ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಪ್ರತಿಭೆಗಳ ಹಳ್ಳಿ ಪ್ರೀತಿ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಬ್ಬಿಯಿಂದ ದಕ್ಷಿಣಕ್ಕಿರುವ ಕೆ.ಜಿ.ಟೆಂಪಲ್‌ಗೆ ಹೋಗಿ,ಅಲ್ಲಿಂದ ಬಸವನಗುಡ್ಡೆ ಎಂದು ಕರೆಯಲ್ಪಡುವ ಒಂದೇ ಒಂದು ಮನೆಯಿರುವ ಊರನ್ನು ತಲುಪಿದಾಗ ಗಂಟೆ ಬೆಳಗಿನ ಎಂಟಾಗಿತ್ತು. ಆದರೂ ಇನ್ನೂ ಚುಮು ಚುಮು ಛಳಿಯಿತ್ತು.
 
ಎದುರಿಗೆ ಕಾಣುತ್ತಿದ್ದ ಮನೆಯ ಜಗಲಿಯ ಮೇಲೆ ಮಕ್ಕಳು ಮಾಡುತ್ತಿದ್ದ ಗಲಾಟೆಯ ಸದ್ದು ದೂರಕ್ಕೆ ಆ ಮನೆಯ ಸುತ್ತಲೂ ಇದ್ದ ಮರಗಳಲ್ಲಿ ಕೂತು ಕೂಗುತ್ತಿರುವ ಹಕ್ಕಿಗಳ ಚಿಲಿಪಿಲಿಯಂತೆ ಭಾಸವಾಗುತ್ತಿತ್ತು.

ಹತ್ತಿರವಾದಂತೆ ಮಕ್ಕಳ ಅಂಥ ಚಿಲಿಪಿಲಿಯ ಇಂಪನ್ನು ಆಸ್ವಾದಿಸುತ್ತಿರುವಂತೆ ಕಾಣುತ್ತಿದ್ದ ಕನ್ನಡಕಧಾರಿ ವ್ಯಕ್ತಿಯೊಬ್ಬರು ಜಗಲಿಯ ಮೂಲೆಯಲ್ಲಿ ಕುಳಿತು ಮಕ್ಕಳಿಗೆ ಏನನ್ನೋ ಹೇಳಿಕೊಡುತ್ತಿದ್ದುದು ಕಾಣತೊಡಗಿತು. ಪಾಠ ಕೇಳುತ್ತಿದ್ದ ಮಕ್ಕಳು ಐದರಿಂದ ಹತ್ತು ವರ್ಷಗಳೊಳಗಿನವರು. ಅಲ್ಲೇ ಸುತ್ತಮುತ್ತಲೂ ಇದ್ದ ಹಳ್ಳಿಗಳಲ್ಲಿ ಪ್ರೈಮರಿ ಅಥವಾ ಮಿಡ್ಲ್ ಸ್ಕೂಲ್ ಓದುತ್ತಿದ್ದವರು.

ಆದರೆ ಅವರುಗಳಿಗೆ ಪಾಠ ಹೇಳಿ ಕೊಡುತ್ತಿದ್ದವರು ಮಾತ್ರ ಕಲ್ಕತ್ತಾದ ಹತ್ತಿರದ ಕರಘ್‌ಪುರ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ (ಐಐಟಿ)ನಲ್ಲಿ ಡಿಗ್ರಿ ಪಡೆದು, ಬಾಂಬೆಯ ಐಐಟಿಯಲ್ಲಿ ಪಿ.ಹೆಚ್.ಡಿ.ಪಡೆದಿರುವವರು.

ಇವರ ಹೆಸರು ಡಾ.ಪ್ರದೀಪ್. ಇಲ್ಲಿಗೆ ಬಂದು ಐದು ವರ್ಷಗಳಾಗಿವೆ.ಇಲ್ಲಿಗೆ ಬರುವುದಕ್ಕೆ ಮೊದಲು ಕೆಲ ಕಾಲ ಮುಂಬೈನಲ್ಲಿ ನಂತರ ಒಂದಷ್ಟು ದಿನ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರದೀಪ್ ಪ್ರೊಫೆಸರ್ ಆಗಿದ್ದರು. ಪಾಠಕ್ಕೆ ಬರುವ ಮಕ್ಕಳಿಗೆ ಪ್ರದೀಪ್ ಶಾಲೆಯ ಪಠ್ಯಕ್ರಮದಂತೆ ಬೋಧಿಸುವುದಿಲ್ಲ. ಬದಲಿಗೆ ಮಕ್ಕಳು ತಮ್ಮ ಆಸಕ್ತಿಗೆ ಅನುಗುಣವಾಗಿ ಅನುಭವಿಸಿ ಕಲಿಯಲು ಪ್ರೇರೇಪಿಸುತ್ತಾರೆ.

ಹಾಗಾಗಿ ಇಲ್ಲಿ ಮಕ್ಕಳಿಗೆ ಆಟದೊಂದಿಗೆ ಪಾಠವೂ, ಇದರೊಂದಿಗೆ ಪ್ರಕೃತಿಯ ಬಗೆಗಿನ ಪ್ರೀತಿಯೂ, ಒಟ್ಟೊಟ್ಟಿಗೇ ಉಂಟಾಗುತ್ತದೆ. ಇಲ್ಲಿರುವ ಗ್ರಂಥಾಲಯದಲ್ಲಿ  ಅತ್ಯುತ್ತಮ ಮಕ್ಕಳ ಪುಸ್ತಕಗಳಿವೆ. ಅದೇ ರೀತಿ ಈ ಮಕ್ಕಳಿಗೆ ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ನೋಡುವ ಅನುಕೂಲವೂ ಇದೆ. ಇವೆಲ್ಲಕ್ಕೂ ಯಾವುದೇ ಶುಲ್ಕವಿಲ್ಲ.

ಡಾ. ಪ್ರದೀಪ್ ಅವರ ಪತ್ನಿ ಸರಯೂ ಕೂಡಾ ಕಲ್ಕತ್ತಾದ ಐಐಟಿಯಲ್ಲಿ ಓದಿದವರು. ಟಿ.ಸಿ.ಎಸ್.ಕಂಪನಿಯಲ್ಲಿ ಒಂದಷ್ಟು ದಿನ ಕೆಲಸ ಮಾಡಿದವರು.

ಈಗ ಇಬ್ಬರೂ ಗುಬ್ಬಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜೊಂದಕ್ಕೆ ವಾರಕ್ಕೆ ಎರಡು ದಿನ ಮಾತ್ರ ಪಾಠ ಮಾಡಲು ಹೋಗುತ್ತಾರೆ. ಎರಡೇ ದಿನ ಯಾಕೆ ಅಂತ ಕೇಳಿದರೆ,`ನಮಗೆ ಬೇಕಿರುವಷ್ಟು ಹಣವನ್ನು ಮಾತ್ರ ಸಂಬಳದ ರೂಪದಲ್ಲಿ ಪಡೆದುಕೊಳ್ಳುತ್ತೇವೆ, ಉಳಿದಂತೆ ನಮಗೆ ತೋಟದಲ್ಲೇ ಸಾಕಷ್ಟು ಕೆಲಸ ಇರುತ್ತೆ~ ಅನ್ನುವ ಇವರು ಕೃಷಿಯನ್ನೇ ಧ್ಯಾನಿಸುತ್ತಾ ಅದರ ಜೊತೆಗೆ ಗಿಡ ಮರ,ಪ್ರಾಣಿ ಪಕ್ಷಿಗಳ ಗೆಳೆಯರಾಗಲು ಹೊರಟಿರುವವರು. ಇದಕ್ಕೆ ಸಾಕ್ಷಿಯಾಗಿ ಇವರಿರುವ ಮನೆಯ ಎದುರು ಮತ್ತು ಸುತ್ತಲೂ ಇದ್ದ ಹೊಲದ ಎದೆಯಲ್ಲೊಂದು ಪುಟ್ಟ ಕಾಡು ಕಣ್ಬಿಡ ತೊಡಗಿದೆ.

ಈ ಪುಟ್ಟ ಕಾಡಿನ ನಡುವೆ ಇಂಥದೇ ಕನಸನ್ನು ಉಸಿರಾಡುತ್ತಿರುವ ಮತ್ತಿಬ್ಬರಿದ್ದಾರೆ. ಅವರುಗಳ ಹೆಸರು ಡಾ.ಪ್ರಶಾಂತ್ ಮತ್ತು ಡಾ.ಚಿತ್ರಾ. ಹಾಗೆ ನೋಡಿದರೆ ಇವರಿಬ್ಬರು ಪ್ರದೀಪ್ ಮತ್ತವರ ಹೆಂಡತಿ ಸರಯೂಗಿಂತ ಐದು ವರ್ಷಗಳ ಹಿಂದೆಯೇ ಇಲ್ಲಿಗೆ ಬಂದು ಗುಡಿಸಲೊಂದನ್ನು ಹಾಕಿಕೊಂಡು ಕೃಷಿ ಮಾಡಲು ಶುರು ಮಾಡಿದವರು. ಡಾ.ಪ್ರಶಾಂತ್ ಮದ್ರಾಸಿನ ಐಐಟಿಯಲ್ಲಿ ಓದಿ, ಅಮೆರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಪಿ.ಹೆಚ್.ಡಿ.ಮಾಡಿದ್ದಾರೆ.
 
ನಂತರ ಸೀದಾ ಈ ನೆಲಕ್ಕೆ ಬಂದ ಇವರು ಒಂದೆರಡು ವರ್ಷ ತುಮಕೂರಿನ ಎಸ್.ಐ.ಟಿ.ಯಲ್ಲಿ ಪಿ.ಹೆಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಈಗ ಅವರು ಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
 
ಅವರ ಪತ್ನಿ ಚೈತ್ರ ಇದೇ ಮದ್ರಾಸ್‌ನ ಐಐಟಿಯಲ್ಲಿ ಓದಿ ದಿಲ್ಲಿಯ ಐಐಟಿಯಿಂದ ಪಿ.ಹೆಚ್.ಡಿ.ಪಡೆದು ತಮ್ಮ ಕೃಷಿಯ ಬದುಕಿನ ಜೊತೆಗೆ ಅಗತ್ಯದ ಖರ್ಚಿಗಾಗಿ ಆಗಾಗ ಒಂದೆರಡು ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಶೈಕ್ಷಣಿಕ ಜೀವನದುದ್ದಕ್ಕೂ ವಿಜ್ಞಾನವನ್ನೂ ತಂತ್ರಜ್ಞಾನವನ್ನು ಧ್ಯಾನಿಸಿದ ಇವರು ಮಾಡುತ್ತಿರುವ ಕೃಷಿ ಮಾತ್ರ ಸಂಪೂರ್ಣ ಸಾಂಪ್ರದಾಯಿಕ ಅಥವಾ ಪರಿಸರ ಸ್ನೇಹಿ. ಕೃಷಿ  ಕ್ಷೇತ್ರದಲ್ಲಿ ಆಗುತ್ತಿರುವ ಆಧುನೀಕರಣವನ್ನು ಮರೆತೇ ಬಿಟ್ಟಂತೆ ಇವರು ನೆಲಕ್ಕೂ ಪರಿಸರಕ್ಕೂ ಕೇಡಿಲ್ಲದ ಒಣ ಬೇಸಾಯ ಪದ್ಧತಿ ಇವರದು.

ಇಲ್ಲಿರುವ ಯಾವುದೇ ಗಿಡ ಮರಕ್ಕೂ ಇವರು ನೀರನ್ನು ಹಾಕುವುದಿಲ್ಲ. ಅದೇ ರೀತಿ ಇಲ್ಲಿ ಹುಟ್ಟುವ ಯಾವುದೇ ಗಿಡವನ್ನು ಇವರು ಕಡಿದು ಹಾಕುವುದಿಲ್ಲ. ಹಾಗಾಗಿಯೇ ಇಲ್ಲಿ ಇವರೇ ಹಾಕಿ ಬೆಳಸಿದ ಅಪರೂಪದ ಗಿಡಗಳಿಂದ ಹಿಡಿದು, ಜಾಲಿ, ಲಕ್ಕೆ, ತಂಗಡೆ ಮುಂತಾದ ಕಾಡು ಗಿಡಗಳವರೆಗೂ ಅಪರೂಪದ ಸಸ್ಯರಾಶಿಗಳಿವೆ.

ತಿನ್ನಲು ಬೇಕಾಗುವಷ್ಟು ರಾಗಿ ಮುಂತಾದ ಕಿರುಧಾನ್ಯಗಳನ್ನು ಪಕ್ಕದಲ್ಲಿ ಅದಕ್ಕಾಗೇ ಬಿಟ್ಟುಕೊಂಡಿರುವ ಹೊಲದಲ್ಲಿ ಬೆಳೆದುಕೊಳ್ಳುವ ಇವರು ಇನ್ನುಳಿದಂತೆ ಈ ಗಿಡ ಮರಗಳಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ.

ತಾವು ಬಂದು ನೆಲೆಸಿದ ಮೇಲೆ ಇದರೊಳಗಿನ ಒಂದೇ ಒಂದು ಗಿಡವನ್ನೂ ಕಡಿಯದ ಇವರು ಮುಂದೊಂದು ದಿನ ಇದೇ ಗಿಡಗಳು ದೊಡ್ಡ ಕಾಡಾಗಿ, ಅದು ಅಪಾರ ಪ್ರಾಣಿ ಪಕ್ಷಿಗಳಿಗೆ ಮನೆಯಾಗುವುದನ್ನು ಕನಸುತ್ತಿದ್ದಾರೆ. ಇಲ್ಲಿನ ಒಂದೊಂದೂ ಗಿಡವನ್ನೂ ಮುಟ್ಟಿ ಮಾತನಾಡಿಸುವ ಇವರುಗಳು ಕೇಳಿದರೆ ಅವುಗಳ ಇತಿಹಾಸವನ್ನೇ ಹೇಳುತ್ತಾರೆ.

ಇಂಥ ಇವರ ಕನಸುಗಳನ್ನು ಪೊರೆಯಲು ನೆರವಾಗುತ್ತಿರುವುದು ಇವರ ಅತ್ಯಂತ ಸರಳ ಬದುಕು.ಏಕೆಂದರೆ ಇವರು ಇದುವರೆಗೂ ಇಲ್ಲಿಗೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿಲ್ಲ. ಮನೆಯ ದೀಪಗಳಿಗೆ ಸೋಲಾರ್ ಬೆಳಕನ್ನೇ ನಂಬಿದ್ದಾರೆ. ಕುಡಿಯುವ ನೀರಿನ ಸಲುವಾಗಿ ಕೊರೆಸಿರುವ ಒಂದೇ ಒಂದು ಬೋರ್‌ವೆಲ್‌ಗೆ ಕೂಡಾ ಕೈ ಪಂಪು ಹಾಕಿಸಿಕೊಂಡು, ಅದರಿಂದ ಒತ್ತಿಯೇ ಮನೆಗೆ ಆಗುವಷ್ಟು ನೀರನ್ನು ಪಡೆದುಕೊಳ್ಳುತ್ತಾರೆ.

ಅದೇ ರೀತಿ ಇವರುಗಳು ಕಾರು, ಬೈಕು ಮುಂತಾದ ಯಾವುದೇ ವಾಹನಗಳಿಗೂ ಶರಣಾಗಿಲ್ಲ, ಬದಲಿಗೆ ಸೈಕಲ್ಲುಗಳನ್ನು ಬಳಸುತ್ತಾರೆ. ಟಿ.ವಿ. ಕಾಟವಂತೂ ಇಲ್ಲವೇ ಇಲ್ಲ. ಸಾಕಷ್ಟು ಸೌದೆಯ ಲಭ್ಯತೆ ಇದ್ದರೂ ಅಡಿಗೆಗೆ ಹೆಚ್ಚಾಗಿ ಸೋಲಾರ್ ಕುಕ್ಕರ್‌ಗಳನ್ನೇ ಬಳಸುತ್ತಾರೆ.

ಇವರ ಈ ಕಾಡಿನ ತೋಟವನ್ನು ಹೊಕ್ಕ ಕೂಡಲೇ ಕಣ್ಣಿಗೆ ಕಾಣುವ ದನ ಕರು, ನಾಯಿ ಬೆಕ್ಕು, ದನದ ಕೊಟ್ಟಿಗೆ, ಹುಲ್ಲಿನ ಮೆದೆ ಮುಂತಾದವುಗಳಿಂದಾಗಿ ಯಾವುದೋ ದೇಸೀ ಬದುಕೊಂದಕ್ಕೆ ಎದುರಾದಂತೆ ಆಗುತ್ತದೆ. ಸಾಲದ್ದಕ್ಕೆ ಥರಾವರಿ ಹಕ್ಕಿಗಳು, ಅವುಗಳ ಚಿಲಿಪಿಲಿ ಕಿವಿಗಳನ್ನು ತುಂಬಿಕೊಳ್ಳುತ್ತದೆ.
 
ಇಂಥದ್ದೊಂದು ನಿರುಮ್ಮಳ ಬದುಕನ್ನು ಸಾಕಾರಗೊಳಿಸಲು ಯತ್ನಿಸುತ್ತಿರುವ ಇವರುಗಳೊಳಗೆ ಸ್ವಂತ ಆಸ್ತಿಯ ಪರಿಕಲ್ಪನೆ ಇಲ್ಲ. ಏಕೆಂದರೆ ಈ ಜಾಗ ಪ್ರದೀಪ್ ಅವರ ತಾತನಿಗೆ ಸೇರಿದ್ದು. ಓದುವ ಕಾಲಕ್ಕೆ ಹಳ್ಳಿಗೆ ಹೋಗಿ ಕೃಷಿಯನ್ನು ಮಾಡುವ ಉಮೇದಿದ್ದ ಪ್ರಶಾಂತ್ ಮತ್ತು ಚಿತ್ರಾರಿಗೆ ಪ್ರದೀಪ್ ಪರಿಚಯವಾದ ಮೇಲೆ ಇಲ್ಲಿಗೆ ಬಂದು ಬದುಕತೊಡಗಿದ್ದಾರೆ.
 
ಈ ನೆಲ ನಮ್ಮದು,ನಮಗೇ ಸೇರಿದ್ದು ಅನ್ನುವುದಕ್ಕಿಂತ ಇದು ಸಮಾಜಕ್ಕೆ ಸೇರಿದ್ದು, ಅದೇ ರೀತಿ ಸಮಾಜ ಅಂದರೆ ಕೇವಲ ವ್ಯಕ್ತಿಗಳಲ್ಲ, ಅನ್ನುವ ನಂಬಿಕೆಯ ಇವರುಗಳು ಈ ನೆಲದಲ್ಲಿ ಉಂಟಾಗಬಹುದಾದ ಪರಿಸರದ ವಿಸ್ಮಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆಯೇ ಹೊರತು,ಇದರ ಮೇಲಿನ ಹಕ್ಕಿಗಾಗಿ ಅಲ್ಲ.

ಬೆಳಗಿನಿಂದ ಸಂಜೆಯವರೆಗೆ ದನ ಕರುಗಳನ್ನು ಮೇಯಿಸುತ್ತಲೋ, ಗಿಡ ಮರಗಳನ್ನು ಒಪ್ಪ ಮಾಡುತ್ತಲೋ, ಸಿಕ್ಕ ಪುಸ್ತಕಗಳನ್ನು ಓದುತ್ತಲೋ,ಸದಾ ಚಟುವಟಿಕೆಯಿಂದಿರುವ ಇವರುಗಳು ತಮ್ಮ ಅಪಾರ ವೈಜ್ಞಾನಿಕ ಬುದ್ಧಿವಂತಿಕೆಯ ಜೊತೆಗೆ ಫುಕುವುಕಾನ ಕೃಷಿಯ ಧ್ಯಾನವನ್ನೂ,ಸಲೀಂ ಅಲಿಯ ಪಕ್ಷಿ ಪ್ರೀತಿಯನ್ನೂ, ಸಾಲದ್ದಕ್ಕೆ ಸಾಹಿತ್ಯದ ಸಣ್ಣ ಸೂಕ್ಷ್ಮವನ್ನೂ, ಅದು ಕೊಡುವ ವಿಶಿಷ್ಠ ಗ್ರಹಿಕೆಯನ್ನೂ ದಕ್ಕಿಸಿಕೊಂಡು ಆಧುನಿಕ ಸಮಾಜದ ಕೃತಕ ಬದುಕಿನ ಚೌಕಟ್ಟಿನಾಚೆ ನಿಂತು,ಅದರ ಸಕಲ ರಗಳೆಗಳಿಗೂ ತಣ್ಣಗೆ ಉತ್ತರ ಕೊಡುತ್ತಿರುವವರಂತೆ,ನಿಜದ ಬದುಕನ್ನು ನಿಲುಕಿಸಲು ಯತ್ನಿಸುತ್ತಿರುವ ಇವರುಗಳ ಕನಸು, ಹುಮ್ಮಸ್ಸುಗಳನ್ನು ನೋಡಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ.

ಇವರಿಗೆ ಜಗತ್ತಿನ ಜಗತ್ತಿನ ಶ್ರೇಷ್ಠ ಸಾಹಿತ್ಯ ಗೊತ್ತು, ಸಂಗೀತ ಗೊತ್ತು,ಕೃಷಿ ವಿಧಾನಗಳು ಗೊತ್ತು,ಶಿಕ್ಷಣ ಪದ್ಧತಿ ಗೊತ್ತು. ಇವೆಲ್ಲದರ ಬಗ್ಗೆ ಮಾತನಾಡುತ್ತಲೇ ಇಲ್ಲಿ ಬೆಳೆದಿರುವ ಒಂದೊಂದು ಬಗೆಯ ಹುಲ್ಲಿನ ಬಗ್ಗೆ, ಇಲ್ಲಿ ಕೂಗುವ ಒಂದೊಂದು ಪಕ್ಷಿಯ ಬಗ್ಗೆ,ಇಲ್ಲಿ ಹರಿದಾಡುವ ಒಂದೊಂದು ಹಾವಿನ ಬಗ್ಗೆ,ಇಲ್ಲಿನ ಮಣ್ಣಿನ ಗುಣದ ಬಗ್ಗೆಯೂ ನಿಖರವಾಗಿ ಮಾತನಾಡಬಲ್ಲ ಇವರುಗಳು ಒಂದು ರೀತಿಯಲ್ಲಿ ನಿಜವಾದ ಕಾಡಿನ ಮಕ್ಕಳು. ಸಹಜ ಬದುಕಿನ ಬನಿಯತ್ತ ಹರಿಯಲು ತವಕಿಸುತ್ತಿರುವ ಜೀವಂತ ತೊರೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT