ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳರೆ ಬಂಡೆ: ಮರೀಚಿಕೆಯಾದ ಸೌಲಭ್ಯ

Last Updated 8 ಏಪ್ರಿಲ್ 2013, 10:52 IST
ಅಕ್ಷರ ಗಾತ್ರ

ತುಮಕೂರು: ಇದು ಪುಟ್ಟದಾಗಿರುವ ಜನ ವಸತಿ ಪ್ರದೇಶ. ಅಜಮಾಸು 100 ಮನೆಗಳಿರುವ, 350 ಮತದಾರರು ವಾಸಿಸುತ್ತಿರುವ, ಯಾವ ಮೂಲಸೌಲಭ್ಯವೂ ಇಲ್ಲದ ಈ ಜನ ವಸತಿ ಪ್ರದೇಶಕ್ಕೆ ಎಳ್ಳರೆ ಬಂಡೆ ಅಂತಲೇ ಎಲ್ಲರೂ ಕರೆಯುತ್ತಾರೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದ್ಲ್ಲಲೆ ಇರುವ ಇಲ್ಲಿನ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳುವುದಕ್ಕೂ ಸಂಕೋಚವಾಗಬೇಕು; ಆ ರೀತಿ ಇದೆ ಪರಿಸ್ಥಿತಿ. ಬಂಡೆಗಳೇ ಹೆಚ್ಚಾಗಿರುವ ಇಲ್ಲಿ ಒಂದು ಕಾಲಕ್ಕೆ ಎಳ್ಳನ್ನು ಒಣಹಾಕುತ್ತಿದ್ದರಂತೆ. ಎಳ್ಳನ್ನು ಹೀಗೆ ಬಂಡೆ ಮೇಲೆ ಹಾಕುತ್ತಿದ್ದರಿಂದ ಎಳ್ಳು ಜೊತೆಗೆ ಕಲ್ಲು (ಅರೆ) ಸೇರಿ ಎಳ್ಳರೆ ಎಂಬ ಹೆಸರು ಬಂದಿದೆ.

ಇಲ್ಲಿ ಸಾಕಷ್ಟು ಮನೆಗಳನ್ನು ಬಂಡೆಗಳ ಮೇಲೆಯೇ ಕಟ್ಟಿಕೊಳ್ಳಲಾಗಿದೆ. ಅಲ್ಲೊಂದು ಇಲ್ಲೊಂದು ಮನೆಗಳಿಗೆ ಬಚ್ಚಲು ಮನೆ ಇರುವುದನ್ನು ಬಿಟ್ಟರೆ ಯಾವ ಮನೆಗೂ ಬಚ್ಚಲುಮನೆ, ಶೌಚಾಲಯವೇ ಇಲ್ಲ. ಸಾಮೂಹಿಕ ಸ್ನಾನದ ಗೃಹವೂ ಇಲ್ಲಿಲ್ಲ. ಇಲ್ಲಿ ಮನೆ, ಗುಡಿಸಲು ಕಟ್ಟಿಕೊಂಡಿರುವ ಇವರೆಲ್ಲರಿಗೂ ಕ್ಯಾತ್ಸಂದ್ರ ಗ್ರಾಮ ಪಂಚಾಯಿತಿ ಹಕ್ಕು ಪತ್ರ ನೀಡಿ ಕೈತೊಳೆದುಕೊಂಡಿದೆ. ಕುಡಿಯುವ ನೀರು, ನಿತ್ಯಕರ್ಮಕ್ಕೆ ಜಾಗವೇ ಇಲ್ಲ.

ಅಕ್ಕಪಕ್ಕ ಜನ ವಸತಿ ಇರುವ ಕಾರಣ ಶೌಚಕ್ಕಾಗಿಯೇ ಬಯಲು ಹುಡುಕಿಕೊಂಡು ಕಿಲೋ ಮೀಟರ್ ದೂರ ಇಲ್ಲಿನ ಜನರು ನಡೆಯಬೇಕಾಗಿದೆ. ಮಹಿಳೆಯರ ಪಾಡಂತೂ ಹೇಳತೀರದಾಗಿದೆ. ವಾರ ಅಥವಾ ಎರಡು ವಾರಕ್ಕೊಮ್ಮೆ ನೀರು ಬಿಡಲಾಗುತ್ತದೆ. ಎಳ್ಳರೆ ಬಂಡೆ ಮಧ್ಯೆ ಅಂಗನವಾಡಿ ಕೇಂದ್ರವೊಂದಿದೆ. `ಶಿಥಿಲಾವಸ್ಥೆಯಲ್ಲಿರುವ ಈ ಅಂಗನವಾಡಿ ಕೇಂದ್ರದ ಸ್ವಚ್ಛತೆ ಆ ದೇವರಿಗೇ ಪ್ರೀತಿಯಾಗಬೇಕು.

ನಾವಿರುವ ಜಾಗವೂ ಗಲೀಜಾಗಿದೆ. ಆದರೆ ಅಂಗನವಾಡಿ ಸುತ್ತಮುತ್ತ ಪರಿಸ್ಥಿತಿ ಮತ್ತೂ ಭೀಕರವಾಗಿದೆ' ಎಂದು ಇಲ್ಲಿನ ನಿವಾಸಿ ನರಸಮ್ಮ ಬೇಸರ ವ್ಯಕ್ತಪಡಿಸಿದದರು.

ಕುಡಿಯಲು ಸಮರ್ಪಕವಾದ ನೀರು, ಒಳಚರಂಡಿ, ಸಾಮೂಹಿಕ ಬಚ್ಚಲುಮನೆ, ಶೌಚಾಲಯ, ಸರಿಯಾದ ರಸ್ತೆ ಬೇಕು. ರಾಷ್ಟ್ರೀಯ ಹೆದ್ದಾರಿ ಮಗ್ಗುಲಲ್ಲೆ ಇದ್ದರೂ ಮನುಷ್ಯರು ಬದುಕುವಂತಹ ವಾತಾವರಣ ಇಲ್ಲ. ಆದರೆ ಈ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಸಮಾಜ ಸೇವಕ ಸಿದ್ದರಾಜು ಹೇಳಿದರು.

ಈಗ ಚುನಾವಣೆ ನಡೆಯುತ್ತಿರುವ ಕಾರಣ ಎಲ್ಲ ಸೌಲಭ್ಯವನ್ನು ನೀಡುವುದಾಗಿ ಭರವಸೆ ನೀಡಲು ರಾಜಕಾರಣಿಗಳ ದಂಡೆ ಬರಲಿದೆ. ಇಷ್ಟು ವರ್ಷವೂ ಹೀಗೆಯೇ ಬರುತ್ತಿದ್ದರು. ಆದರೆ ಸೌಲಭ್ಯ ಮಾತ್ರ ದೊರಕಿಸಿ ಕೊಟ್ಟಿಲ್ಲ. ನಮಗೆ ಏನೂ ಬೇಡ ಆದರೆ ನಮ್ಮ ಮಕ್ಕಳು, ಮೊಮ್ಮಕ್ಕಳಾದರೂ ಉತ್ತಮ ವಾತಾವರಣದಲ್ಲಿ ಬದುಕುವುದು ಬೇಡವೇ ಎಂದು ಕಣ್ಣೀರು ಹಾಕುತ್ತಾರೆ ಇಲ್ಲಿನ ಹಿರಿಯರಾದ ನಿಂಗಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT