ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಎಂ ಮಹಿಳಾ ಉದ್ಯೋಗಿ ಕೊಲೆ

Last Updated 7 ಅಕ್ಟೋಬರ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಬ್ಯಾಂಕ್ (ಎಸ್‌ಬಿಎಂ) ಮಹಿಳಾ ಉದ್ಯೋಗಿಯೊಬ್ಬರನ್ನು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಕುಮಾರಪಾರ್ಕ್ ಪಶ್ಚಿಮ ಬಡಾವಣೆಯಲ್ಲಿ ಶುಕ್ರವಾರ ಹಾಡಹಗಲೇ ನಡೆದಿದೆ.

ಅಪ್ಪರ್ ಪೈಪ್‌ಲೇನ್‌ನ ಪೊಲೊ ಗಾರ್ಡನ್ ಅಪಾರ್ಟ್‌ಮೆಂಟ್ ನಿವಾಸಿ ಕೃಷ್ಣನ್ ಎಂಬುವರ ಪತ್ನಿ ಎಸ್.ಅನಸೂಯ (42) ಕೊಲೆಯಾದವರು. ಅದೇ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್ ಆದ ಆರೋಪಿ ಅಶ್ರಫ್ ಪರಾರಿಯಾಗಿದ್ದಾನೆ. ಅಸ್ಸಾಂ ಮೂಲದ ಆತ ಮೂರು ವರ್ಷಗಳಿಂದ ಆ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ. ಕೊಲೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳ ಮೂಲದ ಕೃಷ್ಣನ್ ಅವರು 1997ರಲ್ಲಿ ಅನಸೂಯ ಅವರನ್ನು ವಿವಾಹವಾಗಿದ್ದರು. ಕೃಷ್ಣನ್ ಅವರು ಖಾಸಗಿ ಕಂಪೆನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದಾರೆ. ದಂಪತಿಗೆ ಅದಿತಿ ಮತ್ತು ಆರತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅದಿತಿ ಮತ್ತು ಆರತಿ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು. ದಂಪತಿ, ಅವರ ಮಕ್ಕಳು ಮತ್ತು ಅನಸೂಯ ಅವರ ತಾಯಿ ಲಕ್ಷ್ಮಿ ಅವರು ಮೂರೂವರೆ ವರ್ಷದಿಂದ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ 301ನೇ ಫ್ಲಾಟ್‌ನಲ್ಲಿ ವಾಸವಿದ್ದರು.

ಕೆ.ಜಿ.ರಸ್ತೆಯಲ್ಲಿರುವ ಮೈಸೂರು ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅನಸೂಯ ಅವರು ನಾಲ್ಕು ವರ್ಷಗಳ ಹಿಂದೆ ಶೇಷಾದ್ರಿಪುರ ಶಾಖೆಯ ವಿಶೇಷ ಸಹಾಯಕರ ಹುದ್ದೆಗೆ ವರ್ಗಾವಣೆಯಾಗಿ ಬಂದಿದ್ದರು. ಪ್ರಸ್ತುತ ಅವರು ಶೇಷಾದ್ರಿಪುರ ಶಾಖೆಯಲ್ಲಿ ಮುಖ್ಯ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಶಾಲೆಗೆ ರಜೆ ಇದ್ದ ಕಾರಣ ಕೃಷ್ಣನ್ ಅವರು ಮಕ್ಕಳನ್ನು ಕರೆದುಕೊಂಡು ಮೈಸೂರಿನ ಸಂಬಂಧಿಕರ ಮನೆಗೆ ಹೋಗಿದ್ದರು. ಪ್ರತಿನಿತ್ಯದಂತೆ ಕೆಲಸಕ್ಕೆ ಹೋಗಿದ್ದ ಅನಸೂಯ ಅವರು ಊಟ ಮಾಡಲು ಕಚೇರಿಯಿಂದ ಮಧ್ಯಾಹ್ನ 1.30ರ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಬಂದರು. ಮೂರನೇ ಮಹಡಿಗೆ ತೆರಳಲು ಅವರು ಲಿಫ್ಟ್‌ನ ಒಳಗೆ ಹೋದರು. ಅದೇ ಲಿಫ್ಟ್‌ಗೆ ಹತ್ತಿದ ಅಶ್ರಫ್ ಲಿಫ್ಟ್ ಚಲಿಸುತ್ತಿದ್ದಂತೆ ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ತಲೆ ಮತ್ತು ಮುಖಕ್ಕೆ ಇರಿದಿದ್ದಾನೆ. ಇದರಿಂದ ಆತಂಕಗೊಂಡ ಅವರು ನೆರವಿಗೆ ಕೂಗಿಕೊಂಡಾಗ ಆತ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಚೀರಾಟ ಕೇಳಿದ ಅಪಾರ್ಟ್‌ಮೆಂಟ್ ನಿವಾಸಿಗಳು ನೆಲ ಅಂತಸ್ತಿನ ಲಿಫ್ಟ್‌ನ ಬಾಗಿಲ ಬಳಿ ಬಂದಾಗ, ಚಾಕು ಹಿಡಿದು ಹೊರ ಬಂದ ಅಶ್ರಫ್ ಅವರಿಗೆ ಬೆದರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

`ಲಿಫ್ಟ್‌ನ ಒಳಗೆ ಮಹಿಳೆಯೊಬ್ಬರು ಕೂಗಿಕೊಂಡಿದ್ದು ಕೇಳಿಸಿತು. ವಿದ್ಯುತ್ ಸಂಪರ್ಕ ಕಡಿತಗೊಂಡು ಮಹಿಳೆ ಲಿಫ್ಟ್‌ನಲ್ಲಿ ಸಿಲುಕಿದ್ದಾರೆ ಎಂದು ಭಾವಿಸಿ ಅವರನ್ನು ರಕ್ಷಿಸಲೆಂದು ಅಪಾರ್ಟ್‌ಮೆಂಟ್‌ನ ನೆಲ ಮಹಡಿಗೆ ಬಂದೆ. ಲಿಫ್ಟ್‌ನ ಬಾಗಿಲ ಬಳಿ ಹೋದಾಗ ಅನಸೂಯ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಲಿಫ್ಟ್‌ನ ಒಳ ಭಾಗದಲ್ಲಿ ಮತ್ತು ಲಿಫ್ಟ್‌ನಲ್ಲಿದ್ದ ಕನ್ನಡಿ ಮೇಲೆಲ್ಲಾ ರಕ್ತ ಚೆಲ್ಲಾಡಿತ್ತು~ ಎಂದು ಅದೇ ಅಪಾರ್ಟ್‌ಮೆಂಟ್‌ನ ನಿವಾಸಿ ಅರವಿಂದ್ `ಪ್ರಜಾವಾಣಿ~ಗೆ ತಿಳಿಸಿದರು.

`ಅಪಾರ್ಟ್‌ಮೆಂಟ್‌ನ ಗೇಟ್‌ನ ಬಳಿ ಬರುತ್ತಿದ್ದಾಗ ಅಶ್ರಫ್ ಹೊರ ಹೋಗುತ್ತಿದ್ದ. ನನ್ನನ್ನು ನೋಡಿದ ಆತ ನಗೆ ಬೀರಿ ಹೊರಟು ಹೋದ. ಅಪಾರ್ಟ್‌ಮೆಂಟ್‌ನ ಒಳಗೆ ಹೋದಾಗಲೇ ಇಡೀ ಪ್ರಕರಣ ಗೊತ್ತಾಯಿತು~ ಎಂದು ಅಪಾರ್ಟ್‌ಮೆಂಟ್‌ನ ಮತ್ತೊಬ್ಬ ನಿವಾಸಿ ರಘೋತ್ತಮ್ ಹೇಳಿದರು. ಅನಸೂಯ ಅವರ ಕೊಲೆ ವಿಷಯ ತಿಳಿಯದ ಲಕ್ಷ್ಮಿ ಅವರು ಮಗಳು ಊಟಕ್ಕೆ ಬರಬಹುದೆಂದು ಮನೆಯಲ್ಲೇ ಕಾಯುತ್ತಾ ಕುಳಿತಿದ್ದ ದೃಶ್ಯ ಮನಕಲಕುವಂತಿತ್ತು.
 
ಅನುಮಾನಗೊಂಡ ಅವರು ಮಗಳ ಸಹೋದ್ಯೋಗಿಗಳಿಗೆ ಕರೆ ಮಾಡಿ ವಿಚಾರಿಸಿದರು. ಅನಸೂಯ ಅವರಿಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಹೋದ್ಯೋಗಿಗಳು ಹೇಳಿದ್ದರಿಂದ ಲಕ್ಷ್ಮಿ ಅವರು ಮತ್ತಷ್ಟು ಆತಂಕಗೊಂಡರು. ಅದೇ ವೇಳೆಗೆ ಮನೆಗೆ ಬಂದ ಸಂಬಂಧಿಕರು ಕೊಲೆ ಸಂಗತಿಯನ್ನು ತಿಳಿಸಲಾಗದೆ ವ್ಯಥೆ ಪಡುತ್ತಿದ್ದ ದೃಶ್ಯ ಕಂಡುಬಂತು.

ಕೆಲ ದಿನಗಳ ಹಿಂದೆ ಕೊಲೆಯಾಗಿದ್ದ ಬಿಬಿಎಂಪಿ ಸದಸ್ಯ ಎಸ್.ನಟರಾಜ್ ಅವರ ಮನೆ ಪೊಲೊ ಗಾರ್ಡನ್ ಅಪಾರ್ಟ್‌ಮೆಂಟ್‌ನ ಸಮೀಪವೇ ಇದೆ. ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಮಾತನಾಡಿದ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ್, `ಆರೋಪಿ ಅನಸೂಯ ಅವರ ಯಾವುದೇ ಆಭರಣಗಳನ್ನು ತೆಗೆದುಕೊಂಡು ಹೋಗಿಲ್ಲ. ಆತ ಹಣಕ್ಕಾಗಿ ಈ ಕೊಲೆ ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ~ ಎಂದರು. ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್, ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಓಂಕಾರಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT