ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂತದ ಕೆಲಸಕ್ಕೆ ಲೋಕಾಂತದ ಮೆರವಣಿಗೆ

ಸಾಹಿತ್ಯ ಸಮ್ಮೇಳನ ನಿರೀಕ್ಷೆ ಏನು?
Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಡಿಕೇರಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸಜ್ಜಾಗುತ್ತಿದೆ. ಈ ಸಾಹಿತ್ಯ  ಸಮ್ಮೇಳನ ಹೇಗಿರಬೇಕು? ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತಿಯೇ ವಿಜೃಂಭಿಸಬೇಕೆಂಬ ಆಶಯ ಈಡೇರುವುದು ಸಾಧ್ಯವೆೇ? ಉನ್ನತ ಸಾಹಿತ್ಯ ಚಿಂತನೆಗಳು ಭಿನ್ನ ನೆಲೆಗಳಲ್ಲಿ ಮೂಡಲು ಸಾಹಿತ್ಯ ಸಮ್ಮೇಳನ ವೇದಿಕೆಯಾಗುವುದು ಹೇಗೆ? ಇತ್ಯಾದಿ ಪ್ರಶ್ನೆಗಳ ಸುತ್ತ ಲೇಖಕಿ ಜ.ನಾ.ತೇಜಶ್ರೀ ಅವರು ಮಂಡಿಸಿರುವ ವಿಚಾರಗಳು ಇಲ್ಲಿವೆ...


ಸಾಹಿತ್ಯ ಸಮ್ಮೇಳನದ ಬಗ್ಗೆ ಮಾತನಾಡುವಾಗ, ಕಳೆದ ನೂರು ವರ್ಷಗಳಲ್ಲಿ ಅದು ಬೆಳೆದು ಬಂದ ಬಗೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಅದರ ಇಂದಿನ ವಾಸ್ತವದ ಬಗ್ಗೆ ಚಿಂತಿಸಬೇಕಾಗುತ್ತದೆ. ಮೊದಲು ನೂರಾರು ಸಾಹಿತ್ಯಾಸಕ್ತರ ಅಪರೂಪದ ಒಗ್ಗೂಡುವಿಕೆ ಆಗುತ್ತಿದ್ದ ಸಮ್ಮೇಳನವು ಈಗ ಕೋಟಿಗಟ್ಟಲೆ ಹಣದ, ಲಕ್ಷಗಟ್ಟಲೆ ಪ್ರೇಕ್ಷಕರ, ಊಟ-ಉಪಚಾರದ ಬಾಬತ್ತಾಗಿದೆ. ಬಹುಶಃ ಈ ಕಾರಣಕ್ಕಾಗಿಯೇ, ಅಂತರಂಗದೊಳಗೆ ಬಹಿರಂಗವನ್ನು ಮೊಗೆದುಕೊಂಡು, ಅಲ್ಲಿ ಮೂಡಿದ ತಿಳಿವಳಿಕೆಯನ್ನು ಭಾಷೆಯೆಂಬ ಮಣ್ಣಿನಲ್ಲಿ ಮಿದ್ದಿ ಹೇಳಲು ಹೆಣಗುವ ನನ್ನೊಳಗಿನ ಕವಿಗೆ ಇದರ ಬಗ್ಗೆ ಮಾತನಾಡುವುದು ಕಷ್ಟವೆನಿಸುತ್ತದೆ.

ಆಗ, ಬೆಳಗಾವಿಯ ಸಮ್ಮೇಳನದಲ್ಲಿ ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ...’ ಕವಿತೆ ಓದಿದರೆ ಅಥವಾ ಧಾರವಾಡದಲ್ಲಿ ಕುವೆಂಪು ಅವರು ಮೆರವಣಿಗೆ ಬೇಡವೆಂದು ತಿರಸ್ಕರಿಸಿದರೆ ಅದು ಇಡೀ ಕರ್ನಾಟಕ­ದಲ್ಲಿ ಅರ್ಥಪೂರ್ಣ ಚರ್ಚೆಗೆ ದಾರಿ ಮಾಡಿಕೊಡುತ್ತಿತ್ತು. ಈಗ ಸಾಹಿತಿಗಳ ಮಾತಿಗೆ ಅಂತಹ ಖದರ್ ಎಲ್ಲಿ? ರಾಜಕಾರಣಿಗಳು, ಅಧಿಕಾರಿಗಳು, ಮಠಾಧಿಪತಿಗಳು ಮತ್ತು ಇವರ ಜೊತೆಗೆ ಸಾಹಿತಿಗಳಿಗೂ ಅವಕಾಶ ನೀಡುವ ಸಮ್ಮೇಳನವು ತನ್ನ ಮೂಲ ಉದ್ದೇಶದಿಂದ ಹಿನ್ನೆಲೆಗೆ ಸರಿದಿದೆಯೇನೋ ಅನ್ನಿಸುತ್ತದೆ.

ರಾಜಕೀಯ ಮತ್ತು ತಂತ್ರಜ್ಞಾನದ ಕುಲುಮೆಯ ಮೇಲೆ ಕಬ್ಬಿಣದ ಅದಿರಿನಂತೆ ಕುದಿಯುತ್ತಿರುವ ಈ ಹೊತ್ತಿನ ನಮ್ಮ ಬದುಕಿನಲ್ಲಿ ಕಾವ್ಯ, ಕಲೆ, ತತ್ವ ಇತ್ಯಾದಿ ಶಕ್ತಿಗಳ ಪ್ರಾಮುಖ್ಯವೇನು  ಎನ್ನುವ ಪ್ರಶ್ನೆ ಎದುರಾಗುತ್ತದೆ. ಮತ, ತತ್ವ, ಕಲೆಗಳೇ ಮನುಷ್ಯನ ಜೀವನವನ್ನು ನಿರ್ಧರಿಸುವ ಕಾಲಘಟ್ಟದಿಂದ ಬದುಕಿನ ಸನ್ನಿವೇಶವು ಪಲ್ಲಟಗೊಂಡಿದೆ. ವಿಜ್ಞಾನದ ಆವಿಷ್ಕಾರವು ನೀಡುತ್ತಿರುವ ಹೊಸ ಸುಖಸೌಕರ್ಯಗಳು ಹಾಗೂ ಯುಕ್ತಿ ಸಾಮರ್ಥ್ಯಗಳಿಂದ ಈ ಸೌಕರ್ಯಗಳನ್ನು ಗಳಿಸಿಕೊಳ್ಳುವ ರಾಜಕೀಯದ ಅರ್ಥಶಾಸ್ತ್ರದ ಸಂಗತಿಗಳು ಇಂದು ನಮ್ಮನ್ನು ಆಳುತ್ತಿವೆ. ಸಾಹಿತ್ಯ ಸಮ್ಮೇಳನದ ರೂಪುರೇಷೆಗಳನ್ನು ನಿರ್ಧರಿಸುವ ಅಂಶಗಳಲ್ಲಿ ಇವೇ ಸಂಗತಿಗಳು ಪ್ರಧಾನ ಪಾತ್ರ ವಹಿಸುತ್ತಿರುವುದು ಸ್ವಾಭಾವಿಕವೇ ಆಗಿದೆ.

ಆದರೆ, ಬದುಕಿಗೆ ರಾಜಕೀಯದಂತೆಯೇ ವಿಜ್ಞಾನ, ತಂತ್ರಜ್ಞಾನವೂ ಬೇಕು. ಕಲೆ, ತತ್ವಗಳೂ ಬೇಕು. ಇವುಗಳ ನಡುವಿನ ಸಮನ್ವಯ ಸಾಧಿಸು­ವುದಾದರೂ ಹೇಗೆ? ಸಾಹಿತ್ಯ, ಕಲೆಯು ಸಮ್ಮೇಳನದಂತಹ ಸಂಭ್ರಮದ ವಾತಾವರಣ ಮಾತ್ರವಾಗದೆ, ಬದುಕಿನ ಭಾಗವೇ ಆಗಿ ಮಾರ್ಪಡುವುದು ಹೇಗೆ? ಕರ್ನಾಟಕ, ಕನ್ನಡಕ್ಕೆ ಸಂಬಂಧಿಸಿದ ನಮ್ಮ ಕಾಳಜಿಗಳು, ಪ್ರಶ್ನೆಗಳು ಸಮ್ಮೇಳನದಲ್ಲಿ ಮಾತ್ರ ಚರ್ಚೆಯಾಗದೆ ಮತ್ತು ಇಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂಬ ಭ್ರಮೆಗೆ ಒಳಗಾಗದೇ ಅದು ನಮ್ಮ ಬದುಕಿನ, ಉಸಿರಿನ ಭಾಗವೇ ಆಗುವುದು ಹೇಗೆ ಎಂದು ಚಿಂತಿಸಬೇಕು.

ನಿಜವಾದ ಸೃಷ್ಟಿಶಕ್ತಿಯು ಎಲ್ಲ ಕಾಲದಲ್ಲೂ ತನ್ನ ಒಂದು ಕಣ್ಣನ್ನು ಭೂತ ಅಥವಾ ಪ್ರಾಚೀನದ ಗೋರಿಯೊಳಗೂ, ಮತ್ತೊಂದು ಕಣ್ಣನ್ನು ಭವಿಷ್ಯದ ಅವ್ಯಕ್ತ ಗರ್ಭದೊಳಗೂ ನೆಟ್ಟಿರುತ್ತದೆ. ಇದು ವ್ಯಕ್ತಿಗೂ ನಿಜ, ಸಂಸ್ಥೆಗಳಿಗೂ ನಿಜ. ಗೋರಿಯೊಳಗೂ ಕತ್ತಲು, ಗರ್ಭದೊಳಗೂ ಕತ್ತಲು. ಪ್ರಾಚೀನದ ಸಾರವನ್ನು ಹೀರಿದ, ಮುಂದೆ ಬರಬಹುದಾದ ಸಂಸ್ಕೃತಿಗೆ ಬೀಜರೂಪದಲ್ಲಿ ರುವ ಬೆಳಕಿನ ಹೂವನ್ನು ಪ್ರತಿಯೊಬ್ಬರೂ ಹೊರುವುದು ಕಷ್ಟದ ಕೆಲಸ, ಆದರೆ ಅಸಾಧ್ಯವಲ್ಲ.

ಸಾದತ್ ಹಸನ್ ಮಂಟೋರವರ ಕಥೆಯಿದು: ಒಮ್ಮೆ ನೆರೆಹೊರೆ­ಯಲ್ಲೆಲ್ಲ ಬೆಂಕಿ ಹತ್ತಿಕೊಂಡು ಎಲ್ಲವೂ ಉರಿದು ಬೂದಿಯಾಯಿತಂತೆ. ಬೆಂಕಿಗೆ ಆಹುತಿಯಾಗದೇ ಉಳಿದುಕೊಂಡದ್ದು ಒಂದು ಅಂಗಡಿ ಮತ್ತು ಅದರ ಮುಂದೆ ಇದ್ದ ಈ ಸಂಕೇತ, ಕಟ್ಟಡ ಮತ್ತು ನಿರ್ಮಾಣ ಕಾರ್ಯಕ್ಕೆ ಬೇಕಾದ ಎಲ್ಲ ಸಾಮಗ್ರಿಗಳು ಇಲ್ಲಿ ದೊರೆಯುತ್ತವೆ.

ಮಂಟೋರ ಕತೆಗೆ ಎಷ್ಟು ಸಾಂಕೇತಿಕ ಅರ್ಥಗಳಿವೆ!
ಒಂದು ಶಕ್ತಿಯು ತನ್ನ ಸ್ವರೂಪದಲ್ಲಿ ಒಳ್ಳೆಯದೂ ಆಗಿರುವುದಿಲ್ಲ, ಕೆಟ್ಟದ್ದೂ ಆಗಿರುವುದಿಲ್ಲ. ಅದು ಪ್ರಯೋಗಿಸುವವರ, ಉಪಯೋಗಿಸು­ವವರ ವಿವೇಚನೆ, ಪ್ರಜ್ಞೆಗೆ ಅನುಸಾರವಾಗಿ ಬಳಕೆಯಾಗುತ್ತಿರುತ್ತದೆ. ಆಗಿಂದಾಗ್ಗೆ ನಮ್ಮನ್ನು ನಾವು ನಿಷ್ಠುರವಾಗಿ, ಪ್ರಾಮಾಣಿಕವಾಗಿ ಪರೀಕ್ಷಿಸಿ­ಕೊಳ್ಳುವುದರಿಂದ ಆ ಶಕ್ತಿಯು ನಮ್ಮನ್ನು ಸುಲಭದ ದಾರಿಗೆ ಕರೆದು­ಕೊಂಡು ಹೋಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ವ್ಯಕ್ತಿಗೂ, ಸಾಹಿತ್ಯ ಪರಿಷತ್ತಿಗೂ, ಸಾಹಿತ್ಯ ಸಮ್ಮೇಳನಕ್ಕೂ ಅನ್ವಯಿಸುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT