ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಹೋದರು, ಏಕೆ ಹೋದರು ಈ ಅಭಿಮಾನಿಗಳು?

Last Updated 20 ನವೆಂಬರ್ 2011, 19:30 IST
ಅಕ್ಷರ ಗಾತ್ರ

`ಭಾರತದಲ್ಲಿ ಕ್ರಿಕೆಟ್ ಎಂಬುದು ಧರ್ಮ, ಸಚಿನ್ ದೇವರು~ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಅತಿಯಾದ ಕ್ರಿಕೆಟ್ ಆ ಪ್ರೀತಿಗೆ ಕುತ್ತು ತಂದಿದೆ.

ಹಣದ ಹೊಳೆಯಲ್ಲಿಯೇ ತೇಲುತ್ತಿರುವ ಬಿಸಿಸಿಐಗೆ ಇದು ಅರ್ಥವಾಗುತ್ತಿಲ್ಲ. ಸತತ ಕ್ರಿಕೆಟ್‌ನಿಂದ ಅಭಿಮಾನಿಗಳು ಎಷ್ಟು ಬೇಸತ್ತಿದ್ದಾರೆ ಎಂದರೆ ಸಚಿನ್, ದ್ರಾವಿಡ್, ಲಕ್ಷ್ಮಣ್ ಅವರಂತಹ ಅಪ್ರತಿಮರು ಆಡುತ್ತಿದ್ದಾಗಲೂ ಕ್ರೀಡಾಂಗಣ ಖಾಲಿ ಖಾಲಿ! ಎಲ್ಲಿ ಹೋದರು, ಏಕೆ ಹೋದರು ಈ ಅಭಿಮಾನಿಗಳು?

`ನಾವು ಭಾರತಕ್ಕಾಗಿ ಆಡುತ್ತಿದ್ದೇವೆ, ಪ್ರೇಕ್ಷಕರಿಗಾಗಿ ಅಲ್ಲ~ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುತ್ತಿಲ್ಲವಲ್ಲ ಎಂದು ಪದೇಪದೇ ಎದುರಾಗುತ್ತಿದ್ದ ಪ್ರಶ್ನೆಗೆ ಭಾರತ ತಂಡದ ನಾಯಕ ಎಂ.ಎಸ್.ದೋನಿ ಕೊಂಚ ಅಸಮಾಧಾನ ಹಾಗೂ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ ರೀತಿ ಇದು.

ತಕ್ಷಣವೇ ಕಿರುನಗೆ ಬೀರಿದ ದೋನಿ `ವಿಶ್ವಕಪ್, ಐಪಿಎಲ್, ಚಾಂಪಿಯನ್ಸ್ ಲೀಗ್, ಆ ಸರಣಿ, ಈ ಸರಣಿ... ಹೀಗೆ ಭಾರತದಲ್ಲಿ ವಿಪರೀತ ಕ್ರಿಕೆಟ್ ನಡೆಯುತ್ತಿದೆ. ಹಾಗಾಗಿ ಪ್ರೇಕ್ಷಕರಿಗೂ ವಿಶ್ರಾಂತಿ ಬೇಕಲ್ಲವೇ~ ಎಂದರು! 

 ನಿಜ, ಕ್ರಿಕೆಟ್ ವಿಪರೀತವಾಯಿತು. ಆಟಗಾರರು ಮಾತ್ರವಲ್ಲ; ಪಂದ್ಯಗಳನ್ನು ವೀಕ್ಷಿಸುತ್ತಿರುವ ಪ್ರೇಕ್ಷಕ ಕೂಡ ಸುಸ್ತಾಗಿದ್ದಾನೆ. ಪರಿಣಾಮ ಕ್ರಿಕೆಟ್ ಧರ್ಮವೆಂದು ಪರಿಗಣಿಸಿರುವ ದೇಶದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳಿದ್ದಾಗಲೂ ಕ್ರೀಡಾಂಗಣಗಳು ಖಾಲಿ ಖಾಲಿ.

ರಣಜಿ ಪಂದ್ಯ ನಡೆಯುತ್ತಿದೆಯೇನೊ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಆಯಾ ಕ್ರಿಕೆಟ್ ಸಂಸ್ಥೆಗಳ ಸದಸ್ಯರು ಹಾಗೂ ಪೊಲೀಸರು ಮಾತ್ರ ಕಾಣುತ್ತಿದ್ದಾರೆ!

ಕ್ರೀಡಾಂಗಣಕ್ಕೆ ಹೋಗಿ ನೋಡುವುದನ್ನು ಬಿಟ್ಟುಬಿಡಿ; ಟಿವಿ ಮೂಲಕ ಕ್ರಿಕೆಟ್ ವೀಕ್ಷಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಹತ್ತು ದಿನ ಕೂಡ ಬಿಡುವಿಲ್ಲದಂತೆ ಕ್ರಿಕೆಟ್ ನಡೆಯುತ್ತಿದೆ. 28 ವರ್ಷಗಳ ಬಳಿಕ ಬಂದ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ಸರಿಯಾಗಿ ಆಚರಿಸಲು ಭಾರತ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

 
ಏಕೆಂದರೆ ಸಮಯದ ಅಭಾವ. ವಿಶ್ವಕಪ್ ಮುಗಿದು ಒಂದು ವಾರ ಕಳೆಯುವಷ್ಟರಲ್ಲಿ ಐಪಿಎಲ್ ಶುರುವಾಯಿತು. ಐಪಿಎಲ್ ಮುಗಿದ ಕೆಲ ದಿನಗಳಲ್ಲಿ ವಿಂಡೀಸ್ ಪ್ರವಾಸ, ಬಳಿಕ ಇಂಗ್ಲೆಂಡ್ ಪ್ರವಾಸ.
 

ಮತ್ತೆ ಇಂಗ್ಲೆಂಡ್ ಎದುರು ಸ್ವದೇಶದಲ್ಲಿ ಸರಣಿ, ಈಗ ವೆಸ್ಟ್‌ಇಂಡೀಸ್ ಎದುರು ಸರಣಿ... ಇಷ್ಟಕ್ಕೆ ಮುಗಿಯಿತಾ? ಉಹೂಂ; ಮತ್ತೆ ದೋನಿ ಪಡೆ ಮೂರು ತಿಂಗಳ ಅವಧಿಯ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗುತ್ತಿದೆ!

ನಿಮಗೆ ಗೊತ್ತಿರಬಹುದು, 2008ರಲ್ಲಿ ಮೊಹಾಲಿಯಲ್ಲಿ ಬ್ರಯಾನ್ ಲಾರಾ ಅವರ ದಾಖಲೆಯನ್ನು ಅಳಿಸಿ ಹಾಕಿ ವಿಶ್ವ  ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಸಚಿನ್ ಪಾತ್ರರಾದಾಗ ಅಲ್ಲಿ ಬೆರಳೆಣಿಕೆ ಮಂದಿ ಪ್ರೇಕ್ಷಕರಿದ್ದರು. ಇಂಥ ಅದ್ಭುತ ಸಾಧನೆಯ ಸಮಯದಲ್ಲಿ ಈ ರೀತಿ ಆಗಿದ್ದು ವಿಪರ್ಯಾಸ.

ವಿಪರೀತ ಕ್ರಿಕೆಟ್ ಮಾತ್ರವಲ್ಲ; ದುಬಾರಿ ಟಿಕೆಟ್ ದರ ಹಾಗೂ ಕೆಲ ನಗರಗಳಲ್ಲಿ ತುಂಬಾ ದೂರದಲ್ಲಿರುವ ಕ್ರೀಡಾಂಗಣ ಪ್ರೇಕ್ಷಕರ ಅನಾಸಕ್ತಿಗೆ ಕಾರಣ. ನಾಗಪುರದಲ್ಲಿ ನಗರದಿಂದ 20 ಕಿ.ಮೀ. ದೂರದಲ್ಲಿ ಕ್ರೀಡಾಂಗಣವಿದೆ.

ಕ್ರೀಡಾ ಪ್ರೇಮಿಗಳ ನಗರಿ ಎನಿಸಿರುವ ಕೋಲ್ಕತ್ತದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಕೂಡ ಖಾಲಿ ಎಂದರೆ ಅಚ್ಚರಿಯಾಗಬಹುದು. ಆದರೆ ಅದು ನಿಜ!

ಭಾರತದಲ್ಲಿನ ಕ್ರಿಕೆಟ್ ಅಭಿಮಾನ ಅದ್ಭುತ. ಹೇಗೆಂದರೆ ಭಾರತ ತಂಡ ಸಾಲುಸಾಲಾಗಿ ಹತ್ತು ಪಂದ್ಯಗಳನ್ನು ಸೋತರೂ ಹನ್ನೊಂದನೇ ಪಂದ್ಯ ಯಾವಾಗ ಸಾರ್ ಎಂದು ಕೇಳುವವರಿದ್ದಾರೆ.

ಎಷ್ಟೇ ಕಳಪೆ ಪ್ರದರ್ಶನ ನೀಡಿದರೂ ಅಭಿಮಾನಿಗಳು ಅವರನ್ನು ಪ್ರೀತಿಸುವುದನ್ನು ಬಿಡುವುದಿಲ್ಲ. ಅವರ ಮೇಲಿನ ಸಿಟ್ಟು, ಸೆಡವು ಗಂಡ ಹೆಂಡಿರ ಕೋಪದಂತೆ! ಅದೇನೊ ಪ್ರೀತಿ, ಒಂಥರಾ ಅಭಿಮಾನ. ಇಲ್ಲಿ ಕ್ರಿಕೆಟಿಗರನ್ನು ದೇವರಂತೆ ಪೂಜಿಸುತ್ತಾರೆ.

ಅವರು ಹೊರಬಂದರೆ ಜೇನಿನಂತೆ ಮುತ್ತಿಕೊಳ್ಳುತ್ತಾರೆ. ಕ್ರಿಕೆಟ್‌ಗೆ ಭಾರತದಲ್ಲಿರುವಷ್ಟು ಮಾರುಕಟ್ಟೆ ಬೇರೆಲ್ಲೂ ಇಲ್ಲ. ಆದರೆ ಆ ಪ್ರೀತಿ, ಆ ವಿಶ್ವಾಸ ಈಗ ನಿಧಾನವಾಗಿ ಕರಗುತ್ತಿದೆ.
ಇದಕ್ಕೆ ಕಾರಣ ಬಿಸಿಸಿಐನ ಹಣದ ದಾಹ. ಉಳಿದ ದೇಶಗಳ ಕ್ರಿಕೆಟ್ ಮಂಡಳಿಗಳು ಕೂಡ ಶ್ರೀಮಂತ ಮಂಡಳಿ ಎನಿಸಿರುವ ಬಿಸಿಸಿಐನ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ.

ಟಿವಿ ಪ್ರಸಾರ ಹಕ್ಕು ಹಾಗೂ ಜಾಹೀರಾತಿನಿಂದ ಹಣ ಹರಿದು ಬರುತ್ತಿರುವಾಗ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬಂದರೇನು ಅಥವಾ ಬರದಿದ್ದರೇನು ಎಂಬ ಉಡಾಫೆ. ಜೊತೆಗೆ ಟಿಕೆಟ್‌ನ ದುಬಾರಿ ಬೆಲೆ.

ಉದಾಹರಣೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಅಕ್ಟೋಬರ್ 23ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ನಡೆದಾಗ ಟಿಕೆಟ್‌ನ ಕನಿಷ್ಠ ದರ ಸಾವಿರ ರೂಪಾಯಿ. ಆ ಸುಡು ಬಿಸಿಲಿನಲ್ಲಿ ಅಷ್ಟು ಬೆಲೆ ತೆತ್ತು ಅದೆಷ್ಟು ಮಂದಿ ಬಂದು ನೋಡುತ್ತಾರೆ? ಅದೇನು ವಿಶ್ವಕಪ್ ಪಂದ್ಯವೇ?

ಈಗ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲೂ ಅದೇ ರಾಗ, ಅದೇ ಹಾಡು! ವಿಂಡೀಸ್ ದುರ್ಬಲ ತಂಡ ಎಂಬುದು ಇನ್ನೊಂದು ಕಾರಣ. ಹಾಗಾಗಿ ಸರಣಿಯ ಎರಡು ಟೆಸ್ಟ್ ಪಂದ್ಯಗಳು ನಾಲ್ಕೇ ದಿನದಲ್ಲಿ ಮುಗಿದು ಹೋದವು.

ತೆಂಡೂಲ್ಕರ್ ಒಂದು ಉತ್ತಮ ಸಲಹೆ ಕೂಡ ನೀಡಿದ್ದರು. `ಟೆಸ್ಟ್ ಪಂದ್ಯಗಳಿದ್ದಾಗ ಶಾಲಾ ಮಕ್ಕಳಿಗೆ ಉಚಿತವಾಗಿ ಅವಕಾಶ ನೀಡಿ. ಅವರಿಗೆ ಟೆಸ್ಟ್ ಕ್ರಿಕೆಟ್ ಮಹತ್ವ ಅರ್ಥವಾಗುತ್ತದೆ. ಆಟಗಾರರಿಗೂ ಖುಷಿಯಾಗುತ್ತದೆ~ ಎಂದಿದ್ದರು. ಆದರೆ ಅವರ ಮಾತು ಕೇಳುವವರಾರು? 

ಅದೇನೇ ಇರಲಿ, ಪ್ರೇಕ್ಷಕರು ಮಾತ್ರ `ಕ್ರಿಕೆಟ್ ಅತಿಯಾಯಿತು, ಇನ್ನು ಸಾಕು~ ಎನ್ನುವ ಹಂತ ತಲುಪಿದ್ದಾರೆ. ಬಿಸಿಸಿಐ ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ?  
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT