ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ವರೆಗೆ ವರ್ಗಾವಣೆ ಇಲ್ಲ: ಸದಾನಂದ ಗೌಡ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಸುಳ್ಯ: ರಾಜಕೀಯ ಕಾರಣಕ್ಕೆ ಅಧಿಕಾರಿಗಳಿಗೆ ವರ್ಗಾವಣೆಯ ಕಿರುಕುಳ ನೀಡುವುದಿಲ್ಲ. ನಿರಂತರ ವರ್ಗಾವಣೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಮುಂದಿನ ಏಪ್ರಿಲ್‌ವರೆಗೆ ಕೆಳ ಹಂತದ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಸುಳ್ಯ ಸಮೀಪದ ದೇವರಗುಂಡದ ತಮ್ಮ ಮನೆಯಲ್ಲಿ ಮಂಗಳವಾರ ಕುಟುಂಬದವರ ಜತೆ ವಾರ್ಷಿಕ ದೈವ ನೇಮದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರ ಜತೆ ಅವರು ಮಾತನಾಡಿದರು.

ಖುದ್ದಾಗಿ 38 ಇಲಾಖೆಗಳ ಪ್ರಗತಿ ಪರಿಶೀಲಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ಇಟ್ಟಿರುವುದರಿಂದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಈವರೆಗೆ ಶೇ. 60ರಿಂದ 85ರಷ್ಟು ಪ್ರಗತಿ ಸಾಧಿಸುವುದು ಸಾಧ್ಯವಾಗಿದೆ.

ಉಳಿದ ಎರಡು ತಿಂಗಳೊಳಗೆ ಶೇ. 100ರಷ್ಟು ಹಣ ವಿನಿಯೋಗಿಸುವುದು ತಮ್ಮ ಗುರಿ. ಅದಕ್ಕಾಗಿ ಆಡಳಿತದ ಅಗತ್ಯಕ್ಕೆ ತಕ್ಕಂತೆ ಕೆಲವು ಐಎಎಸ್, ಐಪಿಎಸ್ ಅಧಿಕಾರಿಗಳ ಹೊರತಾಗಿ ಉಳಿದ ಯಾವ ಅಧಿಕಾರಿಗಳನ್ನೂ ವರ್ಗ ಮಾಡುವುದಿಲ್ಲ ಎಂದರು.

ಸಿಎಂಗೆ ದೈವಗಳ ಅಭಯ: ಮನೆತನದ ವಾರ್ಷಿಕ ನೇಮೋತ್ಸವದಲ್ಲಿ ರಕ್ತೇಶ್ವರಿ ಮತ್ತು ವಿಷ್ಣುಮೂರ್ತಿ ದೈವಗಳಿಗೆ ಮುಖ್ಯಮಂತ್ರಿ ಕುಟುಂಬ ಪೂಜೆ ಸಲ್ಲಿಸಿತು.

ದೈವಗಳೆರಡೂ ಮಲಯಾಳದಲ್ಲಿ ಮುಖ್ಯಮಂತ್ರಿಗೆ ರಾಜಕೀಯದಲ್ಲಿ ಶ್ರೇಯೋಭಿವೃದ್ಧಿ ಆಗಲಿದೆ ಎಂದು ಅಭಯ ನೀಡಿದವು. ನೇಮೋತ್ಸವ ನಿಮಿತ್ತ ಸಿಎಂ ಸಮ್ಮುಖದಲ್ಲಿ 20ಕ್ಕೂ ಅಧಿಕ ಕೋಳಿಗಳನ್ನು ಬಲಿ ಕೊಡಲಾಯಿತು.

ಮುಖ್ಯಮಂತ್ರಿ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಪೂರ್ಣವಾಗಿ ದೈವ ನೇಮೋತ್ಸವದಲ್ಲಿ ತೊಡಗಿಸಿಕೊಂಡರು. ಈ ಅವಧಿಯಲ್ಲಿ ಮೊಬೈಲ್ ಬಳಸಲಿಲ್ಲ, ಅಧಿಕಾರಿಗಳ ಜತೆಗೂ ಮಾತನಾಡಲಿಲ್ಲ. ನೇಮೋತ್ಸವದಲ್ಲಿ 4 ಗಂಟೆ ಕಾಲ ನಿಂತೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT