ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿ ತನಿಖೆಗೆ ಬಿಜೆಪಿ ಪಟ್ಟು

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ
Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್‌ಎಸ್): ಯುಪಿಎ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಮೊತ್ತದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ತಿಂಗಳು ನೀಡಿದ ವಸ್ತುಸ್ಥಿತಿ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಮುನ್ನವೇ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ ಎಂದು ಮಾಧ್ಯಮವೊಂದರಲ್ಲಿ ಶನಿವಾರ ಪ್ರಕಟವಾದ ವರದಿ ಸರ್ಕಾರವನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದೆ.

ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬಿದ್ದಿರುವ ಬಿಜೆಪಿ, ಕಾನೂನು ಸಚಿವ ಅಶ್ವನಿ ಕುಮಾರ್ ತಲೆದಂಡಕ್ಕೆ ಪಟ್ಟು ಹಿಡಿದಿದೆ. ಸಿಬಿಐಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪುಂಡ ಸರ್ಕಾರ ಅವಕಾಶ ನೀಡದಿರುವ ಕಾರಣ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಹಗರಣದ ತನಿಖೆ ನಡೆಸುವಂತೆ  ಒತ್ತಾಯಿಸಿದೆ.

ಬಿಜೆಪಿ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಎಸ್‌ಐಟಿ ತನಿಖೆ ಮತ್ತು ಕಾನೂನು ಸಚಿವರ ತಲೆದಂಡ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಅಶ್ವನಿ ಕುಮಾರ್ ಮತ್ತು ಪ್ರಧಾನಿ ಕಾರ್ಯಾಲಯ ಅಧಿಕಾರಿಗಳು ವರದಿಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಮಾಧ್ಯಮ ವರದಿ ಸತ್ಯಕ್ಕೆ ದೂರವಾದದು ಎಂದು ಹೇಳಿದೆ.

`ಸಿಬಿಐ ಸಲ್ಲಿಸಿದ ತನಿಖಾ ವಸ್ತುಸ್ಥಿತಿವರದಿಯನ್ನು ಸರ್ಕಾರ ಪರಿಶೀಲಿಸಿರುವುದು ಗಂಭೀರ ವಿಷಯವಾಗಿದ್ದು, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆಯನ್ನು ಎಸ್‌ಐಟಿ ವಹಿಸಬೇಕು ಎಂದು ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಒತ್ತಾಯಿಸಿದ್ದಾರೆ.

`ಪ್ರಧಾನ ಮಂತ್ರಿಯನ್ನು ರಕ್ಷಿಸಲು ಸಿಬಿಐ ಮೇಲೆ ಸರ್ಕಾರ ಒತ್ತಡ ಹೇರುತ್ತಿರುವುದಕ್ಕೆ ಈ ಘಟನೆ ತಾಜಾ ನಿದರ್ಶನ.
ಕಾನೂನು ಸಚಿವರು ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರ ದುರ್ಬಳಕೆಯಾಗಿದ್ದು, ಇದೊಂದು ಗಂಭೀರ ಪ್ರಕರಣ' ಎಂದು ಆರೋಪಿಸಿದ್ದಾರೆ.

`ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುವುದಕ್ಕೂ ಮುನ್ನ ಸಿಬಿಐ ಸಲ್ಲಿಸಿದ ಮೂಲ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ ಬಗ್ಗೆ ದೇಶದ ನಾಗರಿಕರಿಗೆ ವಿವರಣೆ ನೀಡಬೇಕು' ಎಂದು ಜೇಟ್ಲಿ ಆಗ್ರಹಿಸಿದ್ದಾರೆ.
   
`ಈ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಈಗಾಗಲೇ ಸಿಬಿಐಗೆ ನಿರ್ದೇಶನ ನೀಡಿದ್ದು, ಸಿಬಿಐ ಪ್ರಮಾಣ ಪತ್ರ ಸಲ್ಲಿಸಿದ ನಂತರ ಸತ್ಯ ಹೊರಬರಲಿದೆ' ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT