ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಕೆಲವೆಡೆ ಸ್ಥಳ ಗೊಂದಲ

Last Updated 2 ಏಪ್ರಿಲ್ 2013, 9:02 IST
ಅಕ್ಷರ ಗಾತ್ರ

ಶಿಕಾರಿಪುರ: ಪಟ್ಟಣದ 3 ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದರು.
ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 8.30ರಿಂದಲೇ ವಿದ್ಯಾರ್ಥಿಗಳು ಆಗಮಿಸಿದ್ದರು. ಮೊದಲ ದಿನವಾದ್ದರಿಂದ ಕೆಲ ವಿದ್ಯಾರ್ಥಿಗಳು ತಮ್ಮ ಪೋಷಕರ ಜತೆ ಬಂದು ಪ್ರವೇಶ ಪತ್ರದಲ್ಲಿರುವ ನೋಂದಣಿ ಸಂಖ್ಯೆ ಹುಡುಕುತ್ತಿದ್ದ ದೃಶ್ಯ ಕಂಡು ಬಂತು.

ಪರೀಕ್ಷೆ ಸಿದ್ಧತೆ ಹಾಗೂ ಕ್ರಮಗಳ ಬಗ್ಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಪ್ಪ, ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ 1 ಪರೀಕ್ಷಾ ಕೇಂದ್ರ, ಮಾರವಳ್ಳಿ 1, ಹಿತ್ತಲ 1, ಗಾಮ 1, ಶಿರಾಳಕೊಪ್ಪ2 , ಬಳ್ಳಿಗಾವಿ 1, ಶಿವನಪಾದ 1 ಪರೀಕ್ಷಾ ಕೇಂದ್ರ, ಪಟ್ಟಣದ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ , ಸರ್ಕಾರಿ ಪದವಿ ಪೂರ್ವಕಾಲೇಜು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಸೇರಿ ಒಟ್ಟು 11 ಪರೀಕ್ಷಾ ಕೇಂದ್ರಗಳಿವೆ. ಈ ವರ್ಷ ವ್ಯಾಸಂಗ ಮಾಡುತ್ತಿರುವ 3,133 ವಿದ್ಯಾರ್ಥಿಗಳು ಹಾಗೂ ರಿಪಿಟರ್ಸ್‌ 96 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಪರೀಕ್ಷಾ ಮೇಲ್ವಿಚಾರಣೆಗಾಗಿ ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿ, ಬಿಆರ್‌ಸಿ ಸಮನ್ವಯ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 4 ತಾಲ್ಲೂಕು ಸಂಚಾರ ಜಾಗೃತ ದಳ ತಂಡ ರಚನೆ ಮಾಡಿದ್ದು, ಯಾವುದೇ ಪರೀಕ್ಷಾ ಆಕ್ರಮಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಾಗೆಯೇ ಪ್ರತಿ ಕೇಂದ್ರಕ್ಕೆ ದಿನ 2 ಸ್ಥಾನಿಕ ಜಾಗೃತ ದಳ ಅಧಿಕಾರಿ ಆಯೋಜಿಸಲಾಗಿದೆ. ಜಿಲ್ಲೆಯಿಂದಲೂ ಪ್ರತಿದಿನ ಜಿಲ್ಲಾ ಸಂಚಾರ ಜಾಗೃತ ದಳದ ಅಧಿಕಾರಿಗಳ ತಂಡ ಆಗಮಿಸಿ ಪರೀಕ್ಷೆ ಮೆಲ್ವೀಚಾರಣೆ ನಡೆಸಲಿದೆ ಎಂದು ತಿಳಿಸಿದರು.

ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳು
ಸಾಗರ: ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಿಗದಿ ಪಡಿಸಿದ ರೀತಿಯಲ್ಲಿ ಪರೀಕ್ಷೆ ಬರೆಯಲು ಸ್ಥಳಾವಕಾಶ ಸಿಗದೆ ಹಲವು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾದ ಘಟನೆ ಸೋಮವಾರ ನಡೆದಿದೆ.

ಸರ್ಕಾರಿ ಉರ್ದು ಪ್ರೌಢಶಾಲೆಗೆ ಪರೀಕ್ಷೆ ಬರೆಯಲು ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಗಳು ಬಂದಾಗ ಅವರ ಪ್ರವೇಶ ಪತ್ರದಲ್ಲಿ ನಮೂದಿಸಿದಂತೆ ಅಲ್ಲಿ ಸ್ಥಳಾವಕಾಶ ಇರಲಿಲ್ಲ. ನಂತರ ಪರಿಶೀಲಿಸಲಾಗಿ ಅವರಿಗೆ ನಿರ್ಮಲಾ ಬಾಲಿಕಾ ಪ್ರೌಢಶಾಲೆಯಲ್ಲಿ ಸ್ಥಳ ನಿಗದಿಯಾಗಿತ್ತು. ಇದರಿಂದ ಕೆಲವು ಕಾಲ ವಿದ್ಯಾರ್ಥಿಗಳು ಗಲಿಬಿಲಿಗೆ ಒಳಗಾದರು.

ನಂತರ ಸ್ಥಳದಲ್ಲಿದ್ದ ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸರಿಯಾದ ಕೇಂದ್ರ ಗುರುತಿಸಿಕೊಟ್ಟರು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಬಂದಿದ್ದ ಪೋಷಕರು ತಮ್ಮ ಮಕ್ಕಳಿಗೆ ಆದ ತೊಂದರೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಪಷ್ಟನೆ: ಈ ಬಾರಿ ಪರೀಕ್ಷೆ ಬೆಳಿಗ್ಗೆ 9.30ಕ್ಕೆ ಆರಂಭವಾಗಿದ್ದು ವಿದ್ಯಾರ್ಥಿಗಳು ಮುಂಚಿತವಾಗಿ ಬಂದು ಪರೀಕ್ಷಾ ಕೇಂದ್ರ ಯಾವುದು ಎಂದು ಗುರುತಿಸಿಕೊಳ್ಳದ ಕಾರಣ ಈ ಸನ್ನಿವೇಶ ಸೃಷ್ಟಿಯಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

ಪ್ರತಿ ವರ್ಷ ಸರ್ಕಾರಿ ಉರ್ದು ಪ್ರೌಢಶಾಲೆ ಮತ್ತು ನಿರ್ಮಲಾ ಬಾಲಿಕಾ ಪ್ರೌಢಶಾಲೆ ಈ ಎರಡೂ ಪರೀಕ್ಷಾ ಕೇಂದ್ರಗಳಿಗೆ ಇಂತಿಷ್ಟು ವಿದ್ಯಾರ್ಥಿಗಳು ಎಂದು ವಿಂಗಡಣೆ ಮಾಡುತ್ತೇವೆ. ಈ ಬಾರಿಯೂ ಅದೇ ಮಾದರಿ ಅನುಸರಿಸಿದ್ದು ಗೊಂದಲ ನಿರ್ಮಾಣವಾದಾಗ ಶಿಕ್ಷಣ ಇಲಾಖೆ ಸಿಬ್ಬಂದಿ ಅದನ್ನು ಬಗೆಹರಿಸಿದ್ದಾರೆ ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT