ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿ ಕಚೇರಿಗೆ ಮುತ್ತಿಗೆ: ಆಕ್ರೋಶ

ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ
Last Updated 14 ಡಿಸೆಂಬರ್ 2013, 5:55 IST
ಅಕ್ಷರ ಗಾತ್ರ

ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿದ್ದು, ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಡಾ.ಸಿ.ರಂಗರಾಜನ್ ವರದಿಯ ಅನ್ವಯ ಕಬ್ಬು ಮುಕ್ತ ಮಾರಾಟಕ್ಕೆ ಅವಕಾಶ ಹಾಗೂ ಸ್ಥಳೀಯ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ರೈತರಿಗೆ ಬರಬೇಕಾದ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊಸಪೇಟೆ ರೈತರ ಸಂಘ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನೆಡಸಲಾಯಿತು. 

ಸ್ಥಳೀಯ ರೈತ ಸಂಘದ ಕಚೇರಿ­ಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಡೂರು ರಸ್ತೆಯಲ್ಲಿರುವ ಉಪವಿಭಾಗಾಧಿಕಾ­ರಿಗಳ ಕಚೇರಿ ತಲುಪಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸರ್ಕಾರ ಹಾಗೂ ಕಾರ್ಖಾನೆ ಮಾಲೀ­ಕರ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತರ ಸಂಘದ ಕಾರ್ಯದರ್ಶಿ ಗೋಸಲ ಭರಮಪ್ಪ, ‘ಸ್ಥಳೀಯ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಬದುಕನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಯತ್ನಿಸುತ್ತಿದ್ದಾರೆ. ಈಗಾಗಲೇ ಕಬ್ಬು ಬೆಳೆದು 15ತಿಂಗಳು ಗತಿಸಿ ಒಣಗುವ ಹಂತಕ್ಕೆ ತಲುಪಿದ್ದು, ರೈತರು ಕಂಗಾಲಾಗಿದ್ದಾರೆ’ ಎಂದು ಹೇಳಿದರು. 

‘ಕಬ್ಬು ಬೆಳೆಗಾರರಿಗೆ ಹೋರಾಟ ಅನಿವಾರ್ಯ­ವಾಗಿದೆ. ಇತ್ತ ಕಾರ್ಖಾ­ನೆಯೂ ಆರಂಭವಾಗದೆ, ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಿಸಲು ಆಗದೆ ರೈತರು ಇಕ್ಕಟ್ಟಿನಲ್ಲಿ ಸಿಲುಕಿ­ದ್ದಾರೆ. ರೈತ­ರೇ­ನಾದರೂ ಕಬ್ಬನ್ನು ಬೇರೆ­ಡೆಗೆ ಸಾಗಿ­ದರೆ ತಕರಾರು ಮಾಡುವ ಅಧಿಕಾರಿ­ಗಳು ಕಾರ್ಖಾನೆ ಆರಂಭಿ­ಸುವಂತೆ ಕಾರ್ಖಾನೆ ಮಾಲೀಕರಿಗೆ ಸೂಚಿಸುತ್ತಿಲ್ಲ ಯಾಕೆ’ ಎಂದು ಪ್ರಶ್ನಿಸಿದರು.

‘ಕಾರ್ಖಾನೆಗೆ ಹೆಚ್ಚಿನ ಕಬ್ಬನ್ನು ನುರಿಸುವ ಸಾಮರ್ಥ್ಯ ಇಲ್ಲ. ಆದರೂ ಕಾರ್ಖಾನೆ ವ್ಯಾಪ್ತಿಯಿಂದ ಕಬ್ಬನ್ನು ಮುಕ್ತಗೊಳಿಸಲು ಸರ್ಕಾರ ಮುಂದಾ­ಗುತ್ತಿಲ್ಲ. ಇದರಿಂದ ಕಾರ್ಖಾನೆಯ ವ್ಯಾಪ್ತಿ ಎಂದು ಹೇಳಿಕೊಳ್ಳುವ ರೈತರ ಕಬ್ಬು ಹಾನಿಗೀಡಾಗುವ ಆತಂಕ ಎದುರಾಗಿದೆ’ ಎಂದು ಭರಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾಡಳಿತ ಕೂಡಲೇ ಕಾರ್ಖಾನೆ ಆರಂಭಕ್ಕೆ ಮಾಲೀಕರಿಗೆ ಸೂಚನೆ ನೀಡಬೇಕು. ಸರ್ಕಾರ ನಿಗದಿಪಡಿಸಿದ ದರ ನೀಡಿ ರೈತರ ಕಬ್ಬನ್ನು ಖರೀದಿಸುವಂತಾಗಬೇಕು. ಕಾರ್ಖಾನೆ ಸಾಮರ್ಥ್ಯಕ್ಕೆ ತಕ್ಕಷ್ಟು ಕಬ್ಬು ಹೊರತುಪಡಿಸಿ ಉಳಿದ ಕಬ್ಬನ್ನು ಬೇರೆಡೆ ಸಾಗಿಸಲು ಅವಕಾಶ ನೀಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು. ಇಲ್ಲದಿದ್ದರೆ ರೈತರ ಸಂಘದಿಂದ ಮುಂದಿನ ಹೋರಾಟಕ್ಕೆ ಅಣಿಯಾಗಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಜೆ.ಎನ್.ವೆಂಕೋಬಪ್ಪ, ಟಿ.ವೆಂಕಟೇಶ್, ಆರ್.ಕೊಟ್ರೇಶ್, ಜಿ.ರಾಮನಗೌಡ, ಕಟಗಿ ಜಂಬಯ್ಯ, ಪಿ.ವೆಂಕಟೇಶ್, ಕಿಚಡಿ ಶ್ರೀನಿವಾಸ್, ತಾಯಮ್ಮ ಶಕ್ತಿ ಸಂಘದ ಅಧ್ಯೆಕ್ಷೆ ಕವಿತಾ ಈಶ್ವರ್‌ ಸಿಂಗ್‌  ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರೈತ ಸಂಘದಿಂದ ಉಪವಿಭಾಗಾಧಿಕಾರಿ ಪಿ.ಸುನೀಲಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತರ ಸಂಘದ ಅಧ್ಯಕ್ಷ ತಾರಹಳ್ಳಿ ಹುಲುಗಜ್ಜಪ್ಪ, ಉಪಾಧ್ಯಕ್ಷ ಬಿ.ಕೆ.ನಾಗರಾಜ್ ರಾವ್, ಪ್ಯಾಟಿ ಜಂಬಣ್ಣ, ಬಿ.ನಾಗರಾಜ, ಬಂಡೆ ರಂಗಪ್ಪ, ಬ್ಯಾಲ್ಯಾಳು ಪಂಪಾಪತಿ, ಬಿ.ರುದ್ರಪ್ಪ, ಅರಳಿ ಕೊಟ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT