧ್ಯವಿಲ್ಲದ ಪಕ್ಷಗಳ ಮಹಿಳಾ ಅಭ್ಯರ್ಥಿಗಳು ತಂತಮ್ಮ ಸ್ಥಾನ ತೊರೆದು ಹೊರಬರಬೇಕು.

ಅಂಥ ಪಕ್ಷಗಳಿಗೆ ಮತ ನೀಡಲು ಮಹಿಳೆಯರೂ ನಿರಾಕರಿಸಬೇಕು. ಅಂಥ ಪಕ್ಷಗಳನ್ನು ಎಲ್ಲ ಮತದಾರರೂ ನಿರಾಕರಿಸಬೇಕು. ಇದಕ್ಕೆಲ್ಲ ಪೂರ್ವಭಾವಿಯಾಗಿ ಜನಾಂದೋಲನವೊಂದು ರೂಪುಗೊಳ್ಳಬೇಕು. ಆಗಲಾದರೂ ಈ ಅಸಮಾನ ಭಾರತ ಸಮತಟ್ಟಾದ ಹಸಿರು ಭೂಮಿಯಾದೀತು.

ಭಾರತೀಯ ಮಹಿಳೆಯ ಅಧಿಕಾರವೆಂಬ ಇರುಳ ದಿಗಂತದಿಂದ ಖಾಯಂ ಅಸ್ತಂಗತವಾಗಿರುವ ಸೂಕ್ತ ಪ್ರಾತಿನಿಧ್ಯ, ಸಮಾನ ಗೌರವಗಳು ಮತ್ತೆ ಉದಯಿಸಬಹುದು. 

ಕರ್ನಾಟಕದ ಪ್ರಜ್ಞಾವಂತ ಮಹಿಳೆಯರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT