ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಂಎಸ್‌ನಲ್ಲಿ ಕೇಸ್ ಮಾಹಿತಿ

Last Updated 4 ಜನವರಿ 2011, 7:30 IST
ಅಕ್ಷರ ಗಾತ್ರ

ದಾಖಲಾದ ಪ್ರಕರಣದ ಬಗ್ಗೆ ಎಂಎಸ್‌ಎಸ್ ಮೂಲಕ ಮಾಹಿತಿ ನೀಡುವ ಬೆಂಗಳೂರು ಪೊಲೀಸರ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಂಡಿದೆ. ಪ್ರಕರಣದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಫಿರ್ಯಾದುದಾರರಿಗೆ ರವಾನಿಸುತ್ತಿದ್ದಾರೆ. ಇದರಿಂದ ದೂರು ನೀಡಿದವರು ತಾವು ದಾಖಲಿಸಿದ ಪ್ರಕರಣದ ವಿವರಗಳನ್ನು ತಮ್ಮ ಮೊಬೈಲ್‌ನಲ್ಲೇ ಪಡೆಯಲು ಸಾಧ್ಯವಾಗಿದೆ.

ದೂರು ನೀಡಿದ ನಂತರ ಆ ಪ್ರಕರಣ ದಾಖಲಾಗಿದೆಯೇ, ದಾಖಲಾಗಿದ್ದರೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ, ಆರೋಪಿ ಸಿಕ್ಕಿದನೇ ಮತ್ತು ಕಳವಾದ ವಸ್ತುಗಳು ಜಫ್ತಿಯಾದವೇ ಎಂಬ ಮಾಹಿತಿ ಪಡೆಯಲು ಫಿರ್ಯಾದುದಾರರು ಈ ಮುನ್ನ ಆಯಾ ಪೊಲೀಸ್ ಠಾಣೆಗೆ ಅಲೆದಾಡಬೇಕಿತ್ತು.

ಆದ್ದರಿಂದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಸ್‌ಎಂಎಸ್ ರವಾನೆ ಯೋಜನೆಯನ್ನು ಎರಡು ತಿಂಗಳ ಹಿಂದೆ ಜಾರಿಗೆ ತರಲಾಯಿತು. ಆರಂಭದಲ್ಲಿ ಮಾಹಿತಿ ಪಡೆಯುವವರಿಗಾಗಿ ಐದು ಅಂಕಿಗಳ ಸಂಖ್ಯೆಯನ್ನು (58181) ಪೊಲೀಸರು ನೀಡಿದ್ದರು. ಈ ಸಂಖ್ಯೆಗೆ ಸಂದೇಶ ಕಳುಹಿಸಿ ಮಾಹಿತಿ ಪಡೆಯಲು ಸೂಚಿಸಲಾಗಿತ್ತು ಆದರೆ ತಾಂತ್ರಿಕ ಕಾರಣಗಳಿಂದಾಗಿ ಈಗ ಇದನ್ನು 92432 58181ಗೆ ಬದಲಾಯಿಸಿದ್ದಾರೆ.

ದೂರು ನೀಡುವಾಗಲೇ ಫಿರ್ಯಾದಿದಾರರು ಪೊಲೀಸರಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಬೇಕು. ಪ್ರಕರಣ ದಾಖಲಾದ ನಂತರ ಅವರಿಗೆ ಪ್ರಕರಣದ ಸಂಖ್ಯೆ (ಕ್ರೈಂ ನಂಬರ್) ಕೊಡಲಾಗುತ್ತದೆ. ಮೊಬೈಲ್‌ನಲ್ಲಿ ಆ ಸಂಖ್ಯೆಯನ್ನು ಟೈಪ್ ಮಾಡಿ 92432 58181ಗೆ ಸಂದೇಶ ಕಳುಹಿಸಿದರೆ ಪ್ರಕರಣ ಪ್ರಸ್ತುತ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಎಸ್‌ಎಂಎಸ್ ಮೂಲಕಪಡೆಯಬಹುದು.

ಆದರೆ ದೂರು ನೀಡುವಾಗ ನೀವು ಯಾವ ಮೊಬೈಲ್ ಸಂಖ್ಯೆಯನ್ನು ನೀಡಿರುತ್ತೀರೋ ಅದೇ ಸಂಖ್ಯೆಯಿಂದ ಮೆಸೇಜ್ ಮಾಡಬೇಕು. ಬೇರೆ ಸಂಖ್ಯೆಯಿಂದ ಕಳಿಸಿದರೆ ಮಾಹಿತಿ ಸಿಗುವುದಿಲ್ಲ. ಪ್ರಕರಣದ ಬಗೆಗಿನ ಮಾಹಿತಿಯನ್ನು ಆರೋಪಿ ಅಥವಾ ಮೂರನೇ ವ್ಯಕ್ತಿ ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಈ ಮುನ್ನೆಚ್ಚರಿಕೆ.

‘ನಗರದಲ್ಲಿರುವ ಎಲ್ಲ 104 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಲ್ಲ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವ್ಯಕ್ತಿಯೊಬ್ಬರು ದೂರು ನೀಡಿದ ನಂತರ ಸಿಬ್ಬಂದಿ ಅದನ್ನು ಪರಿಶೀಲಿಸುತ್ತಾರೆ. ಪ್ರಕರಣವನ್ನು ದಾಖಲಿಸಿಕೊಂಡ ನಂತರ ಫಿರ್ಯಾದುದಾರರಿಗೆ ಎಸ್‌ಎಂಎಸ್ ಮಾಡಿ ಪ್ರಕರಣದ ಸಂಖ್ಯೆಯನ್ನು ತಿಳಿಸಲಾಗುತ್ತಿದೆ’ ಎಂದು ವಿವರಿಸುತ್ತಾರೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್.

‘ಪ್ರಕರಣ ದಾಖಲಾದ ನಂತರ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಇದನ್ನು ತಪ್ಪಾಗಿ ಭಾವಿಸುವ ಕೆಲವರು ಪ್ರಕರಣ ಪತ್ತೆಯಾಗಿದೆ ಮತ್ತು ಕಳವಾದ ವಸ್ತು ಜಫ್ತಿಯಾಗಿದೆ ಎಂದು ತಿಳಿದು ಠಾಣೆಗಳಿಗೆ ಬರುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಜನರು ಹೀಗೆ ಮಾಡಬಾರದು. ಏನಾದರೂ ಸಂದೇಹವಿದ್ದರೆ ಠಾಣೆಗೆ ಕರೆ ಮಾಡಿ ಕೇಳಿಕೊಳ್ಳಬಹುದು’ ಎಂದು ಅವರು ಸಲಹೆ ನೀಡುತ್ತಾರೆ.

‘ಕೇಂದ್ರೀಕೃತ ಸರ್ವರ್‌ನಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಲಾಗುತ್ತಿದೆ.  ಪ್ರಕರಣ ದಾಖಲಾದ ಬಗ್ಗೆ ಅಥವಾ ಪ್ರಕರಣ ಏನಾಗಿದೆ ಎಂದು ತಿಳಿದುಕೊಳ್ಳಲು ಸಮಯ ವ್ಯಯಿಸಿ ಠಾಣೆಗೆ ಖುದ್ದಾಗಿ ಬರುವುದು ತಪ್ಪಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT